KCET 2026: Exam date, dress code, what is the important instruction given by KEA to candidates?
x

ಕೆಇಎ ಕಚೇರಿಯಲ್ಲಿರುವ ವೆಬ್‌ಕಾಸ್ಟಿಂಗ್‌ ಪರಿಶೀಲಿಸುತ್ತಿರವ ಅಧಿಕಾರಿ

KCET 2026: ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ ಪ್ರಕಟ, ಪರೀಕ್ಷೆ ಬಗ್ಗೆ ಕೆಇಎ ನೀಡಿದ ಪ್ರಮುಖ ಸೂಚನೆ ಏನು ?

ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರ ಕಮಾಂಡ್ ಸೆಂಟರ್ ಕೆಇಎ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.


Click the Play button to hear this message in audio format

ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏ. 23 ಮತ್ತು 24 ರಂದು ನಡೆಯಲಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏ. 22ರಂದು ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ನಡೆಯಲಿದೆ. ಏ.23ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಹಾಗೂ ಏ.24ರಂದು ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ನೇಮಕಾತಿ ಪರೀಕ್ಷೆಗಳಿಗೆ ಮಾಡುವ ಹಾಗೆ ಈ ಪರೀಕ್ಷೆಗೂ ಕ್ಯಾಮರಾ ಕಣ್ಗಾವಲು ನಿಗಾ ಇಡಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ಎಲ್ಲ 745 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿದ್ದು, ಕಟ್ಟೆಚ್ಚರವಹಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ. ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಕೂಡ ಅಳವಡಿಸಿದ್ದು, ಅಕ್ರಮಗಳಿಗೆ ಅವಕಾಶ ಇಲ್ಲದಂತೆ ನಿಗಾ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನಗರದಲ್ಲಿ 77 ಸಾವಿರ ಅಭ್ಯರ್ಥಿಗಳ ನೋಂದಣಿ

ಬೆಂಗಳೂರಿನ 163 ಕೇಂದ್ರಗಳಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರ ಕಮಾಂಡ್ ಸೆಂಟರ್ ಕೆಇಎ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಒಟ್ಟು 970 ವಿಶೇಷ ಚೇತನ ಮಕ್ಕಳು ಸಿಇಟಿ ಬರೆಯುತ್ತಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶ್ರವಣ ಸಾಧನ ಬಳಸಿಕೊಂಡು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿರುವ ಕಾರಣ ಅಂತಹವರು ಎರಡು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬರಬೇಕೆಂದು ಅವರು ಸಲಹೆ ನೀಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಪರೀಕ್ಷಾ ಕೇಂದ್ರಗಳಲ್ಲಿನ ಚಟುವಟಿಕೆ ವೀಕ್ಷಿಸುತ್ತಿರುವ ತಾಂತ್ರಿಕ ಸಿಬ್ಬಂದಿಗಳು

ಕ್ಯೂಆರ್ ಕೋಡ್ ಮೂಲಕ ನೈಜತೆ ಪರಿಶೀಲನೆ

ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರದೊಳಗೆ ಬಿಡುವ ಕಾರಣಕ್ಕೆ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕು. ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಯಾರದ್ದೊ ಪರೀಕ್ಷೆಯನ್ನು ಇನ್ಯಾರೊ ಬರೆಯುವುದನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿ ಮಾಡಿದ್ದು, ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ಪ್ರವೇಶ ಆಗುವ ಸಂದರ್ಭದಲ್ಲಿ ಕೂಡ ಅಭ್ಯರ್ಥಿಯ ಭಾವಚಿತ್ರವನ್ನು ಹೋಲಿಕೆ ಮಾಡಿಯೇ ಪ್ರವೇಶ ನೀಡುವ ವ್ಯವಸ್ಥೆ ಮಾಡಿದ್ದು, ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಹೀಗಾಗಿ ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಯಾವುದೇ ಮೋಸವಾಗಲು ಬಿಡುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದು, ನಿಶ್ಚಿಂತೆಯಿಂದ ಪರೀಕ್ಷೆ ಬರೆಯಬಹುದು ಎಂದಿದ್ದಾರೆ.

ಪಿಯುಸಿ ಅಂಕ ಗೊಂದಲ ಬೇಡ

ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾಗಿರುವವರಿಗೆ ಇನ್ನೂ ಫಲಿತಾಂಶವನ್ನು ಉತ್ತಮ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಯಾರೂ ಸಿಇಟಿ ಬರೆಯುವುದನ್ನು ತಪ್ಪಿಸಿಕೊಳ್ಳಬಾರದು. ಹೀಗಾಗಿ ಯಾರೆಲ್ಲ ಶುಲ್ಕ ಪಾವತಿಸಿದ್ದೀರೊ ಅವರೆಲ್ಲರೂ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ಎರಡನೇ ಪರೀಕ್ಷೆಯ ಅಂಕಗಳನ್ನು ಕೂಡ ಸಿಇಟಿ ಫಲಿತಾಂಶಕ್ಕೆ ಪರಿಗಣಿಸಲಾಗುವುದು ಎಂದು ಸಲಹೆ ನೀಡಿದ್ದಾರೆ.

ಕರಡು ಓಎಂಆರ್‌ ಡೌನ್‌ಲೋಡ್‌ಗೆ ಅವಕಾಶ

ಓಎಂಆರ್ ಶೀಟ್ ನಲ್ಲಿ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಯಾವುದೇ ತಪ್ಪಿಲ್ಲದೆ ದಾಖಲಿಸಬೇಕು. ಅಭ್ಯರ್ಥಿಯ ಹೆಸರು, ಸಿಇಟಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್ ಮತ್ತು ಕ್ರಮ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ, ಸಂಬಂಧಿಸಿದ ವೃತ್ತಗಳನ್ನು ಶೇಡ್ ಮಾಡಬೇಕು. ಹಲವು ಪರೀಕ್ಷೆಗಳಲ್ಲಿ ಈ ಮಾಹಿತಿ ಕೂಡ ಸರಿಯಾಗಿ ಭರ್ತಿ ಮಾಡದಿರುವ ಕಾರಣ ಫಲಿತಾಂಶ ಪ್ರಕಟಣೆಗೂ ಸಮಸ್ಯೆಯಾಗಿತ್ತು. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಬೇಕು. ಅಭ್ಯಾಸ ಮಾಡಲಿ ಎನ್ನುವ ಕಾರಣಕ್ಕೆ ಕರಡು ಓಎಂಆರ್ ಸೀಟ್ ಕೂಡ ಪ್ರವೇಶ ಪತ್ರದ ಜತೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಅದನ್ನು ಅಭ್ಯಾಸ ಮಾಡುವುದರ ಮೂಲಕ ಅನಗತ್ಯ ತಪ್ಪುಗಳನ್ನು ತಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಒಟ್ಟು 745 ಕೇಂದ್ರಗಳಲ್ಲಿ ಪರೀಕ್ಷೆ

ಈ ಸಾಲಿನಲ್ಲಿ ಒಟ್ಟು 3,30,479 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, 1,44,380 ಹುಡುಗರು, 1,86,099 ಹುಡುಗಿಯರು, 970 ವಿಶೇಷ ಚೇತನರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಒಟ್ಟು 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 745 ಉಪ ಮುಖ್ಯ ಅಧೀಕ್ಷರು, 745 ವಸ್ತ್ರ ಸಂಹಿತಾಧಿಕಾರಿಗಳು, 12,665 ಪರೀಕ್ಷಾ ಕೇಂದ್ರದ ಸಿಬ್ಬಂದಿ, 15,265 ಸಿಸಿಟಿವಿ ಕ್ಯಾಮರಾ, 13,770 ಕೊಠಡಿ ಮೇಲ್ವಿಚಾರಕರು, 3,304 ಫ್ರಿಸ್ಕಿಂಗ್ ದಳ ಹಾಗೂ 3,304 ಮುಖ ಚಹರೆ ದಳ ನೇಮಿಸಲಾಗಿದೆ.

ವಸ್ತ್ರ ಸಂಹಿತೆ

ಅನಗತ್ಯ ಗೊಂದಲ ತಪ್ಪಿಸಲು ಇದೇ ಮೊದಲ ಬಾರಿಗೆ ಪ್ರತಿ ಕೇಂದ್ರಕ್ಕೆ ಒಬ್ಬ ವಸ್ತ್ರ ಸಂಹಿತೆ ಅಧಿಕಾರಿಯನ್ನು ನೇಮಿಸಲಾಗಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವ ಬಟ್ಟೆ ಹಾಕಿಕೊಂಡು ಬಂದರೆ ಉತ್ತಮ. ಪುರುಷರು, ಜೇಬು ಇಲ್ಲದ ಅಥವಾ ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇರುವುದಿಲ್ಲ. ಶೂ ಕೂಡ ನಿಷೇಧಿಸಲಾಗಿದೆ.

ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಒಮ್ಮೆ ಕೆಇಎ ವೆಬ್‌ಸೈಟ್‌ನಲ್ಲಿರುವ ವಸ್ತ್ರ ಸಂಹಿತೆಯ ವಿವರಗಳನ್ನು ಓದಿಕೊಂಡು, ಆ ಪ್ರಕಾರ ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story