
KEA |ಸಿಇಟಿ ಸೀಟು ಹಂಚಿಕೆ ಮಂಥನಕ್ಕೆ ಉತ್ತಮ ಪ್ರತಿಕ್ರಿಯೆ; ಮೊದಲ ದಿನವೇ 10 ಸಾವಿರ ವಿದ್ಯಾರ್ಥಿಗಳು ಭಾಗಿ!
ಮೇ 28ರಂದು ಹೊರತುಪಡಿಸಿ, ಮೇ 30ರವರೆಗೆ ಕೌನ್ಸಿಲಿಂಗ್ ಸತತವಾಗಿ ನಡೆಯಲಿದೆ. ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಪಡೆಯಲು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭೇಟಿ ನೀಡಬಹುದಾಗಿದೆ ಎಂದು ಕೆಇಎ ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಲು ಹಮ್ಮಿಕೊಳ್ಳಲಾಗಿರುವ 'ಸಿಇಟಿ ಸೀಟು ಹಂಚಿಕೆ ಮಂಥನ' ಕಾರ್ಯಾಗಾರಕ್ಕೆ ಮೊದಲ ದಿನವೇ ರಾಜ್ಯಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ 64 ಕಾಲೇಜುಗಳಲ್ಲಿ ಮಂಗಳವಾರದಿಂದ ಆರಂಭವಾಗಿರುವ ಈ ವಿಶೇಷ ಜಾಗೃತಿ ಅಭಿಯಾನದಲ್ಲಿ ಮೊದಲ ದಿನವೇ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಪಾಲ್ಗೊಂಡಿದ್ದರು.
ರಾಜ್ಯದ ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿದಿನ ಎರಡು ಸೆಷನ್‌ಗಳನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 10ರಿಂದ 12 ಗಂಟೆವರೆಗೆ ಮೊದಲ ಸೆಷನ್ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4 ಗಂಟೆಯವರೆಗೆ ಎರಡನೇ ಸೆಷನ್ ನಡೆಯಿತು. ಕೆಇಎ ವತಿಯಿಂದ ವಿಶೇಷ ತರಬೇತಿ ಪಡೆದ ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗೂ ನಿಯೋಜಿತ ಸಿಬ್ಬಂದಿ ಸ್ಥಳದಲ್ಲೇ ಆಕಾಂಕ್ಷಿತ ಅಭ್ಯರ್ಥಿಗಳ ಗೊಂದಲಗಳನ್ನು ನಿವಾರಿಸಿ, ಜಾಗೃತಿ ಮೂಡಿಸಿದರು.
ಸ್ಲಾಟ್ ಬುಕ್ಕಿಂಗ್‌ಗೆ ಉತ್ತಮ ಸ್ಪಂದನೆ
"ವಿದ್ಯಾರ್ಥಿಗಳು ಮತ್ತು ಪೋಷಕರು ಕೆಇಎ ವೆಬ್‌ಸೈಟ್‌ನಲ್ಲಿ ಮೊದಲೇ ಸ್ಲಾಟ್ ಕಾಯ್ದಿರಿಸಿಕೊಂಡು, ತಮಗೆ ಹತ್ತಿರವಿರುವ ಕಾಲೇಜುಗಳಿಗೆ ಭೇಟಿ ನೀಡಲು ಸೂಚಿಸಲಾಗಿತ್ತು. ಮೊದಲ ದಿನದ ಕಾರ್ಯಾಗಾರಕ್ಕಾಗಿ ಸುಮಾರು 13 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು" ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಮೇ 30ರವರೆಗೆ ಮಂಥನ ಲಭ್ಯ
ಈ ಕಾರ್ಯಾಗಾರವು ಮೇ 28ರಂದು ಹೊರತುಪಡಿಸಿ, ಮೇ 30ರವರೆಗೆ ಸತತವಾಗಿ ನಡೆಯಲಿದೆ. ಪ್ರತಿದಿನವೂ ಎರಡು ಸೆಷನ್‌ಗಳು ಲಭ್ಯವಿರಲಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಪಡೆಯಲು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಭೇಟಿ ನೀಡಬಹುದಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಕೆಇಎ ಉಪಕ್ರಮಕ್ಕೆ ವಿದ್ಯಾರ್ಥಿಗಳ ಹರ್ಷ
"ಕೌನ್ಸೆಲಿಂಗ್ ಪ್ರಕ್ರಿಯೆ, ಆಪ್ಷನ್ ಎಂಟ್ರಿ, ಚಾಯ್ಸ್ ಸೆಲೆಕ್ಷನ್ ಮುಂತಾದ ಪ್ರಮುಖ ಪ್ರಕ್ರಿಯೆಗಳ ಬಗ್ಗೆ ನಮಗಿದ್ದ ದಟ್ಟವಾದ ಅನುಮಾನಗಳಿಗೆ ಈ ಮಂಥನದಲ್ಲಿ ಸೂಕ್ತ ಪರಿಹಾರ ಸಿಕ್ಕಿತು" ಎಂದು ಬೆಂಗಳೂರು ಮೆಡಿಕಲ್ ಕಾಲೇಜಿನ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರಾಜೇಶ್ ಎಂಬ ವಿದ್ಯಾರ್ಥಿ ಹರ್ಷ ವ್ಯಕ್ತಪಡಿಸಿದ್ದಾರೆ.
ಸಿಇಟಿ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಪೋಷಕರಿಂದ ಶ್ಲಾಘನೆ
ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಾಗಾರಕ್ಕೆ ಬಂದಿದ್ದ ಪೋಷಕರಾದ ಮಂಜುನಾಥ್ ಮಾತನಾಡಿ, "ಕಳೆದ ಬಾರಿ ಕೇವಲ ಒಂದು ದಿನ ಮಾತ್ರ ಕಾರ್ಯಾಗಾರ ಇದ್ದಿದ್ದರಿಂದ ಭಾರಿ ಗೊಂದಲ ಮತ್ತು ಜನದಟ್ಟಣೆ ಉಂಟಾಗಿತ್ತು. ಆದರೆ ಈ ವರ್ಷ 5 ದಿನಗಳ ಕಾಲ ಅವಕಾಶ ನೀಡಿ, ಸ್ಲಾಟ್ ಬುಕಿಂಗ್ ಕಡ್ಡಾಯ ಮಾಡಿರುವುದರಿಂದ ಇಡೀ ಪ್ರಕ್ರಿಯೆ ಅತ್ಯಂತ ವ್ಯವಸ್ಥಿತವಾಗಿ ಸಾಗುತ್ತಿದೆ" ಎಂದು ಕೆಇಎ ಕಾರ್ಯವೈಖರಿಯನ್ನು ಶ್ಲಾಘಿಸಿದರು.

