
KCET 2026| ಕೀ ಉತ್ತರಗಳು ಪ್ರಕಟ; ಆಕ್ಷೇಪಣೆ ಸಲ್ಲಿಸಲು ಏ. 30 ಕೊನೆಯ ದಿನಾಂಕ
ಆಕ್ಷೇಪಣೆಗಳನ್ನು ಸಲ್ಲಿಸುವಾಗ ಅಭ್ಯರ್ಥಿಗಳು ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್ ಮತ್ತು ಪ್ರಶ್ನೆ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇತ್ತೀಚೆಗೆ ನಡೆಸಿದ ಯುಜಿಸಿಇಟಿ (KCET) 2026 ಪ್ರವೇಶ ಪರೀಕ್ಷೆಯ ವಿಷಯವಾರು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಪರಿಶೀಲಿಸುವಂತೆ ಸೂಚನೆ ನೀಡಿದೆ.
ಏ. 23 ಮತ್ತು 24 ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಪರೀಕ್ಷೆಗಳು ನಡೆದಿದ್ದವು. ಈ ಪರೀಕ್ಷೆಗಳ ಎಲ್ಲಾ 16 ವರ್ಷನ್‌ಗಳ ಕೀ ಉತ್ತರಗಳನ್ನು ಇದೀಗ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ.
ಆಕ್ಷೇಪಣೆ ಸಲ್ಲಿಸುವುದು ಹೇಗೆ?
ಪ್ರಕಟಿತ ಕೀ ಉತ್ತರಗಳ ಬಗ್ಗೆ ಅಭ್ಯರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು https://cetonline.karnataka.gov.in/kea/ ವೆಬ್‌ಸೈಟ್ ಮೂಲಕ ಏ.30, ಸಂಜೆ 5 ಗಂಟೆಯೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆಕ್ಷೇಪಣೆಗಳನ್ನು ಸಲ್ಲಿಸುವಾಗ ಅಭ್ಯರ್ಥಿಗಳು ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್ ಮತ್ತು ಪ್ರಶ್ನೆ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಕ್ಷೇಪಣೆಯನ್ನು ಸಮರ್ಥಿಸುವ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಅಪ್‌ಲೋಡ್ ಮಾಡಬೇಕು. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದ ಮತ್ತು ಆಧಾರ ರಹಿತವಾದ ಆಕ್ಷೇಪಣೆಗಳನ್ನು ಪ್ರಾಧಿಕಾರವು ಪರಿಗಣಿಸುವುದಿಲ್ಲ. ವಿಷಯ ತಜ್ಞರ ಸಮಿತಿಯು ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ತಿದ್ದುಪಡಿಗೆ ಅವಕಾಶ
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿರುವ ಅಭ್ಯರ್ಥಿಗಳ ಅರ್ಜಿ ತಿದ್ದುಪಡಿಗೆ ಕೆಇಎ ಮತ್ತೊಂದು ಅವಕಾಶ ನೀಡಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಸಲುವಾಗಿ ಅರ್ಜಿ ಸಲ್ಲಿಸಿರುವ ಹಲವರು ಅರ್ಜಿಯಲ್ಲಿನ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿ ಪರಿಗಣಿಸಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಮೇ 3ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ವ್ಯಾಸಂಗದ ವಿವರ, ಮೀಸಲಾತಿ, ಇತರ ಕ್ಷೇಮ್ಸ್ ದಾಖಲಿಸಿಕೊಳ್ಳಲು ಅವಕಾಶವಿದೆ. ಇದೇ ಕೊನೆ ಅವಕಾಶವಾಗಿದ್ದು, ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
ಶೇ.96 ಅಭ್ಯರ್ಥಿಗಳು ಹಾಜರು
2026ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ (KCET) ಒಟ್ಟು 3.30 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು ಅಭ್ಯರ್ಥಿಗಳಲ್ಲಿ ಅಂದಾಜು ಶೇ. 96 ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಜ್ಯಾದ್ಯಂತ ಒಟ್ಟು 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು ಎಂದು ಕೆಇಎ ಮಾಹಿತಿ ನೀಡಿದೆ.

