KCET 2026: CET results to be announced only after the conclusion of the practical exam at Hiriyur center!
x

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಸಂಗ್ರಹ ಚಿತ್ರ)

KCET 2026: ಹಿರಿಯೂರು ಕೇಂದ್ರದ ಪ್ರಾಯೋಗಿಕ ಪರೀಕ್ಷೆ ಮುಕ್ತಾಯದ ಬಳಿಕವೇ ಸಿಇಟಿ ಫಲಿತಾಂಶ ಪ್ರಕಟ!

ಫಲಿತಾಂಶ ಪ್ರಕಟವಾಗುವವರೆಗೆ ಅಭ್ಯರ್ಥಿಗಳು ಅಥವಾ ಪೋಷಕರು ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಕು. ಆಪ್ಷನ್ಸ್ ದಾಖಲಿಸುವ ಬಗ್ಗೆಯೂ ಮಾಹಿತಿ ಪಡೆಯಬಹುದು ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Click the Play button to hear this message in audio format

ಕೃಷಿ ಮತ್ತು ಪಶು ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಯನ್ನು ಹಿರಿಯೂರು ಕೇಂದ್ರದಲ್ಲಿ ಜೂನ್ 1ರಂದು ನಡೆಯಲಿದ್ದು, ಅದರ ನಂತರವೇ ಸಿಇಟಿ 2026ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಈ ಕುರಿತು ಕೆಇಎ ತನ್ನ ಸಾಮಾಜಿಕ ಜಾಲತಾಣ (ಎಕ್ಸ್‌)ನಲ್ಲಿ ಪ್ರತಿಕ್ರಿಯಿಸಿದ್ದು, ಕೃಷಿ ವಿಶ್ವವಿದ್ಯಾಲಯದವರು ಹಿರಿಯೂರು ಕೇಂದ್ರದ ಅಭ್ಯರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಮರು ನಿಗದಿ ಮಾಡಿರುವ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ. ಒಟ್ಟು 24,250 ಮಂದಿ ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಹಾಜರಾದವರ ಅಂಕಗಳನ್ನು ವಿಶ್ವವಿದ್ಯಾಲಯದವರು KEA ಗೆ ಕೊಟ್ಟ ನಂತರವೇ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸಲು ಕರೆ

ಫಲಿತಾಂಶ ಪ್ರಕಟವಾಗುವವರೆಗೆ ಅಭ್ಯರ್ಥಿಗಳು ಅಥವಾ ಪೋಷಕರು ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಕು. ಆಪ್ಷನ್ಸ್ ದಾಖಲಿಸುವ ಬಗ್ಗೆಯೂ ಮಾಹಿತಿ ಪಡೆಯಬಹುದು. ಸಾಧ್ಯವಾದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮೇ 30ರವರೆಗೆ ಆಯೋಜಿಸಿರುವ ಸಿಇಟಿ ಸೀಟು ಹಂಚಿಕೆ ಮಂಥನದಲ್ಲಿ ಭಾಗವಹಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ ಪ್ರಕಟಣೆ ಮುಂದೂಡಿಕೆ

ಕೃಷಿ ವಿಶ್ವವಿದ್ಯಾಲಯವು ಹಿರಿಯೂರು ಕೇಂದ್ರದ ಅಭ್ಯರ್ಥಿಗಳಿಗೆ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಮರು ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಯನ್ನು ಮುಂದೂಡಲಾಗಿದೆ. ರಾಜ್ಯಾದ್ಯಂತ ಒಟ್ಟು 24,250 ಅಭ್ಯರ್ಥಿಗಳು ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಜೂ. 1 ರಂದು ನಡೆಯುವ ಪರೀಕ್ಷೆಯ ನಂತರ, ಹಾಜರಾದ ವಿದ್ಯಾರ್ಥಿಗಳ ಅಂಕಗಳ ಪಟ್ಟಿಯನ್ನು ಕೃಷಿ ವಿಶ್ವವಿದ್ಯಾಲಯವು ಕೆಇಎಗೆ ಹಸ್ತಾಂತರಿಸಲಿದೆ. ಈ ಅಂಕಗಳನ್ನು ಕ್ರೋಢೀಕರಿಸಿದ ನಂತರವೇ ಅಧಿಕೃತವಾಗಿ ಸಿಇಟಿ-2026ರ ಫಲಿತಾಂಶ ಹೊರಬರಲಿದೆ.

3.30 ಲಕ್ಷ ಅಭ್ಯರ್ಥಿಗಳು ಭಾಗಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್‌ 22, 23 ಮತ್ತು 24ರಂದು ರಾಜ್ಯದ 745 ಕೇಂದ್ರಗಳಲ್ಲಿ ನಡೆಸಿದ 2026ನೇ ಸಾಲಿನ ಯುಜಿ-ಸಿಇಟಿ ಪರೀಕ್ಷೆಗೆ ಒಟ್ಟು 3,30,479 ವಿದ್ಯಾರ್ಥಿಗಳು ಹಾಜರಾಗಿದ್ದು, 1,86,099 ವಿದ್ಯಾರ್ಥಿನಿಯರು ಹಾಗೂ 1,44,380 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಈ ಪರೀಕ್ಷೆಯ ಫಲಿತಾಂಶಗಳು ಸದ್ಯದಲ್ಲೇ ಪ್ರಕಟವಾಗುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಸ್ಕೋರ್‌ಕಾರ್ಡ್‌ಗಳನ್ನು ಪರಿಶೀಲಿಸಬಹುದಾಗಿದೆ.

Read More
Next Story