SSLC Result : ಯಾವುದೇ ಟ್ಯೂಷನ್ ಇಲ್ಲದೆ 625 ಅಂಕ ಗಳಿಸಿದ ಸರ್ಕಾರಿ ಶಾಲೆಯ ಪ್ರಾರ್ಥನಾ
x

SSLC Result : ಯಾವುದೇ ಟ್ಯೂಷನ್ ಇಲ್ಲದೆ 625 ಅಂಕ ಗಳಿಸಿದ ಸರ್ಕಾರಿ ಶಾಲೆಯ ಪ್ರಾರ್ಥನಾ

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಟಿಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಪಾಟೀಲ್ ಅವರ ಸಾಧನೆಯ ಹಿಂದಿನ ಗುಟ್ಟು ಇಲ್ಲಿದೆ.


Click the Play button to hear this message in audio format

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಲ್ಲಿ ಅಥಣಿ ತಾಲೂಕಿನ ಕಟಿಗೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ್ ಪಾಟೀಲ್ ಕೂಡ ಒಬ್ಬರು. ಆಕೆ ಯಾವುದೇ ಖಾಸಗಿ ಟ್ಯೂಷನ್‌ಗೆ ಹೋಗದೆ, ಕೇವಲ ಶಾಲಾ ಶಿಕ್ಷಕರ ಪಾಠ ಹಾಗೂ ಸ್ವಯಂ ಅಧ್ಯಯನದ ಬಲದಿಂದ ಈ ಸಾಧನೆ ಮಾಡಿ, ಸರ್ಕಾರಿ ಶಾಲೆಗಳ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ತನ್ನ ಸಾಧನೆಯ ಬಗ್ಗೆ 'ದ ಫೆಡರಲ್ ಕರ್ನಾಟಕ'ದ ಜತೆ ಸಂತಸ ಹಂಚಿಕೊಂಡಿರುವ ಪ್ರಾರ್ಥನಾ, "ನನಗೆ 620 ಅಂಕ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೆ, 625 ಅಂಕ ಬಂದಿರುವುದು ಅತೀವ ಖುಷಿ ತಂದಿದೆ. ನಾನು ಯಾವುದೇ ಟ್ಯೂಷನ್‌ಗೆ ಹೋಗುತ್ತಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದೆ. ಏನಾದರೂ ಅನುಮಾನವಿದ್ದರೆ (ಡೌಟ್) ಅಲ್ಲಿಯೇ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳುತ್ತಿದ್ದೆ. ಅಂದಿನ ಪಾಠವನ್ನು ಅಂದೇ ಓದಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದೆ," ಎಂದು ಯಶಸ್ಸಿನ ಗುಟ್ಟು ಬಿಚ್ಚಿಟ್ಟರು.

"ನಾನು ಪ್ರತಿದಿನ ರಾತ್ರಿ 10 ಗಂಟೆಯವರೆಗೆ ಮಾತ್ರ ಓದುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ಮಾತ್ರ ಸ್ವಲ್ಪ ಹೆಚ್ಚು ಹೊತ್ತು ಓದುತ್ತಿದ್ದೆ. ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಚೆನ್ನಾಗಿ ಅಂಕ ಗಳಿಸಲು ಸಾಧ್ಯ ಎನ್ನುವುದು ಶುದ್ಧ ಸುಳ್ಳು. ಕಲಿಯುವ ಮನಸ್ಸಿದ್ದರೆ ಎಲ್ಲೇ ಇದ್ದರೂ ಸಾಧಿಸಬಹುದು. ನನಗೆ ನಮ್ಮ ತಂದೆಯೇ ರೋಲ್ ಮಾಡೆಲ್," ಎಂದು ಆಕೆ ಹೆಮ್ಮೆಯಿಂದ ಹೇಳಿದರು. ಪ್ರಾರ್ಥನಾಗೆ ಭವಿಷ್ಯದಲ್ಲಿ ವೈದ್ಯೆಯಾಗುವ ಕನಸಿದೆ.

ಮಕ್ಕಳಿಗೆ ಅಂಕದ ಒತ್ತಡ ಹಾಕಬಾರದು: ತಂದೆ

ಪ್ರಾರ್ಥನಾ ತಂದೆ ನಾಗಪ್ಪ ಬಿರಾದಾರ್ ಪಾಟೀಲ್ ಅವರು ಕಟಿಗೇರಿ ಸರ್ಕಾರಿ ಶಾಲೆಯಲ್ಲಿಯೇ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳ ಸಾಧನೆ ಬಗ್ಗೆ ಮಾತನಾಡಿದ ಅವರು, "ನಾವು ಎಂದಿಗೂ ಇಷ್ಟೇ ಅಂಕ ಗಳಿಸಬೇಕು ಎಂದು ಮಗಳ ಮೇಲೆ ಒತ್ತಡ ಹಾಕಲಿಲ್ಲ. ಪೋಷಕರು ಮಕ್ಕಳ ಮೇಲೆ ಅಂಕಕ್ಕಾಗಿ ಒತ್ತಡ ಹೇರಬಾರದು. ಅದರ ಬದಲು, ಮಕ್ಕಳು ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳುವಂತೆ ಪ್ರೇರೇಪಿಸಬೇಕು ಹಾಗೂ ಏನಾದರೂ ಅರ್ಥವಾಗದಿದ್ದರೆ ಶಿಕ್ಷಕರ ಬಳಿ ಧೈರ್ಯವಾಗಿ ಕೇಳುವ ಮನೋಭಾವ ಬೆಳೆಸಬೇಕು," ಎಂದು ಕಿವಿಮಾತು ಹೇಳಿದರು.

Read More
Next Story