ಪದ್ಮ ಪ್ರಶಸ್ತಿ ಸಮಾರಂಭದ ಬೆನ್ನಲ್ಲೇ ಆರೋಗ್ಯದ ಬಗ್ಗೆ ಮೌನ ಮುರಿದ ಅಲ್ಕಾ ಯಾಗ್ನಿಕ್
x

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಲ್ಕಾ ಯಾಗ್ನಿಕ್ ಪ್ರಶಸ್ತಿ ಸ್ವೀಕರಿಸಿದರು. 

ಪದ್ಮ ಪ್ರಶಸ್ತಿ ಸಮಾರಂಭದ ಬೆನ್ನಲ್ಲೇ ಆರೋಗ್ಯದ ಬಗ್ಗೆ ಮೌನ ಮುರಿದ ಅಲ್ಕಾ ಯಾಗ್ನಿಕ್

ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಶ್ಯಕ್ತರಾಗಿ ಕಂಡ ಅಲ್ಕಾ ಯಾಗ್ನಿಕ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ಅಪರೂಪದ ಶ್ರವಣ ದೋಷದಿಂದ ತಾವು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಗಾಯಕಿ ತಿಳಿಸಿದ್ದಾರೆ.


Click the Play button to hear this message in audio format

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಭೂಷಣ' ಗೌರವವನ್ನು ಸ್ವೀಕರಿಸಲು ಖ್ಯಾತ ಹಿರಿಯ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಆಗಮಿಸಿದ್ದರು. ಅಪರೂಪದ ಶ್ರವಣದೋಷದ ಸಮಸ್ಯೆಯ ವಿರುದ್ಧ ಹೋರಾಡುತ್ತಿರುವ ಅವರು, ಸುದೀರ್ಘ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಆದರೆ ಸಮಾರಂಭದಲ್ಲಿ ಅವರು ತೀರಾ ನಿಶ್ಯಕ್ತರಾಗಿ ಮತ್ತು ದರ್ಬಲರಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಅವರ ಆರೋಗ್ಯದ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ನಡೆದು ಬರುವಾಗ ಅಲ್ಕಾ ಯಾಗ್ನಿಕ್ ಅವರು ಸರಿಯಾಗಿ ನಡೆಯಲಾಗದೆ ಸ್ವಯಂಸೇವಕರೊಬ್ಬರ ಸಹಾಯ ಪಡೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೋಗಳನ್ನು ನೋಡಿ ಕಂಗಾಲಾಗಿದ್ದ ಅಭಿಮಾನಿಗಳ ಆತಂಕಕ್ಕೆ ಇದೀಗ ಸ್ವತಃ ಅಲ್ಕಾ ಯಾಗ್ನಿಕ್ ಅವರೇ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಅವರು, ಕಳೆದ ಎರಡು ವರ್ಷಗಳಿಂದ ತಾವೇಕೆ ಸಾರ್ವಜನಿಕ ಜೀವನದಿಂದ ಮತ್ತು ಬೆಳಕಿನ ಜಗತ್ತಿನಿಂದ ದೂರವಿದ್ದೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮಗೆ ಎದುರಾಗಿದ್ದ ಕಠಿಣ ಆರೋಗ್ಯದ ಪರಿಸ್ಥಿತಿಯಲ್ಲಿ ಅಭಿಮಾನಿಗಳು ನೀಡಿದ ಪ್ರೀತಿ, ಪ್ರಾರ್ಥನೆ ಹಾಗೂ ಬೆಂಬಲವೇ ತಮಗೆ ಶಕ್ತಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ದೇಶದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತಿರುವುದಾಗಿ ತಿಳಿಸಿರುವ ಅವರು, ಈ ಗೌರವ ಕೇವಲ ತಮ್ಮದಲ್ಲ, ಬದಲಿಗೆ ತಮ್ಮ ಧ್ವನಿಯನ್ನು ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಬರಮಾಡಿಕೊಂಡ ಪ್ರತಿಯೊಬ್ಬ ಕೇಳುಗರಿಗೆ ಸೇರಿದ್ದಾಗಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಪ್ರಸ್ತುತ ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ಗಾಯಕಿ, ತಾವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಹಳೆಯ ಲಯಕ್ಕೆ ಮರಳಲು ಪ್ರಯತ್ನಿಸುತ್ತಿರುವುದಾಗಿ ಭರವಸೆ ನೀಡಿದ್ದಾರೆ. ಈ ವಿಶೇಷ ಕ್ಷಣವು ಕೇವಲ ತಮ್ಮ ಸಾಧನೆಗೆ ಸಿಕ್ಕ ಮನ್ನಣೆಯಲ್ಲ, ಬದಲಿಗೆ ಭರವಸೆ ಮತ್ತು ಧೈರ್ಯದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ 2024ರಲ್ಲಿ ತಮಗೆ ಇದ್ದಕ್ಕಿದ್ದಂತೆ ವೈರಲ್ ಅಟ್ಯಾಕ್ ಆದ ಕಾರಣದಿಂದಾಗಿ 'ಸೆನ್ಸೊರಿನೂರಲ್ ಹಿಯರಿಂಗ್ ಲಾಸ್' ಎಂಬ ಅಪರೂಪದ ಶ್ರವಣ ದೋಷದ ಕಾಯಿಲೆ ಕಾಣಿಸಿಕೊಂಡಿರುವುದಾಗಿ ಅಲ್ಕಾ ಯಾಗ್ನಿಕ್ ಬಹಿರಂಗಪಡಿಸಿದ್ದರು. ವಿಮಾನದಿಂದ ಕೆಳಗಿಳಿಯುವಾಗ ಇದ್ದಕ್ಕಿದ್ದಂತೆ ಕಿವಿ ಕೇಳಿಸದಂತಾಗಿದ್ದ ಘಟನೆಯನ್ನು ನೆನೆದಿದ್ದ ಅವರು, ಅತಿಯಾದ ಸೌಂಡ್ ಹಾಗೂ ಹೆಡ್‌ಫೋನ್‌ಗಳ ಬಳಕೆಯ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಬಾಲಿವುಡ್‌ನ ನೂರಾರು ಸೂಪರ್‌ಹಿಟ್ ಗೀತೆಗಳಿಗೆ ಧ್ವನಿಯಾಗಿರುವ ಅಲ್ಕಾ ಯಾಗ್ನಿಕ್ ಅವರು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಲಿ ಎಂದು ದೇಶಾದ್ಯಂತ ಇರುವ ಅವರ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Read More
Next Story