
ಶಾಲಾ ವಿದ್ಯಾರ್ಥಿಗಳು (ಸಾಂದರ್ಭಿಕ ಚಿತ್ರ)
ಶಾಲೆಗಳಿಗೆ ಗೈಡ್‌ಲೈನ್ಸ್ ರಿಲೀಸ್| ಉರ್ದು-ಇಂಗ್ಲಿಷ್ ದ್ವಿಭಾಷಾ ಬೋಧನೆ, ಡಿಜಿಟಲ್ ಹಾಜರಾತಿ ಕಡ್ಡಾಯ!
ಈ ಬಾರಿಯ ಮಾರ್ಗಸೂಚಿಯಲ್ಲಿ ದ್ವಿಭಾಷಾ ಶಿಕ್ಷಣಕ್ಕೆ ಒತ್ತು ನೀಡಿರುವುದು ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರಿಗೂ ಡಿಜಿಟಲ್ ಹಾಜರಾತಿಯನ್ನು ಕಡ್ಡಾಯಗೊಳಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಜೂನ್ 1ರಿಂದ ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಅಧಿಕೃತವಾಗಿ ಪುನರಾರಂಭಗೊಳ್ಳಲಿದ್ದು, ಉರ್ದು ಮತ್ತು ಇಂಗ್ಲಿಷ್ ದ್ವಿಭಾಷಾ ಬೋಧನಾ ಪದ್ಧತಿಯನ್ನು ಇದೇ ವರ್ಷದಿಂದ ಅನುಷ್ಠಾನಕ್ಕೆ ತರಲು ಶಿಕ್ಷಣ ಇಲಾಖೆ ಹಸಿರು ನಿಶಾನೆ ನೀಡಿದೆ. ಶಾಲೆಗೆ ಮರಳಲು ಮಕ್ಕಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಇತ್ತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಬಾರಿಯ ಮಾರ್ಗಸೂಚಿಯಲ್ಲಿ ದ್ವಿಭಾಷಾ ಶಿಕ್ಷಣಕ್ಕೆ ಒತ್ತು ನೀಡಿರುವುದು ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಬ್ಬರಿಗೂ ಡಿಜಿಟಲ್ ಹಾಜರಾತಿಯನ್ನು ಕಡ್ಡಾಯಗೊಳಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಉರ್ದು-ಇಂಗ್ಲಿಷ್ ದ್ವಿಭಾಷಾ ಮಾಧ್ಯಮ ಆರಂಭ
ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕತೆ ತರುವ ನಿಟ್ಟಿನಲ್ಲಿ ಮತ್ತು ಇಲಾಖೆಯಿಂದ ಈಗಾಗಲೇ ಪೂರ್ವಾನುಮತಿ ಪಡೆದಿರುವ ಶಾಲೆಗಳಲ್ಲಿ ಈ ವರ್ಷದಿಂದಲೇ ಉರ್ದು- ಇಂಗ್ಲೀಷ್ ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚಿಸಲಾಗಿದೆ. ಪ್ರಾದೇಶಿಕ ಭಾಷೆಯ ಜತೆಗೆ ಜಾಗತಿಕ ಮಟ್ಟದ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್ ಹಾಜರಾತಿಯನ್ನು ಈ ಬಾರಿ ಕಡ್ಡಾಯಗೊಳಿಸಲಾಗಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಸುರಕ್ಷತೆಗೆ ಮೊದಲ ಆದ್ಯತೆ
ಮಳೆಗಾಲ ಆರಂಭವಾಗುತ್ತಿರುವುದರಿಂದ ಶಾಲಾ ಮಕ್ಕಳ ಸುರಕ್ಷತೆಗೆ ಶಿಕ್ಷಣ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ. ಶಾಲೆಗಳ ಕಟ್ಟಡಗಳು, ಶೌಚಾಲಯಗಳು ಅಥವಾ ಬಿಸಿಯೂಟದ ಅಡುಗೆ ಕೋಣೆಗಳು ಶಿಥಿಲಗೊಂಡಿದ್ದರೆ, ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅವುಗಳನ್ನು ದುರಸ್ತಿಗೊಳಿಸಬೇಕು ಅಥವಾ ತೆರವುಗೊಳಿಸಬೇಕು ಎಂದು ಕಠಿಣ ಆದೇಶ ನೀಡಲಾಗಿದೆ.
ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿಗಳೇನು ?
ಶಾಲಾ ಆವರಣದ ಸಂಪೂರ್ಣ ಸ್ವಚ್ಛತೆ, ಸುರಕ್ಷತಾ ತಪಾಸಣೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮೇ 28ರೊಳಗೆ ಪೂರ್ಣಗೊಳಿಸಬೇಕು. ಮೇ 29ಕ್ಕೆ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ, ಶಾಲಾ ಆರಂಭದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜೂ. 1ರಂದು ರಾಜ್ಯಾದ್ಯಂತ ಅದ್ಧೂರಿ 'ಶಾಲಾ ಪ್ರಾರಂಭೋತ್ಸವ' ಹಾಗೂ ಹೊಸ ಮಕ್ಕಳ ದಾಖಲಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ.
ಜೂ.30ಕ್ಕೆ ದಾಖಲಾತಿಗೆ ಕೊನೆ ದಿನ
ವಿದ್ಯಾರ್ಥಿಗಳ ದಾಖಲಾತಿ ಆಂದೋಲನಕ್ಕೆ ಜೂ.30ಕ್ಕೆ ಕೊನೆಯ ದಿನವಾಗಿದ್ದು, 6 ರಿಂದ 14 ವರ್ಷದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಕಡ್ಡಾಯ ಕ್ರಮ ವಹಿಸಬೇಕು. ಜೂ. 1ರಿಂದ ಗಂಟೆ ಬಾರಿಸಲು ಸಜ್ಜಾಗಿರುವ ಶಾಲೆಗಳು, ಇಲಾಖೆಯ ಈ ಎಲ್ಲಾ ಸುರಕ್ಷತಾ, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

