SSLC | 1,716 students fail in a single subject; Government will bear the fees for exam-2!
x

ಸಾಂದರ್ಭಿಕ ಚಿತ್ರ

SSLC | ಒಂದೇ ವಿಷಯದಲ್ಲಿ 1,716 ವಿದ್ಯಾರ್ಥಿಗಳು ಫೇಲ್‌; ಪರೀಕ್ಷೆ -2 ಗೆ ಸರ್ಕಾರವೇ ಭರಿಸಲಿದೆ ಶುಲ್ಕ!

ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದೆಂಬ ಸದುದ್ದೇಶದಿಂದ, ಪರೀಕ್ಷಾ ಶುಲ್ಕವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ. ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.


Click the Play button to hear this message in audio format

2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಇತ್ತೀಚೆಗಷ್ಟೇ ಪ್ರಕಟವಾಗಿದ್ದು, ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ದಾಖಲೆಯ ಶೇ. 94.18ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಎಲ್ಲಾ ವಿಷಯಗಳಲ್ಲಿ 1,716 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 45,415 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿರಾಸೆಗೊಳ್ಳಬಾರದು ಮತ್ತು ಶಿಕ್ಷಣವನ್ನು ಮೊಟಕುಗೊಳಿಸಬಾರದು ಎಂಬ ದೃಢ ಆಶಯದೊಂದಿಗೆ, ಸರ್ಕಾರವು ಮುಂಬರುವ 'ಪರೀಕ್ಷೆ-2'ಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕ್ರಮ ಕೈಗೊಂಡಿದೆ.

ಸರ್ಕಾರವೇ ಭರಿಸಲಿದೆ ಶುಲ್ಕ

ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದೆಂಬ ಸದುದ್ದೇಶದಿಂದ, ಪರೀಕ್ಷಾ ಶುಲ್ಕವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ. ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಕೇವಲ ಅನುತ್ತೀರ್ಣರಾದ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಈಗಾಗಲೇ ತೇರ್ಗಡೆಯಾಗಿರುವ ವಿದ್ಯಾರ್ಥಿಗಳ ಪೈಕಿ ತಮ್ಮ ಫಲಿತಾಂಶವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಇಚ್ಛಿಸುವವರಿಗೂ 'ಪರೀಕ್ಷೆ-2'ರಲ್ಲಿ ಹಾಜರಾಗಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಅನುತ್ತೀರ್ಣರಾದ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಪರೀಕ್ಷೆ-2ಕ್ಕೆ ಕಡ್ಡಾಯವಾಗಿ ನೋಂದಾಯಿಸಿ, ಅವರನ್ನು ಶೈಕ್ಷಣಿಕವಾಗಿ ಸಿದ್ಧಗೊಳಿಸುವಂತೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಎಷ್ಟು ವಿದ್ಯಾರ್ಥಿಗಳು ʼನಾಪಾಸುʼ ?

ಒಂದು ವಿಷಯದಲ್ಲಿ 20,691 ವಿದ್ಯಾರ್ಥಿಗಳು, ಎರಡು ವಿಷಯದಲ್ಲಿ 10,509, ಮೂರು ವಿಷಯಗಳಲ್ಲಿ 6,103, ನಾಲ್ಕು ವಿಷಯಗಳಲ್ಲಿ 3,799, ಐದು ವಿಷಯಗಳಲ್ಲಿ 2,552 ಹಾಗೂ ಎಲ್ಲಾ ವಿಷಯಗಳಲ್ಲಿ 1,716 ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 45,415 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಯಾವುದೇ ವಿದ್ಯಾರ್ಥಿಯು ಮಾಹಿತಿಯ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು. ಹೀಗಾಗಿ, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯೋಪಾಧ್ಯಾಯರನ್ನು ಅಥವಾ ಸ್ಥಳೀಯ ಶಿಕ್ಷಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Read More
Next Story