
ಧಾರವಾಡ ವೈದ್ಯನ ಕೊಲೆ- ಮಗನಿಗೂ ಇನ್ಸುಲಿನ್ ಇಂಜೆಕ್ಷನ್ ನೀಡಿದ್ದ ಪಾಪಿ ತಾಯಿ ಪ್ರಿಯಾಂಕಾ
ಧಾರವಾಡದ ಪ್ರಸಿದ್ಧ ವೈದ್ಯ ಡಾ. ಕಿರಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪತ್ನಿ ಪ್ರಿಯಾಂಕಾಳ ಕೌಟುಂಬಿಕ ಕಲಹ, ಅನುಮಾನ ಮತ್ತು ಮಗುವಿಗೆ ಇನ್ಸುಲಿನ್ ನೀಡಿದ ಕರಾಳ ಕೃತ್ಯದ ಸಂಪೂರ್ಣ ವಿವರ ಇಲ್ಲಿದೆ.
ಧಾರವಾಡದ ಡಾ. ಕಿರಣ್ ಕೊಲೆ ಪ್ರಕರಣದ ಹಿಂದೆ ಪತ್ನಿ ಡಾ. ಪ್ರಿಯಾಂಕಾಳ ಕ್ರೌರ್ಯದ ಕರಾಳ ಮುಖ ಬಯಲಾಗಿದೆ. ತಾಳಿ ಕಟ್ಟಿದ ಗಂಡ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದರೂ, ಹೆತ್ತ ಮಗ ಸಾವಿನ ದವಡೆಯಲ್ಲಿ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದರೂ ಕಿಂಚಿತ್ತೂ ಕರುಣೆ ತೋರದೆ ಬೆಡ್ ಮೇಲೆ ಮೊಬೈಲ್ ಬಳಸುತ್ತಾ ಮಲಗಿದ್ದ ಹೆಂಡತಿಯ ಅಟ್ಟಹಾಸ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಬೆಡ್ ಮೇಲೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದ ಪತ್ನಿ
ತನ್ನ ಜೀವವನ್ನೇ ಪಣಕ್ಕಿಟ್ಟು ಮಗುವಿಗೆ ಜನ್ಮ ನೀಡುವ ತಾಯಂದಿರ ಮಧ್ಯೆ, ಈಕೆ ಇಡೀ ಸಂಸಾರವನ್ನೇ ರಕ್ತದ ಮಡುವಿನಲ್ಲಿ ತಳ್ಳಿ ವಿಕೃತಿ ಮೆರೆದಿದ್ದಾಳೆ. ಗಂಡನಿಗೆ ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಂದಿದ್ದಲ್ಲದೆ, ತನ್ನ ೮ ವರ್ಷದ ಮಗುವಿಗೂ ಇನ್ಸುಲಿನ್ ಇಂಜೆಕ್ಷನ್ ನೀಡಿ ನರಳುವಂತೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ತಾನೂ ಇನ್ಸುಲಿನ್ ಪಡೆದುಕೊಂಡು ಇಡೀ ಘಟನೆ ನಡೆದ ಬಳಿಕ ಬೆಡ್ ಮೇಲೆ ಆರಾಮಾಗಿ ಮಲಗಿ ಮೊಬೈಲ್ ನೋಡುತ್ತಾ ಕಾಲ ಕಳೆದಿದ್ದಾಳೆ
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆರೋಪಿ ಡಾ. ಪ್ರಿಯಾಂಕಾ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಗುಣಮುಖರಾದ ತಕ್ಷಣ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ.
ಮಗು ಪ್ರಾಣಾಪಾಯದಿಂದ ಪಾರು
ಎಂಟು ವರ್ಷದ ಮಗುವಿಗೆ ಅತಿಯಾದ ಇನ್ಸುಲಿನ್ ಇಂಜೆಕ್ಷನ್ ನೀಡಿದ್ದರಿಂದ ಸಕ್ಕರೆ ಪ್ರಮಾಣ ಅತ್ಯಂತ ಕಡಿಮೆಯಾಗಿತ್ತು. ವೈದ್ಯರ ಸಕಾಲಿಕ ತಪಾಸಣೆಯಿಂದಾಗಿ ಮಗು ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ. ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣವಾಗಿದ್ದು, ಯಾವುದೇ ಹೊರಗಿನ ವ್ಯಕ್ತಿಗಳು ಮನೆಗೆ ಬಂದಿಲ್ಲ ಎಂಬುದು ತನಿಖೆಯಲ್ಲಿ ಖಚಿತಪಟ್ಟಿದೆ. ಕುಟುಂಬಸ್ಥರು ಪ್ರಿಯಾಂಕಾಳ ವಿರುದ್ಧವೇ ದೂರು ನೀಡಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ಶುರುವಾದ ಸ್ನೇಹ
ಕೊಲೆಯಾದ ಡಾ. ಕಿರಣ್ ಹಾಗೂ ಆರೋಪಿ ಡಾ. ಪ್ರಿಯಾಂಕಾ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಮೊದಲ ಸಂಸಾರದಲ್ಲಿ ನೊಂದು ಬೆಂದಿದ್ದ ಇಬ್ಬರಿಗೂ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ ಮದುವೆಯಾಗಿದ್ದರು. ಆದರೆ ಈ ಸುಂದರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದು ಪತ್ನಿಯ ಅತಿಯಾದ ಅನುಮಾನ!
ಹಿಂದೆಯೂ ನಡೆದಿತ್ತು ಕೊಲೆ ಯತ್ನ
ಗಂಡನಿಗೆ ಬೇರೆ ಹೆಣ್ಣುಮಕ್ಕಳ ಜೊತೆ ಸಂಪರ್ಕವಿದೆ ಎಂದು ಸದಾ ಗಲಾಟೆ ಮಾಡುತ್ತಿದ್ದ ಪ್ರಿಯಾಂಕಾ ಇತ್ತೀಚಿಗೆ ರಣಚಂಡಿಯಾಗಿದ್ದಳು. ಕೆಲವು ದಿನಗಳ ಹಿಂದೆಯೂ ಕಿರಣ್ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಳು. ಆದರೆ ಆಗ ಕಿರಣ್ ಬಚಾವ್ ಆಗಿದ್ದರಿಂದ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೊನ್ನೆ ಬೆಳಗ್ಗಿನ ಜಾವ ಏಕಾಏಕಿ ಗಂಡನ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಸದ್ಯ ಪೊಲೀಸರು ಆರೋಪಿಯ ಡಿಸ್ಚಾರ್ಜ್‌ಗಾಗಿ ಕಾಯುತ್ತಿದ್ದು, ಆಕೆ ಕಸ್ಟಡಿಗೆ ಸಿಕ್ಕ ನಂತರ ಇಡೀ ಕೃತ್ಯದ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.

