
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ ಪ್ರಕಟವಾಗಿದೆ.
SSLC Result 2026| ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ
ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ ಪ್ರಕಟವಾಗಿದೆ. ಅಧಿಕೃತ ಲಿಂಕ್ ಬಳಸಿ ನಿಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ. ಉತ್ತೀರ್ಣ ಪ್ರಮಾಣ ಮತ್ತು ಮರುಮೌಲ್ಯಮಾಪನದ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ನೋಡಿ.
ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಈ ಬಾರಿ ಮೂವರು ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದಿದ್ದಾರೆ. ರೂಪಾ ಚನಗೌಡ ಪಾಟೀಲ (ಬೆಳಗಾವಿ), ಜಾನವಿ (ಹಾಸನ), ಉತ್ಸವ ಪಾಟೀಲ (ಹಾಸನ) 625ರಲ್ಲಿ 625 ಅಂಕ ಪಡೆದವರಾಗಿದ್ದಾರೆ. 94.1 %ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 91.94% ರಷ್ಟು ಬಾಲಕರು ಪಾಸ್ ಆಗಿದ್ದರೆ 96.18% ವಿದ್ಯಾರ್ಥಿನಿಯರು ಪಾಸ್ ಆಗಿ ಮೇಲುಗೈ ಸಾಧಿಸಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಬಾರಿ ಒಟ್ಟು 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು, ಅದರಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಅಧಿಕೃತ ಜಾಲತಾಣಗಳಾದ karresults.nic.in ಅಥವಾ kseeb.karnataka.gov.in ಗೆ ಭೇಟಿ ನೀಡಬಹುದು. ಅಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಡಿಜಿಲಾಕರ್ ಮೂಲಕವೂ ಡಿಜಿಟಲ್ ಅಂಕಪಟ್ಟಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈ ವರ್ಷದ ವಿಶೇಷವೆಂದರೆ ಸರ್ಕಾರವು ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇಕಡಾ 35 ರಿಂದ 33ಕ್ಕೆ ಇಳಿಸಿದೆ. ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಒಟ್ಟಾರೆ 625 ಅಂಕಗಳಿಗೆ 206 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ. ತೃತೀಯ ಭಾಷೆಗೆ ಸಂಬಂಧಿಸಿದಂತೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಪ್ರಸ್ತಾವನೆಗೆ ಹೈಕೋರ್ಟ್ ತಡೆ ನೀಡಿದ್ದು, ಈ ವರ್ಷವೂ ವಿದ್ಯಾರ್ಥಿಗಳಿಗೆ ಅಂಕಗಳನ್ನೇ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಫಲಿತಾಂಶದಿಂದ ಅತೃಪ್ತಗೊಂಡ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅನುತ್ತೀರ್ಣರಾದವರಿಗೆ ಶೀಘ್ರದಲ್ಲೇ ಪರೀಕ್ಷೆ-2ರ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.
ಸ್ಕ್ಯಾನ್ ಪ್ರತಿಗಳು ಮತ್ತಷ್ಟು ವೇಗವಾಗಿ ಲಭ್ಯ
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಅಥವಾ ಅಂಕಗಳ ಮರು ಎಣಿಕೆಗಾಗಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಶೀಘ್ರವಾಗಿ ಒದಗಿಸುವ ಉದ್ದೇಶದಿಂದ, ಇನ್ನು ಮುಂದೆ ಉತ್ತರ ಪತ್ರಿಕೆಗಳನ್ನು ಕೇಂದ್ರ ಕಚೇರಿಗೆ ರವಾನಿಸುವ ಬದಲು ಆಯಾ ಜಿಲ್ಲಾ ಕೇಂದ್ರಗಳಲ್ಲೇ ಸಂಗ್ರಹಿಸಿಡಲು ಮಂಡಳಿ ನಿರ್ಧರಿಸಿದೆ.
ಈ ಹಿಂದೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನದ ನಂತರ ಕೇಂದ್ರೀಕೃತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಸ್ಕ್ಯಾನ್ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಿದಾಗ, ಆ ಪತ್ರಿಕೆಗಳನ್ನು ಪತ್ತೆಹಚ್ಚಿ ಪ್ರತಿಗಳನ್ನು ನೀಡಲು ಸಾಕಷ್ಟು ವಿಳಂಬವಾಗುತ್ತಿತ್ತು. ಈಗ ಈ ಹೊಸ ವ್ಯವಸ್ಥೆಯ ಮೂಲಕ ಜಿಲ್ಲಾ ಕೇಂದ್ರಗಳಲ್ಲೇ ಉತ್ತರ ಪತ್ರಿಕೆಗಳು ಲಭ್ಯವಿರುವುದರಿಂದ, ಅರ್ಜಿ ಸಲ್ಲಿಸಿದ ಕೂಡಲೇ ಸ್ಕ್ಯಾನ್ ಮಾಡಿ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಇದು ವಿದ್ಯಾರ್ಥಿಗಳ ಕಾಯುವಿಕೆಯ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಮೌಲ್ಯಮಾಪನ ಪ್ರಕ್ರಿಯೆ ಮುಗಿದ ತಕ್ಷಣ ಉತ್ತರ ಪತ್ರಿಕೆಗಳ ಕಟ್ಟುಗಳನ್ನು ಆಯಾ ಜಿಲ್ಲೆಗಳ ಸುಭದ್ರ ಕೊಠಡಿಗಳಿಗೆ ವರ್ಗಾಯಿಸಲಾಗುತ್ತದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದಾಗ, ಜಿಲ್ಲಾ ಕೇಂದ್ರದ ಸಿಬ್ಬಂದಿ ನಿರ್ದಿಷ್ಟ ಪತ್ರಿಕೆಯನ್ನು ಪತ್ತೆಹಚ್ಚಿ ಸ್ಕ್ಯಾನ್ ಮಾಡಲಿದ್ದಾರೆ. ಈ ವಿಕೇಂದ್ರೀಕರಣ ವ್ಯವಸ್ಥೆಯಿಂದ ದೂರದ ಪ್ರಯಾಣದ ವೇಳೆ ಉತ್ತರ ಪತ್ರಿಕೆಗಳಿಗೆ ಉಂಟಾಗಬಹುದಾದ ಹಾನಿ ಅಥವಾ ಪತ್ರಿಕೆಗಳು ಕಾಣೆಯಾಗುವ ಭೀತಿಯೂ ತಪ್ಪಲಿದೆ.
ಪರೀಕ್ಷಾ ವ್ಯವಸ್ಥೆಯನ್ನು ವಿದ್ಯಾರ್ಥಿ ಸ್ನೇಹಿ ಮತ್ತು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಮಂಡಳಿಯು ಈ ಕ್ರಮ ಕೈಗೊಂಡಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ನಿಗದಿತ ಗಡುವು ಇರುವುದರಿಂದ, ಸ್ಕ್ಯಾನ್ ಪ್ರತಿಗಳು ಬೇಗನೆ ಸಿಕ್ಕರೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಈ ಸಂಗ್ರಹಣಾ ಕೇಂದ್ರಗಳ ಭದ್ರತೆ ಮತ್ತು ನಿರ್ವಹಣೆಯ ಕುರಿತು ಮಂಡಳಿಯು ಈಗಾಗಲೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

