ತುಳುವಿನಲ್ಲಿ ಹೊಸತನದ ಸಿನಿಮಾ 90ಎಮ್ಎಲ್ -ಬಲೇ ಕುಲ್ಲುಗ!
x

90ML ಬಲೇ ಕುಲ್ಲುಗ ಸಿನಿಮಾ

ತುಳುವಿನಲ್ಲಿ ಹೊಸತನದ ಸಿನಿಮಾ 90ಎಮ್ಎಲ್ -ಬಲೇ ಕುಲ್ಲುಗ!

ತುಳು ಚಿತ್ರರಂಗದ ಏಕತಾನತೆ ಮುರಿದ '90ML- ಬಲೇ ಕುಲ್ಲುಗ'. ಮದ್ಯಪಾನದ ದುಷ್ಪರಿಣಾಮ ಹಾಗೂ ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾ ಕರಾವಳಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.


Click the Play button to hear this message in audio format

ತುಳು ಚಿತ್ರರಂಗದಲ್ಲಿ ಏಕತಾನತೆಯ ಕಾಮಿಡಿ ಸಿನಿಮಾಗಳು ಬರುತ್ತಿವೆ ಎಂಬ ಅಪವಾದ ಹೋಗಲಾಡಿಸಲು "90ML- ಬಲೇ ಕುಲ್ಲುಗ " ಎಂಬ ಸಿನಿಮಾ ಬಂದಿದೆ.

ತುಳುವಿನ ಸಿನಿಮಾಗಳಿಗೆ ಸಾಮಾನ್ಯವಾಗಿ ಮಲಯಾಳಂ ಮತ್ತು ತಮಿಳು ಸಿನಿಮಾಗಳ ಕಾಪಿ ಎಂಬ ಮಾತು ಇತ್ತೀಚೆಗೆ ಕೇಳಿ ಬರುತ್ತಿತ್ತು. ಆದರೆ ಅದನ್ನು ಮೀರಿ ಈ ಸಿನಿಮಾ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಮೂಲಕ ತುಳು ಸಿನಿಮಾರಂಗದಲ್ಲಿ ಕೂಡಾ ಸ್ಟ್ಯಾಂಡರ್ಡ್ ಸಿನಿಮಾ ನಿರ್ಮಾಣ ಮಾಡಬಹುದು ಎಂದು ಚಿತ್ರ ತಂಡ ಸಂದೇಶ ರವಾನಿಸಿದೆ.

ಒಂದು ಸಾಮಾಜಿಕ ಪಿಡುಗಾದ ಮದ್ಯಪಾನದ ಆಧಾರದಲ್ಲಿರುವ ಸಿನಿಮಾದ ಕತೆ, ಸರಕಾರದ ಮದ್ಯಪಾನ ಸಂಯಮ ಮಂಡಳಿಗೆ ಡಾಕ್ಯುಮೆಂಟರಿ ಅನಿಸಬಹುದು. ಅದರ ಜೊತೆಗೆ ಸಿನಿಮಾವನ್ನು ಗಂಭೀರವಾಗಿ ತೆಗೆದು ಕೊಂಡವರು ಬದಲಾಗಬಹುದು!.

ಕಥೆಯ ಸಾರಾಂಶ

ಕುಡಿತದಿಂದ ಸಂಸಾರದಲ್ಲಿ ಆಗುವ ಪರಿಣಾಮಗಳು ಮತ್ತು ಕುಡುಕ ಸ್ನೇಹಿತರು ಕೂಡಾ ಕಷ್ಟದಲ್ಲಿ ನೇರವಾಗುತ್ತಾರೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ. ಜೊತೆಗೆ ಕುಡುಕರ ಅಪದ್ಧಗಳನ್ನು ಚಿತ್ರಿಸಲಾಗಿದೆ. ಒಂದು ಹಂತಕ್ಕೆ ಕಥೆ ಬೇರೆ ಭಾಷೆಗಳಲ್ಲಿ ಬಂದಿದೆ ಎಂದನಿಸಿದರೂ, ಕಥೆಯಲ್ಲಿ ಸ್ವಂತಿಕೆ ಇದೆ ಅನ್ನಿಸುವಂತಿದೆ.

ಒಂದು ಕುಟುಂಬದಲ್ಲಿ ಹಿರಿಯರು ಮಕ್ಕಳೆದುರಿಗೆ ಮದ್ಯಪಾನ ಮಾಡುತ್ತಾರೆ ಮತ್ತು ಅದರ ಹ್ಯಾಂಗೋವರ್ ತೋರಿಸುತ್ತಾರೆ ಎಂದಾದರೆ ಮಕ್ಕಳು ಕೂಡಾ ಚಟಕ್ಕೆ ಬೀಳುತ್ತಾರೆ ಎಂದು ಸಿನಿಮಾ ಆರಂಭದಲ್ಲಿ ತೋರಿಸಲಾಗಿದೆ.

ಹೊಸಬರು

ನಿರ್ದೇಶಕ ರಂಜಿತ್ ಸಿ. ಬಜಾಲ್ ಗೆ ಇದು ಚೊಚ್ಚಲ ನಿರ್ದೇಶನ. ಆದರೆ ಅನುಭವೀ ನಿರ್ದೇಶಕನ ಜಾಣ್ಮೆ ಇಲ್ಲಿ ಕಂಡುಬಂದಿದೆ. ನಿರ್ಮಾಪಕ ಡಾಲ್ಫಿ ಡಿಸೋಜಾ ಹೇಳುವಂತೆ, ನಿರ್ದೇಶಕರ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇತ್ತು. ಹಾಗಾಗಿ ನಾನು ಮಧ್ಯಪ್ರವೇಶ ಮಾಡಿಲ್ಲ. ಒಟ್ಟಾರೆ ಸಿನಿಮಾ ನೋಡಿದಾಗ ತುಂಬಾ ಖುಷಿ ಆಗಿದೆ. ಪ್ರೇಕ್ಷಕವರ್ಗದಿಂದ ಕೂಡಾ ಒಳ್ಳೆಯ ಪ್ರತಿಕ್ರಿಯೆ ಬಂದಿದೆ.

ಮೇಕಿಂಗ್ ಡಿಫರೆಂಟ್

ತುಳು ಸಿನಿಮಾಗಳ ಖಾಯಂ ನಟರನ್ನು ಹೆಚ್ಚಾಗಿ ಬಳಸಿಕೊಳ್ಳದೇ ಮುನ್ನೆಲೆಗೆ ಬರುತ್ತಿರುವ ಕಲಾವಿದರನ್ನು ಹೆಚ್ಚಿನ ಅವಕಾಶ ನೀಡಿ ಪ್ರೋತ್ಸಾಹ ನೀಡಲಾಗಿದೆ. ಆದರೆ ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಪುಷ್ಪರಾಜ್ ಬೊಳ್ಳಾರ್, ದೀಪಕ್ ಪಾಣಾಜೆ, ಉಮೇಶ್ ಮಿಜಾರ್ ತಮ್ಮ ನಟನೆಯಲ್ಲಿ ಪ್ರಭುತ್ವ ತೋರಿಸಿದ್ದಾರೆ. ನವೀನ್ ಪಡೀಲ್ ಪುನರ್ವಸತಿ ಕೇಂದ್ರದ ಮುಖ್ಯಸ್ಥರಾಗಿ ವಿಭಿನ್ನ ಪಾತ್ರದಲ್ಲಿದ್ದಾರೆ.

ಟೈಟಲ್ ವಿಭಿನ್ನ

90ML ಎಂಬ ಹೆಸರು ಮಹಿಳಾ ಪ್ರೇಕ್ಷಕರಿಗೆ ಸ್ವಲ್ಪ ಅಸಹ್ಯವಾಗಿ ಕಂಡರೂ ಇದೊಂದು ಸಾಮಾಜಿಕ ಸಂದೇಶ ನೀಡುವ ಸಿನಿಮಾ ಎಂಬ ನೆಲೆಯಲ್ಲಿ ಎಲ್ಲಾ ವರ್ಗದ ಜನರಿಗೆ ಇಷ್ಟವಾಗಿದೆ ಎನ್ನುತ್ತಾರೆ ನಾಯಕನಟ ವಿನೀತ್ ಕುಮಾರ್. ವಿಲನ್ ಪಾತ್ರದಲ್ಲಿರುವ ರೋಷನ್ ಶೆಟ್ಟಿ ಭರವಸೆಯ ನಟನಾಗಿ ಮಿಂಚಿದ್ದಾರೆ. ನಾಯಕನಟಿ ರುಹಾನಿ ಶೆಟ್ಟಿ ಕೂಡಾ ಪಾತ್ರಕ್ಕೆ ಸರಿಯಾಗಿ ನಟಿಸಿದ್ದಾರೆ.

ಒಳ್ಳೆಯ ಪ್ರತಿಕ್ರಿಯೆ

ನಿರ್ದೇಶಕ ರಂಜಿತ್ ಸಿ ಬಜಾಲ್ ಹೇಳುವಂತೆ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಈ ರೀ ತಿ ಕೂಡಾ ಕಥೆ ಮಾಡಬಹುದು ಎಂಬ ಕಲ್ಪನೆ ಹುಟ್ಟುಹಾಕಿದೆ. ಇದೊಂದು ಸಾಮಾಜಿಕ ಸಂದೇಶ ಸಾರುವ ಸಿನಿಮಾ ಆಗಿರುವ ಕಾರಣ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಎಲ್ಲೂ ಕೂಡಾ ನಾವು ಓವರ್ ಆ ಕ್ಟಿಂಗ್ ಗೆ ಅವಕಾಶ ನೀಡಿಲ್ಲ!

Read More
Next Story