ಬಾಲಿವುಡ್ ನಟಿ ಆಲಿಯಾ ಭಟ್ ಅಧಿಕೃತವಾಗಿ 'ತುಂಭಾಡ್ 2' ಚಿತ್ರದ ಭಾಗವಾಗಿದ್ದಾರೆ.
'ತುಂಭಾಡ್ 2'ಗೆ ಆಲಿಯಾ ಭಟ್ ಅಧಿಕೃತ ಎಂಟ್ರಿ
2018ರ ಕಲ್ಟ್ ಹಾರರ್ ಸಿನಿಮಾ 'ತುಂಭಾಡ್' ಸೀಕ್ವೆಲ್‌ಗೆ ಆಲಿಯಾ ಭಟ್ ಸೇರ್ಪಡೆಯಾಗಿದ್ದಾರೆ. ಈ ಚಿತ್ರಕ್ಕೆ ಒಪ್ಪಿಗೆ ನೀಡಲು ಕಾರಣವೇನು ಎಂಬುದನ್ನು ನಟಿ ಸ್ವತಃ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಆಲಿಯಾ ಭಟ್ ಅಧಿಕೃತವಾಗಿ 'ತುಂಭಾಡ್ 2' ಚಿತ್ರದ ಭಾಗವಾಗಿದ್ದಾರೆ. 2018ರಲ್ಲಿ ಬಿಡುಗಡೆಯಾಗಿ ಕಲ್ಟ್ ಹಾರರ್ ಸಿನಿಮಾವಾಗಿ ಗುರುತಿಸಿಕೊಂಡಿದ್ದ ತುಂಭಾಡ್ ಚಿತ್ರದ ಸೀಕ್ವೆಲ್‌ನಲ್ಲಿ ಆಲಿಯಾ ನಟಿಸಲಿರುವುದನ್ನು ಚಿತ್ರದ ನಾಯಕ ಹಾಗೂ ನಿರ್ಮಾಪಕ ಸೋಹಮ್ ಶಾ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ. ಈ ಸುದ್ದಿಯಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ.
ಸೋಹಮ್ ಶಾ ಸ್ವಾಗತ
ಸೋಹಮ್ ಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಭಟ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, "ಹೊಸ ಅಧ್ಯಾಯ ಆರಂಭವಾಗಿದೆ. ತುಂಭಾಡ್ 2 ಕುಟುಂಬಕ್ಕೆ ಸ್ವಾಗತ" ಎಂದು ಬರೆದು ನಟಿಯನ್ನು ಬರಮಾಡಿಕೊಂಡಿದ್ದಾರೆ. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆಲಿಯಾ ಭಟ್ ಒಪ್ಪಿಗೆ ನೀಡಿದ್ದೇಕೆ?
ತುಂಭಾಡ್ 2 ಚಿತ್ರಕ್ಕೆ ಏಕೆ ಒಪ್ಪಿಕೊಂಡೆ ಎಂಬುದನ್ನು ಹಂಚಿಕೊಂಡಿರುವ ಆಲಿಯಾ ಭಟ್, "ವರ್ಷಗಳ ನಂತರವೂ ಮನಸ್ಸಿನಲ್ಲಿ ಉಳಿಯುವ ಅಪರೂಪದ ಸಿನಿಮಾಗಳಲ್ಲಿ ತುಂಭಾಡ್ ಒಂದು. ಆ ಚಿತ್ರದ ಜಗತ್ತು, ಕಥೆ ಮತ್ತು ಅದರ ವಾತಾವರಣ ನನ್ನ ಮೇಲೆ ಆಳವಾದ ಪ್ರಭಾವ ಬೀರಿತ್ತು. ಇಂತಹ ಅದ್ಭುತ ಫ್ರಾಂಚೈಸಿಯ ಭಾಗವಾಗುವುದು ನನಗೆ ತುಂಬಾ ಉತ್ಸಾಹದ ಸಂಗತಿ" ಎಂದು ಹೇಳಿದ್ದಾರೆ.
ನಿರೀಕ್ಷೆ ಹೆಚ್ಚಿಸಿದ ಸೀಕ್ವೆಲ್
ತುಂಭಾಡ್ ಚಿತ್ರದ ಮೊದಲ ಭಾಗವು ಭಯಾನಕ ಕಥಾಹಂದರ, ಪೌರಾಣಿಕ ಅಂಶಗಳು ಮತ್ತು ವಿಭಿನ್ನ ದೃಶ್ಯ ನಿರೂಪಣೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಇದೀಗ ಆಲಿಯಾ ಭಟ್ ಸೇರ್ಪಡೆಯೊಂದಿಗೆ ತುಂಭಾಡ್ 2 ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಿದ್ದು, ಈ ಚಿತ್ರ ಭಾರತೀಯ ಹಾರರ್ ಸಿನಿಮಾಗಳಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂಬ ನಿರೀಕ್ಷೆ ಮೂಡಿದೆ.

