
ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ (ಸಾಂದರ್ಭಿಕ ಚಿತ್ರ)
KKRTC: ಕುಡಿದ ಮತ್ತಿನಲ್ಲಿ ಕೆಕೆಆರ್ಟಿಸಿ ಬಸ್ ಕದ್ದೊಯ್ದ ವಜಾಗೊಂಡಿದ್ದ ಚಾಲಕ!
ಆರೋಪಿ ಚಾಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕೆಲಸ ಮಾಡುತ್ತಿದ್ದು, ಆತನ ವಿರುದ್ಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಜಾಗೊಂಡಿದ್ದ.
ಯಾದಗಿರಿ ಜಿಲ್ಲೆಯಲ್ಲಿ ಅಚ್ಚರಿಯ ಹಾಗೂ ಆತಂಕಕಾರಿ ಘಟನೆಯೊಂದು ವರದಿಯಾಗಿದ್ದು, ಸೇವೆಯಿಂದ ವಜಾಗೊಂಡಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ಮಾಜಿ ಚಾಲಕನೊಬ್ಬ ಬಸ್ ನಿಲ್ದಾಣದಿಂದಲೇ ಇಡೀ ಬಸ್ ಅನ್ನು ಕದ್ದೊಯ್ದಿದ್ದಾನೆ. ಗುರುವಾರ ತಡರಾತ್ರಿ ಸೈದಾಪುರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಾರಿಗೆ ಇಲಾಖೆಯ ಸಿಬ್ಬಂದಿಯೇ ಬೇಸ್ತು ಬಿದ್ದಿದ್ದಾರೆ.
ಆರೋಪಿ ರಾಚನಳ್ಳಿ ಗ್ರಾಮದ ನಿವಾಸಿ ಮಹಿಪಾಲರೆಡ್ಡಿ ಸಿದ್ದಾರೆಡ್ಡಿ, ಕುಡಿದ ಮತ್ತಿನಲ್ಲಿ ರಾತ್ರಿ ಹೊತ್ತು ಊರಿಗೆ ಹೋಗಲು ಯಾವುದೇ ವಾಹನ ಸಿಗಲಿಲ್ಲ ಎಂಬ ಕಾರಣಕ್ಕೆ ಆರೋಪಿಯು ಈ ಕೃತ್ಯವೆಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಸ್ ಕದ್ದೊಯ್ಯುವ ವಿಡಿಯೊ ಇಲ್ಲಿದೆ ನೋಡಿ
ಕೆಕೆಆರ್ಟಿಸಿಯ ಗುರುಮಠಕಲ್ ಡಿಪೊಗೆ ಸೇರಿದ ಈ ಬಸ್ ಗುರುವಾರ ರಾತ್ರಿ ತನ್ನ ನಿಗದಿತ ಕಾರ್ಯಾಚರಣೆ ಮುಗಿಸಿ ಸೈದಾಪುರ ಬಸ್ ನಿಲ್ದಾಣದಲ್ಲಿ ನಿಂತಿತ್ತು. ಬಸ್ನ ಅಧಿಕೃತ ಚಾಲಕ ಮತ್ತು ನಿರ್ವಾಹಕರು ರಾತ್ರಿಯೂಟ ಸವಿಯಲು ಹಾಗೂ ಟಿಕೆಟ್ ವಿತರಿಸುವ ಇಟಿಎಂ (ETM) ಯಂತ್ರವನ್ನು ಚಾರ್ಜ್ ಮಾಡಲು ತೆರಳಿದ್ದರು. ಇದೇ ಸಮಯ ಆರೋಪಿ, ಮಹಿಪಾಲರೆಡ್ಡಿ ಸಿದ್ದಾರೆಡ್ಡಿ, ನಿಲ್ದಾಣದೊಳಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿಂದ ನೇರವಾಗಿ ಬಸ್ ಚಲಾಯಿಸಿಕೊಂಡು ಹೋಗಿ ತನ್ನ ಗ್ರಾಮವಾದ ರಾಚನಳ್ಳಿಯ ದೇವಸ್ಥಾನವೊಂದರ ಮುಂಭಾಗದಲ್ಲಿ ತಂದು ನಿಲ್ಲಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ಪ್ರಕರಣ ದಾಖಲು
ಗುರುವಾರ ರಾತ್ರಿ ಸುಮಾರು 11.30ರ ಹೊತ್ತಿಗೆ ಆರೋಪಿಯು ಬಸ್ ಕದ್ದು ಚಾಲನೆ ಮಾಡಿಕೊಂಡು ಹೋಗುವ ದೃಶ್ಯಗಳು ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಕಳವು ಮಾಡಿ ಒಯ್ಯುವ ಭರದಲ್ಲಿ ಬಸ್ನ ಹಿಂಭಾಗದ ಗಾಜಿಗೆ ಹಾನಿ ಮಾಡಲಾಗಿದೆ. ಬಸ್ ಕದ್ದೊಯ್ದ ಆರೋಪದ ಮೇರೆಗೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಹಿಪಾಲರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಹಣ ದುರ್ಬಳಕೆ ಹಿನ್ನೆಲೆಯಲ್ಲಿ ವಜಾಗೊಂಡಿದ್ದ ಆರೋಪಿ
ಆರೋಪಿ ಮಹಿಪಾಲರೆಡ್ಡಿ ಈ ಹಿಂದೆ ಇದೇ ಕೆಕೆಆರ್ಟಿಸಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಆತ ಪ್ರಯಾಣಿಕರಿಂದ ಸಂಗ್ರಹಿಸಿದ ಟಿಕೆಟ್ ಹಣವನ್ನು ನಿಗಮಕ್ಕೆ ಸರಿಯಾಗಿ ಪಾವತಿಸದೆ ಅದರಲ್ಲಿಯೇ ಮದ್ಯಪಾನ ಮಾಡಿ ಕರ್ತವ್ಯಲೋಪ ಎಸಗಿದ್ದ. ಆತನ ವಿರುದ್ಧ ಹಲವು ದೂರುಗಳು ಕೇಳಿಬಂದು ಪ್ರಕರಣಗಳೂ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆತನನ್ನು ಇತ್ತೀಚೆಗಷ್ಟೇ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಕೆಕೆಆರ್ಟಿಸಿ ಯಾದಗಿರಿ ವಿಭಾಗದ ನಿಯಂತ್ರಣಾಧಿಕಾರಿ ಜಿ.ಬಿ. ಮಂಜುನಾಥ್, ಗುರುವಾರ ರಾತ್ರಿ ವಿಪರೀತ ಕುಡಿದ ಮತ್ತಿನಲ್ಲಿದ್ದ ಮಹಿಪಾಲರೆಡ್ಡಿಗೆ ತನ್ನೂರಿಗೆ ಹೋಗಲು ಯಾವುದೇ ವಾಹನ ಸಿಕ್ಕಿರಲಿಲ್ಲ, ಹೀಗಾಗಿ ನಿಲ್ದಾಣದಲ್ಲಿದ್ದ ಬಸ್ ಅನ್ನೇ ಕದ್ದೊಯ್ದಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

