
ಸಾಂದರ್ಭಿಕ ಚಿತ್ರ
CBSE 10th Result | ಶೀಘ್ರ ಫಲಿತಾಂಶ ಪ್ರಕಟ ಸಾಧ್ಯತೆ; ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು cbse.gov.in , results.cbse.nic.in , ವೆಬ್‌ಸೈಟ್‌ಗಳ ಮೂಲಕ ತಮ್ಮ ಅಂಕಪಟ್ಟಿಯನ್ನು ಪರಿಶೀಲಿಸಬಹುದು.
ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿಯ ಪರೀಕ್ಷಾ ಫಲಿತಾಂಶಕ್ಕೆ ಕೌಂಟ್‌ಡೌನ್ ಶುರುವಾಗಿದೆ. 2026ರ ಸಾಲಿನ ಮೊದಲ ಹಂತದ ಫಲಿತಾಂಶ ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ.
ಮೇ 15ರಿಂದ ಎರಡನೇ ಹಂತದ ಪರೀಕ್ಷೆಗಳು ಆರಂಭವಾಗಲಿರುವ ಕಾರಣ, ಮಂಡಳಿಯು ಫಲಿತಾಂಶವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ವರ್ಷ ಸುಮಾರು 25 ಲಕ್ಷ ವಿದ್ಯಾರ್ಥಿಗಳು ಫೆ. 17 ರಿಂದ ಮಾ. 11 ರವರೆಗೆ ನಡೆದ ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶದ ದಿನದವರೆಗೆ ಕಾಯಬೇಡಿ, ಈಗಲೇ ಡಿಜಿಲಾಕರ್ (DigiLocker) ಖಾತೆ ಸಿದ್ಧಪಡಿಸಿಕೊಳ್ಳಿ ಎಂದು ಮಂಡಳಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.
ಫಲಿತಾಂಶ ನೋಡುವುದು ಹೇಗೆ?
ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು cbse.gov.in , results.cbse.nic.in , ವೆಬ್‌ಸೈಟ್‌ಗಳ ಮೂಲಕ ತಮ್ಮ ಅಂಕಪಟ್ಟಿಯನ್ನು ಪರಿಶೀಲಿಸಬಹುದು. ನಿಮ್ಮ ಲಾಗಿನ್ ಐಡಿ, ರೋಲ್ ನಂಬರ್ ಮತ್ತು ಶಾಲೆಯ ಕೋಡ್ ಬಳಸಿ ಫಲಿತಾಂಶ ಪಡೆಯಬಹುದು.
ʼಅಪಾರ್ʼ ಖಾತೆಯಲ್ಲಿ ಅಂಕಪಟ್ಟಿ ಲಭ್ಯ
ಸಿಬಿಎಸ್‌ಸಿ ಮಂಡಳಿಯು ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣ(ಎಕ್ಸ್) ಮೂಲಕ ವಿದ್ಯಾರ್ಥಿಗಳಿಗೆ ಪ್ರಮುಖ ಸಂದೇಶ ನೀಡಿದ್ದು, "ಫಲಿತಾಂಶ ಬಂದ ತಕ್ಷಣ ಸರ್ವರ್ ದಟ್ಟಣೆ ಇರುವುದರಿಂದ ವಿದ್ಯಾರ್ಥಿಗಳು ಮುಂಚಿತವಾಗಿ APAAR ID ಬಳಸಿ ಖಾತೆ ತೆರೆಯಬೇಕು. ಸಿಬಿಎಸ್‌ಇಗೆ ಲಿಂಕ್ ಆಗಿರುವ APAAR ID ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಅಂಕಪಟ್ಟಿಗಳು ನೇರವಾಗಿ 'ಇಶ್ಯೂಡ್ ಡಾಕ್ಯುಮೆಂಟ್ಸ್' ವಿಭಾಗದಲ್ಲಿ ಲಭ್ಯವಾಗಲಿವೆ ಎಂದು ತಿಳಿಸಿದೆ.
ಎರಡನೇ ಹಂತದ ಪರೀಕ್ಷೆಗೆ ಸಿದ್ಧತೆ
ಈ ಬಾರಿ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಮೊದಲ ಹಂತದ ಮೌಲ್ಯಮಾಪನ ಮುಗಿದಿದೆ. ಮೇ ಮಧ್ಯಭಾಗದಲ್ಲಿ ಎರಡನೇ ಹಂತದ ಪರೀಕ್ಷೆಗಳು ನಡೆಯಲಿರುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ತಯಾರಿ ನಡೆಸಲು ಈ ಫಲಿತಾಂಶ ಸಹಕಾರಿಯಾಗಲಿದೆ.

