
ಕರ್ನಾಟಕ ಹೈಕೋರ್ಟ್
Hindi Controvercy |ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಯ ‘ಗ್ರೇಡ್’ ಭಾಗ್ಯಕ್ಕೆ ಹೈಕೋರ್ಟ್ ಬ್ರೇಕ್!
ಶಿಕ್ಷಣ ಹಕ್ಕು ಕಾಯ್ದೆಯಡಿ ಮೌಲ್ಯಮಾಪನವು ಪಾರದರ್ಶಕವಾಗಿರಬೇಕು. ಗ್ರೇಡಿಂಗ್ ವ್ಯವಸ್ಥೆಯು ವಿದ್ಯಾರ್ಥಿಯ ನಿಖರ ಸಾಮರ್ಥ್ಯವನ್ನು ಮರೆಮಾಚಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಅಂಕದ ಬದಲು ‘ಗ್ರೇಡಿಂಗ್’ ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.
ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಕಡ್ಡಾಯವಾಗಿ ಅಂಕಪಟ್ಟಿಯಲ್ಲಿ ದಾಖಲಿಸಬೇಕು. ಅಲ್ಲದೇ ಒಟ್ಟು ಫಲಿತಾಂಶಕ್ಕೆ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಇ.ಎಸ್. ಇಂದಿರೇಶ ಅವರಿದ್ದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೆಲವು ದಿನಗಳ ಹಿಂದೆ ಶಿಕ್ಷಣ ಇಲಾಖೆಯು ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸಿ, ಅಂಕಗಳ ಬದಲಿಗೆ ಎ, ಬಿ, ಸಿ ಗ್ರೇಡ್ ನೀಡಲು ಆದೇಶಿಸಿತ್ತು. ಈ ಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ ಎಂದು ಪೋಷಕರು ಮತ್ತು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಚಿಕ್ಕಮಗಳೂರಿನ ಸಹನಾ ಆರ್. ನಾಯ್ಕ್ ಮತ್ತು ಇತರರು ಇದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಅಂಕಗಳಿಲ್ಲದಿದ್ದರೆ ವಿದ್ಯಾರ್ಥಿಗಳು ತೃತೀಯ ಭಾಷೆಯನ್ನು ಕಡೆಗಣಿಸುವ ಸಾಧ್ಯತೆಯನ್ನು ಗಂಭೀರವಾಗಿ ಪರಿಣಿಸಿದೆ. ಈ ರೀತಿ ಆದರೆ ಉನ್ನತ ಶಿಕ್ಷಣದ ಪ್ರವೇಶಾತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಮೌಲ್ಯಮಾಪನವು ಪಾರದರ್ಶಕವಾಗಿರಬೇಕು. ಗ್ರೇಡಿಂಗ್ ವ್ಯವಸ್ಥೆಯು ವಿದ್ಯಾರ್ಥಿಯ ನಿಖರ ಸಾಮರ್ಥ್ಯವನ್ನು ಮರೆಮಾಚಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿ ಅಥವಾ ತೃತೀಯ ಭಾಷೆಯ ಅಂಕಗಳು ಮುಖ್ಯವಾಗುತ್ತವೆ. ಕೇವಲ ‘ಗ್ರೇಡ್’ ಇದ್ದರೆ ಅಂತಹ ವಿದ್ಯಾರ್ಥಿಗಳು ಹೊರರಾಜ್ಯಗಳ ಸ್ಪರ್ಧೆಯಲ್ಲಿ ಹಿಂದೆ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ತೃತೀಯ ಭಾಷೆಯಲ್ಲಿ ವಿದ್ಯಾರ್ಥಿ ಪಡೆದ ಪ್ರತಿ ಅಂಕವನ್ನೂ ಅಂಕಪಟ್ಟಿಯಲ್ಲಿ ನಮೂದಿಸಬೇಕು. ಈ ಅಂಕಗಳನ್ನು ಒಟ್ಟು ಶೇಕಡಾವಾರು ಲೆಕ್ಕಾಚಾರಕ್ಕೆ ಸೇರಿಸಲೇಬೇಕು. "ವಿದ್ಯಾರ್ಥಿಗಳ ಭವಿಷ್ಯದ ಜೊತೆ ಪ್ರಯೋಗ ಬೇಡ. ಶಿಕ್ಷಣದ ಗುಣಮಟ್ಟ ಕಾಪಾಡಲು ಪ್ರತಿ ವಿಷಯದ ಮೌಲ್ಯಮಾಪನವೂ ಅಂಕಗಳ ಮೂಲಕವೇ ನಡೆಯುವುದು" ಸೂಕ್ತ ಎಂದು ಹೈಕೋರ್ಟ್ ಹೇಳಿದೆ.
ಏನಿದು ಗ್ರೇಡಿಂಗ್ ವಿವಾದ
ರಾಜ್ಯದಲ್ಲಿ ತ್ರಿಭಾಷಾ ನೀತಿಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ರಾಜ್ಯ ಸರ್ಕಾರವು ದ್ವಿಭಾಷಾ ನೀತಿಯ ಭಾಗವಾಗಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ಅಂಕದ ಬದಲು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಿತ್ತು. ಇತ್ತೀಚೆಗೆ ಅಧಿಕೃತ ಆದೇಶವನ್ನೂ ಹೊರಡಿಸಿತ್ತು.
ಪ್ರಥಮ ಮತ್ತು ದ್ವಿತೀಯ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ತೃತೀಯ ಭಾಷೆಗೆ ನೀಡದೆ, ಅದನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿವರ್ತಿಸುವ ಸರ್ಕಾರದ ನಡೆಗೆ ಹಿಂದಿ ಭಾಷಾ ಶಿಕ್ಷಕರ ಸಂಘ ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾಷಾ ವಿವಾದವು ಕೇವಲ ಅಂಕಗಳಿಗೆ ಸೀಮಿತವಾಗದೇ ಭಾಷಾ ನೀತಿಯ ಸಂಘರ್ಷವಾಗಿಯೂ ಮಾರ್ಪಟ್ಟಿತ್ತು. ತೃತೀಯ ಭಾಷೆಗೆ ಅಂಕ ನೀಡದಿದ್ದರೆ ವಿದ್ಯಾರ್ಥಿಗಳು ಆ ವಿಷಯದ ಕಡೆಗೆ ಆಸಕ್ತಿ ಕಳೆದುಕೊಳ್ಳುತ್ತಾರೆ ಮತ್ತು ಇದು ಭವಿಷ್ಯದಲ್ಲಿ ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆಯಾಗಬಹುದು ಎಂಬ ವಾದ ಕೇಳಿಬಂದಿತ್ತು.

