416ನೇ ಮೈಸೂರು ದಸರಾ: ಇತಿಹಾಸದಲ್ಲೇ ಮೊದಲು, ನಾಡಹಬ್ಬದಲ್ಲಿ ಒಂದಾಗಲಿದೆ ಇಡೀ ಸ್ಯಾಂಡಲ್‌ವುಡ್
x

ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ನಟ ಅನಂತನಾಗ್ ಅವರ ಹೆಸರು ಪ್ರಸ್ತಾಪವಾಗಿದೆ. ಈ ಕುರಿತು ಶೀಘ್ರ ಮಾತುಕತೆ ನಡೆಸಲಾಗುವುದು ಎಂದು ಸಾ.ರಾ. ಗೋವಿಂದು ತಿಳಿಸಿದ್ದಾರೆ.

416ನೇ ಮೈಸೂರು ದಸರಾ: ಇತಿಹಾಸದಲ್ಲೇ ಮೊದಲು, ನಾಡಹಬ್ಬದಲ್ಲಿ ಒಂದಾಗಲಿದೆ ಇಡೀ ಸ್ಯಾಂಡಲ್‌ವುಡ್

ಕನ್ನಡ ಚಿತ್ರರಂಗದ ಸುದೀರ್ಘ ಇತಿಹಾಸ, ಮಾಡಿರುವ ಸಾಧನೆಗಳು ಹಾಗೂ ಅದರ ಹಂತಹಂತವಾದ ಬೆಳವಣಿಗೆಯನ್ನು ನಾಡಿನ ಜನತೆಗೆ ಪರಿಚಯಿಸುವ ಸದುದ್ದೇಶದಿಂದ ದಸರಾ ಮಹೋತ್ಸವದ ಅಂಗವಾಗಿ ವಿಶೇಷ ಎಲ್‌ಇಡಿ ಪ್ರದರ್ಶನ ಆಯೋಜಿಸಲಾಗುತ್ತಿದೆ.


Click the Play button to hear this message in audio format

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ 416ನೇ ದಸರಾ ಆಚರಣೆ ಕನ್ನಡಿಗರಿಗೆ ಹಾಗೂ ಸಿನಿಪ್ರಿಯರಿಗೆ ಅತ್ಯಂತ ವಿಶೇಷವಾಗಿರಲಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಡೀ ಕನ್ನಡ ಚಿತ್ರರಂಗವು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಒಗ್ಗೂಡಿ ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ.

ಈ ಬಾರಿಯ ದಸರಾ ಉತ್ಸವವನ್ನು ಕನ್ನಡದ ಹೆಮ್ಮೆಯ ಹಿರಿಯ ನಟ ಅನಂತನಾಗ್ ಅವರ ಕೈಯಿಂದ ಉದ್ಘಾಟನೆ ಮಾಡಿಸಬೇಕು ಎಂಬ ಆಶಯವನ್ನು ಕನ್ನಡ ಚಿತ್ರರಂಗದ ಹಿರಿಯ ಮುಖಂಡ ಸಾ.ರಾ. ಗೋವಿಂದು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅನಂತನಾಗ್ ಅವರೊಂದಿಗೆ ಅಧಿಕೃತವಾಗಿ ಮಾತುಕತೆ ನಡೆಸಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಅಧ್ಯಕ್ಷೆ ಜಯಮಾಲ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ದಸರಾ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ನೀಡಲಿರುವ ವಿಶೇಷ ಮೆರಗಿನ ಬಗ್ಗೆ ವಿವರಿಸಿದರು.

ಎಲ್‌ಇಡಿ ಪ್ರದರ್ಶನ, ಚಿತ್ರೀಕರಣ ಸ್ಥಗಿತ

ಕನ್ನಡ ಚಿತ್ರರಂಗದ ಸುದೀರ್ಘ ಇತಿಹಾಸ, ಮಾಡಿರುವ ಸಾಧನೆಗಳು ಹಾಗೂ ಅದರ ಹಂತಹಂತವಾದ ಬೆಳವಣಿಗೆಯನ್ನು ನಾಡಿನ ಜನತೆಗೆ ಪರಿಚಯಿಸುವ ಸದುದ್ದೇಶದಿಂದ ದಸರಾ ಮಹೋತ್ಸವದ ಅಂಗವಾಗಿ ವಿಶೇಷ ಎಲ್‌ಇಡಿ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಚಿತ್ರರಂಗದ ಎಲ್ಲಾ ಸ್ತರದ ಕಲಾವಿದರು ಈ ಸಂಭ್ರಮದಲ್ಲಿ ಯಾವುದೇ ಅಡೆತಡೆಯಿಲ್ಲದೆ ಪಾಲ್ಗೊಳ್ಳಲು ಅನುಕೂಲವಾಗುವಂತೆ, ಎರಡು ದಿನಗಳ ಕಾಲ ರಾಜ್ಯಾದ್ಯಂತ ನಡೆಯುತ್ತಿರುವ ಎಲ್ಲಾ ಸಿನಿಮಾಗಳ ಚಿತ್ರೀಕರಣವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಹಿರಿಯ ಹಾಗೂ ಕಿರಿಯ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಚಿತ್ರರಂಗದ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಈ ಬೃಹತ್ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ವಹಿಸಲಾಗಿದೆ. ಈ ಐತಿಹಾಸಿಕ ಅವಕಾಶವನ್ನು ಕಲ್ಪಿಸಿಕೊಟ್ಟ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ವಾಣಿಜ್ಯ ಮಂಡಳಿ ಪರವಾಗಿ ಜಯಮಾಲ ಅವರು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು.

ಅಂಬಾರಿ ಬಸ್‌ನಲ್ಲಿ ಅರಮನೆ ವೀಕ್ಷಣೆ ಹಾಗೂ ಬಿಗಿ ಭದ್ರತೆ

ಬೆಳ್ಳಿಪರದೆಯ ಮೇಲೆ ಕಂಗೊಳಿಸುವ ಕಲಾವಿದರಿಗೆ ಈ ಬಾರಿ ದಸರಾ ಮಹೋತ್ಸವದಲ್ಲಿ ವಿಶೇಷ ರಾಜಾತಿಥ್ಯ ಸಿಗಲಿದೆ. ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಾ.ರಾ. ಗೋವಿಂದು, ಕಲಾವಿದರ ಅನುಕೂಲಕ್ಕಾಗಿ ಎರಡು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, 'ಅಂಬಾರಿ' ಬಸ್ ಮೂಲಕ ಅರಮನೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಅರಮನೆಯ ಒಳಭಾಗದಲ್ಲಿ ಸುಮಾರು 150 ಪ್ರಮುಖ ಕಲಾವಿದರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಉಳಿದ ಕಲಾವಿದರಿಗೆ ಅರಮನೆಯ ವಿಶಾಲವಾದ ಅಂಗಳದಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಈ ಬಾರಿಯ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಜನಸಾಗರವೇ ಹರಿದುಬರುವ ನಿರೀಕ್ಷೆ ಇದೆ. ಹಾಗಾಗಿ, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ, ಕಲಾವಿದರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು

ಪ್ರತಿವರ್ಷ ದಸರಾ ಸಂದರ್ಭದಲ್ಲಿ ಚಲನಚಿತ್ರೋತ್ಸವವನ್ನು ಆಯೋಜಿಸುವುದು ವಾಡಿಕೆ. ಆದರೆ, ಈ ಬಾರಿ ಅದಕ್ಕೆ ತಗುಲುವ ವೆಚ್ಚವನ್ನು ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಬಳಸಲು ಸಲಹೆ ನೀಡಲಾಗಿದೆ. ಚಿತ್ರರಂಗದ ಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಮಾಡುವ ಈ ಮಹತ್ವದ ಉದ್ದೇಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಗ್ಗೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ದಸರಾದಲ್ಲಿ ಭಾಗವಹಿಸಲು ಸರ್ಕಾರವೇ ಆಹ್ವಾನ ನೀಡಿರುವುದು ಚಿತ್ರರಂಗಕ್ಕೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಒಗ್ಗಟ್ಟಿಲ್ಲ ಎಂಬ ಟೀಕೆಗಳಿಗೆ ಈ ಬಾರಿಯ ದಸರಾ ತಕ್ಕ ಉತ್ತರ ನೀಡಲಿದ್ದು, ಚಿತ್ರರಂಗದ ಒಗ್ಗಟ್ಟು ಮತ್ತು ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಗೋಷ್ಠಿಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ. ರಾಮಮೂರ್ತಿ, ಭಾ.ಮ. ಹರೀಶ್, ಉಪಾಧ್ಯಕ್ಷರಾದ ಸುಂದರರಾಜ್, ಕೆ. ಮಂಜು, ಕಾರ್ಯದರ್ಶಿ ಎ. ಗಣೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Read More
Next Story