
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು 2026ರ ಶೈಕ್ಷಣಿಕ ಸಾಲಿನ 10ನೇ ತರಗತಿಯ ಮೊದಲ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
CBSE Results| 10ನೇ ತರಗತಿ ಫಲಿತಾಂಶ ಪ್ರಕಟ; ಫೇಲಾದರೆ ಮತ್ತೆ ಪರೀಕ್ಷೆ ಬರೆಯಲು ಯಾರು ಅರ್ಹರು?
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಮೇ ತಿಂಗಳಲ್ಲಿ ನಡೆಯುವ ಎರಡನೇ ಬೋರ್ಡ್ ಪರೀಕ್ಷೆಗೆ ಯಾರು ಅರ್ಹರು? ನಿಯಮಗಳೇನು? ವಿವರ ಇಲ್ಲಿದೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳ ಜೊತೆಗೆ ಮೊಬೈಲ್ ಆ್ಯಪ್‌ಗಳ ಮೂಲಕವೂ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.
ಮಧ್ಯಾಹ್ನ 4 ಗಂಟೆಗೆ ಫಲಿತಾಂಶ ಬಿಡುಗಡೆಯಾಗಿದ್ದು, ವೆಬ್‌ಸೈಟ್‌ಗಳ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಈ ಬಾರಿ ಮಂಡಳಿಯು ಡಿಜಿಲಾಕರ್ (DigiLocker) ಮತ್ತು ಉಮಾಂಗ್ (UMANG) ಅಪ್ಲಿಕೇಶನ್‌ಗಳ ಮೂಲಕ ಫಲಿತಾಂಶ ಪಡೆಯಲು ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ತಕ್ಷಣವೇ ಸ್ಕೋರ್‌ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಡಿಜಿಲಾಕರ್ ಮೂಲಕ ಡಿಜಿಟಲ್ ಅಂಕಪಟ್ಟಿ
ಈ ಬಾರಿ ಎಪಿಎಎಆರ್ ಐಡಿ ಹೊಂದಿರುವ ವಿದ್ಯಾರ್ಥಿಗಳು ಡಿಜಿಲಾಕರ್‌ನಲ್ಲಿ ನೇರವಾಗಿ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದು. ಐಡಿ ಇಲ್ಲದವರು ಶಾಲೆಯಿಂದ ನೀಡಲಾದ ಪ್ರವೇಶ ಕೋಡ್ (Access Code) ಬಳಸಿ ಖಾತೆಯನ್ನು ಸಕ್ರಿಯಗೊಳಿಸಿಕೊಂಡು ಫಲಿತಾಂಶ ಪಡೆಯಬಹುದು. ಇದು ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಿಸಲು ಸಹಕಾರಿಯಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸಿನಂತೆ, ಈ ವರ್ಷದಿಂದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಏಪ್ರಿಲ್ 15 ರಂದು ಹೊರಬಿದ್ದ ಫಲಿತಾಂಶದ ಬೆನ್ನಲ್ಲೇ, ಮೇ ತಿಂಗಳಲ್ಲಿ ನಡೆಯಲಿರುವ ಎರಡನೇ ಬೋರ್ಡ್ ಪರೀಕ್ಷೆಗೆ ಯಾರು ಅರ್ಹರು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿದೆ.
ಸಿಬಿಎಸ್‌ಇ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಗರಿಷ್ಠ ಮೂರು ವಿಷಯಗಳಲ್ಲಿ ಎರಡನೇ ಪರೀಕ್ಷೆಯನ್ನು ಬರೆಯಬಹುದಾಗಿದೆ. ಆದರೆ ಇದಕ್ಕೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ವಿಧಿಸಲಾಗಿದೆ. ಮೊದಲನೆಯದಾಗಿ, ವಿದ್ಯಾರ್ಥಿಯು ಮೊದಲ ಬೋರ್ಡ್ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಿರಬೇಕು. ಒಂದು ವೇಳೆ ವಿದ್ಯಾರ್ಥಿಯು ಮೊದಲ ಪರೀಕ್ಷೆಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಿಗೆ ಗೈರುಹಾಜರಾಗಿದ್ದರೆ, ಅಂತಹವರು ಎರಡನೇ ಪರೀಕ್ಷೆ ಬರೆಯಲು ಅರ್ಹರಾಗಿರುವುದಿಲ್ಲ. ಅವರು ಮುಂದಿನ ವರ್ಷದ ಮುಖ್ಯ ಪರೀಕ್ಷೆಯನ್ನೇ ಬರೆಯಬೇಕಾಗುತ್ತದೆ.
ಅರ್ಹತೆಯ ಮಾನದಂಡಗಳೇನು?
ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳಲ್ಲಿ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇದರೊಂದಿಗೆ ಮೊದಲ ಪರೀಕ್ಷೆಯಲ್ಲಿ 'ಕಂಪಾರ್ಟ್‌ಮೆಂಟ್' ಪಡೆದ ವಿದ್ಯಾರ್ಥಿಗಳು ಮತ್ತು 2025ರ ಪರೀಕ್ಷೆಯಲ್ಲಿ ಕಂಪಾರ್ಟ್‌ಮೆಂಟ್ ಪಡೆದಿದ್ದ ಅಭ್ಯರ್ಥಿಗಳಿಗೂ ಎರಡನೇ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಮಂಡಳಿಯಿಂದ ವಿಶೇಷ ಅನುಮತಿ ಪಡೆದ ವಿದ್ಯಾರ್ಥಿಗಳು ಕೂಡ ಇದಕ್ಕೆ ಅರ್ಹರಾಗಿರುತ್ತಾರೆ.ಎರಡನೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಮೊದಲ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳನ್ನೇ ಎರಡನೇ ಪರೀಕ್ಷೆಯಲ್ಲೂ ಮುಂದುವರಿಸಬೇಕು. ವಿಷಯ ಬದಲಾವಣೆಗೆ ಇಲ್ಲಿ ಅವಕಾಶವಿರುವುದಿಲ್ಲ. ಅಲ್ಲದೆ, ವಿದ್ಯಾರ್ಥಿಗಳ ಯಾವುದೇ ವೈಯಕ್ತಿಕ ದತ್ತಾಂಶ ತಿದ್ದುಪಡಿಗೂ ಮಂಡಳಿ ಅವಕಾಶ ನೀಡುವುದಿಲ್ಲ. ಪ್ರತಿ ವಿಷಯಕ್ಕೆ 320 ರೂಪಾಯಿಗಳ ಪರೀಕ್ಷಾ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಮೂರು ವಿಷಯಗಳಿಗೆ ಒಟ್ಟು 960 ರೂಪಾಯಿ ಪಾವತಿಸಬೇಕಾಗುತ್ತದೆ. ಆಯಾ ಶಾಲೆಗಳ ಮೂಲಕವೇ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕೆಂದು ಸಿಬಿಎಸ್‌ಇ ಸೂಚಿಸಿದೆ.

