
Yogesh Gowda murder: ವಿನಯ್ ಕುಲಕರ್ಣಿ ಸೇರಿ ಇತರರಿಗೆ ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟ
ನ್ಯಾಯಾಧೀಶರ ಮುಂದೆ ಪ್ರತಿಯೊಬ್ಬ ಅಪರಾಧಿಯೂ ತಮ್ಮ ವೈಯಕ್ತಿಕ ಸಮಸ್ಯೆಗಳು, ಆರೋಗ್ಯದ ಸ್ಥಿತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ವಿವರಿಸುತ್ತಾ ಶಿಕ್ಷೆ ಕಡಿಮೆ ಮಾಡುವಂತೆ ಮನವಿ ಮಾಡಿದರು.
ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣವು ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಅಪರಾಧಿಗಳ ವಾದವನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರಕ್ಕೆ ಶಿಕ್ಷೆಯ ಪ್ರಮಾಣ ಘೋಷಣೆ ಮಾಡುವುದಾಗಿ ಹೇಳಿದೆ.
ಗುರುವಾರ ಅಪರಾಧಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಶುಕ್ರವಾರಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಎಲ್ಲಾ ಸಾಕ್ಷ್ಯಧಾರಗಳನ್ನು ಪರಿಶೀಲಿಸಿ ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ದೋಷಿಗಳು ಎಂದು ತೀರ್ಪು ನೀಡಿತ್ತು. ಗುರುವಾರ ಶಿಕ್ಷೆಯ ಪ್ರಮಾಣದ ಕುರಿತು ಸುದೀರ್ಘ ವಾದ-ಪ್ರತಿವಾದ ನಡೆಯಿತು. ನ್ಯಾಯಾಧೀಶರ ಮುಂದೆ ಪ್ರತಿಯೊಬ್ಬ ಅಪರಾಧಿಯೂ ತಮ್ಮ ವೈಯಕ್ತಿಕ ಸಮಸ್ಯೆಗಳು, ಆರೋಗ್ಯದ ಸ್ಥಿತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ವಿವರಿಸುತ್ತಾ ಶಿಕ್ಷೆ ಕಡಿಮೆ ಮಾಡುವಂತೆ ಮನವಿ ಮಾಡಿದರು.
ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ವಿನಯ್ ಕುಲಕರ್ಣಿ
ಪ್ರಕರಣದ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರು ನ್ಯಾಯಾಧೀಶರ ಮುಂದೆ ಅಕ್ಷರಶಃ ಕಣ್ಣೀರಿಟ್ಟರು. ತಮ್ಮ ಅಭಿಪ್ರಾಯವನ್ನು ತಿಳಿಸಿದ ವಿನಯ್ ಕುಲಕರ್ಣಿ, ನಾನು ಕಳೆದ 27 ವರ್ಷಗಳಿಂದ ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ. ರಾಜಕೀಯದಲ್ಲಿ ಜನಸೇವೆಯನ್ನು ಮಾಡುತ್ತಾ ಬಂದಿದ್ದೇನೆ ಹೊರತು, ಈವರೆಗೆ ಯಾರಿಗೂ ನೋವು ನೀಡಿಲ್ಲ. ನನಗೆ ಮದುವೆ ವಯಸ್ಸಿಗೆ ಬಂದಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಭವಿಷ್ಯದ ಜವಾಬ್ದಾರಿ ನನ್ನ ಮೇಲಿದೆ. ನಾನೊಬ್ಬ ಕೃಷಿಕನಾಗಿದ್ದು, ಸುಮಾರು ಮೂರೂವರೆ ಸಾವಿರ ಹಸುಗಳನ್ನು ಸಾಕುತ್ತಿದ್ದೇನೆ. ಹೈನುಗಾರಿಕೆ ಮತ್ತು ಕೃಷಿಯನ್ನು ನೆಚ್ಚಿಕೊಂಡಿರುವ ನನ್ನನ್ನು ನಂಬಿ ನೂರಾರು ಕುಟುಂಬಗಳು ಬದುಕುತ್ತಿವೆ. ಇದು ರಾಜಕೀಯ ಪ್ರೇರಿತ ಸಂಚು. ರಾಜಕೀಯ ದ್ವೇಷದ ಕಾರಣದಿಂದಲೇ ನನ್ನ ಮೇಲೆ ಇಂತಹ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ ಎಂದರು.
ಇತರ ಅಪರಾಧಿಗಳ ಅಳಲು
ವಿನಯ್ ಕುಲಕರ್ಣಿ ಅವರಲ್ಲದೆ, ಉಳಿದ 16 ಅಪರಾಧಿಗಳು ಕೂಡ ತಮಗಿರುವ ಕೌಟುಂಬಿಕ ಮತ್ತು ಆರೋಗ್ಯದ ಸಮಸ್ಯೆಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದರು. ಅಪರಾಧಿ-4 ಮತ್ತು 4 ಆಟೋ ಹಾಗೂ ಕಾರ್ ಚಾಲಕರಾಗಿದ್ದು, ತಮಗೆ ವಯಸ್ಸಾದ ತಂದೆ-ತಾಯಿಯರಿದ್ದಾರೆ, ಮನೆಯಲ್ಲಿ ತಾವೊಬ್ಬರೇ ದುಡಿಯುವವರಾಗಿದ್ದು, ಶಿಕ್ಷೆ ಕಠಿಣವಾದರೆ ಅವರ ಜೀವನ ಬೀದಿಗೆ ಬೀಳುತ್ತದೆ ಎಂದು ವಿನಂತಿಸಿದರು. ಅಪರಾಧಿ-5 ರಿಯಲ್ ಎಸ್ಟೇಟ್ ಉದ್ಯೋಗಿಯಾಗಿದ್ದು, ತಮ್ಮ ಪೋಷಕರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಹೇಳಿದರು. ಅಪರಾಧಿ-9, 10, 11 ವಯಸ್ಸಾದ ತಾಯಿ ಮಾತ್ರ ಇದ್ದಾರೆ. ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಕರುಣೆ ತೋರುವಂತೆ ಮನವಿ ಮಾಡಿದರು. ಅಪರಾಧಿ-6, 12, 18 ವೃತ್ತಿಯಲ್ಲಿ ಟೈಲರ್, ಗುತ್ತಿಗೆದಾರರು ಮತ್ತು ಕೃಷಿಕರಾಗಿದ್ದು, ಇವರಿಗೆ 4 ರಿಂದ 7 ವರ್ಷದ ಚಿಕ್ಕ ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯನ್ನೂ ನ್ಯಾಯಾಲಯದ ಮುಂದೆ ವಿವರಿಸಿದರು.
ಅಪರಾಧಿ-13 ಅವರಿಗೆ ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ. ಅಪರಾಧಿ-16 ದಂಪತಿ ಇಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ತಮ್ಮ ಮೊಮ್ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಅಪರಾಧಿ-7 ತೀವ್ರ ಕಣ್ಣಿನ ಸಮಸ್ಯೆಯಿಂದ ದೃಷ್ಟಿ ದೋಷ ಎದುರಿಸುತ್ತಿದ್ದಾರೆ. ಅಪರಾಧಿ-19 ಅವರು ತಾವು ಈವರೆಗೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಮತ್ತು ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದು, ಈ ಹಿಂದೆ ನಗದು ಪ್ರಶಸ್ತಿ ಪಡೆದಿದ್ದನ್ನೂ ಉಲ್ಲೇಖಿಸಿದರು.
ಏನು ಸಂಭವಿಸಬಹುದು?
ಬಲವಾದ ಸಾಕ್ಷ್ಯಾಧಾರಗಳ ಮೇಲೆ ನ್ಯಾಯಾಲಯವು ಇವರನ್ನು ದೋಷಿಗಳೆಂದು ಪರಿಗಣಿಸಿದೆ. ಸಾಮಾನ್ಯವಾಗಿ ಹತ್ಯೆ ಪ್ರಕರಣದಲ್ಲಿ ದೋಷಿಗಳಾದವರಿಗೆ ಜೀವಾವಧಿ ಶಿಕ್ಷೆ ಅಥವಾ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇರುತ್ತದೆ. ಆದರೆ, ಅಪರಾಧಿಗಳು ಸಲ್ಲಿಸಿರುವ ಮನವಿಗಳು ಮತ್ತು ಅವರ ವೈಯಕ್ತಿಕ ಹಿನ್ನೆಲೆಯನ್ನು ನ್ಯಾಯಾಧೀಶರು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದರ ಮೇಲೆ ಶಿಕ್ಷೆಯ ಪ್ರಮಾಣ ನಿರ್ಧಾರವಾಗಲಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು 2016ರ ಜೂ.15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ವೊಂದರಲ್ಲಿ ಹತ್ಯೆ ಮಾಡಲಾಗಿತ್ತು. ಮುಂಜಾನೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ದುಷ್ಕರ್ಮಿಗಳು ನುಗ್ಗಿ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಈ ಕೊಲೆ ಪ್ರಕರಣವು ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ನಂತರ ಪ್ರಕರಣದ ಗಂಭೀರತೆ ಮತ್ತು ರಾಜಕೀಯ ನಂಟಿನ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯ ವೇಳೆ ವಿನಯ್ ಕುಲಕರ್ಣಿ ಅವರ ಪಾತ್ರವಿರುವುದು ಬೆಳಕಿಗೆ ಬಂದಿತ್ತು.

