Yogesh Gowda Murder Case: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ:  ಶಾಸಕತ್ವ ರದ್ದು ಗ್ಯಾರಂಟಿ
x

Yogesh Gowda Murder Case: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ಶಾಸಕತ್ವ ರದ್ದು ಗ್ಯಾರಂಟಿ

ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಅಪರಾಧಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಬುಧವಾರ ತೀರ್ಪು ನೀಡಿದ್ದರು.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಅಪರಾಧಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಬುಧವಾರ ತೀರ್ಪು ನೀಡಿದ್ದರು. ಗುರುವಾರ ಶಿಕ್ಷೆಯ ಪ್ರಮಾಣ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಪರಾಧಿಗಳ ಮನವಿಯನ್ನು ಆಲಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಶಿಕ್ಷೆಯ ಪ್ರಮಾಣ ಘೋಷಿಸಿ ತೀರ್ಪು ನೀಡಿದರು. ಪ್ರಕರಣದ 9ನೇ ಆರೋಪಿಗೆ ಏಳು ವರ್ಷಗಳ ಶಿಕ್ಷೆ ನೀಡಲಾಗಿದೆ. ಉಳಿದ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಲಾಗಿದೆ.

ಶಾಸಕತ್ವ ಸ್ಥಾನ ರದ್ದು

ಜೀವಾವಧಿ ಶಿಕ್ಷೆಗೊಳಗಾಗಿರುವ ಹಿನ್ನೆಲೆಯಲ್ಲಿ ವಿನಯ್‌ ಕುಲಕರ್ಣಿ ಶಾಸಕತ್ವ ಸ್ಥಾನ ರದ್ದು ಆಗಲಿದೆ. ಈ ಬಗ್ಗೆ ವಿಧಾನಸಭೆಯ ಕಾರ್ಯದರ್ಶಿ ಅವರು ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದ್ದಾರೆ. ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೊಳಗಾದ ಹಿನ್ನೆಲೆಯಲ್ಲಿ ಶಾಸಕತ್ವ ರದ್ದುಗೊಳಲಿದೆ.

ಜನಪ್ರತಿನಿಧಿ ಕಾಯ್ದೆಯ 1951 ಸೆಕ್ಷನ್ 8(3) ರ ಪ್ರಕಾರ, ಯಾವುದೇ ಒಬ್ಬ ಶಾಸಕ ಅಥವಾ ಸಂಸದ ಯಾವುದೇ ಅಪರಾಧಕ್ಕಾಗಿ ಕನಿಷ್ಠ ಎರಡು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದರೆ, ಅವರು ಶಿಕ್ಷೆಯಾದ ಕ್ಷಣದಿಂದಲೇ ಅನರ್ಹರಾಗುತ್ತಾರೆ. 2013ಕ್ಕಿಂತ ಮೊದಲು, ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(4) ರ ಅಡಿಯಲ್ಲಿ ಶಿಕ್ಷೆಗೊಳಗಾದ ಶಾಸಕರಿಗೆ ಒಂದು ರಕ್ಷಣೆ ಇತ್ತು. ಶಿಕ್ಷೆಯಾದ ನಂತರ ಮೇಲ್ಮನವಿ ಸಲ್ಲಿಸಲು ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತಿತ್ತು ಮತ್ತು ಆ ಅವಧಿಯಲ್ಲಿ ಅವರ ಸದಸ್ಯತ್ವ ರದ್ದಾಗುತ್ತಿರಲಿಲ್ಲ.

ಆದರೆ, 2013ರಲ್ಲಿ 'ಲಿಲಿ ಥಾಮಸ್' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಸೆಕ್ಷನ್ 8(4) ಅನ್ನು ಅಸಂವಿಧಾನಿಕ ಎಂದು ಘೋಷಿಸಿತು. ಈ ತೀರ್ಪಿನ ನಂತರ ಶಿಕ್ಷೆಯಾದ ತಕ್ಷಣ ಜನಪ್ರತಿನಿಧಿಯ ಸದಸ್ಯತ್ವ ರದ್ದಾಗುತ್ತದೆ. ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಕಾಲ ಕಾಯುವ ಅವಶ್ಯಕತೆಯಿಲ್ಲ. ನ್ಯಾಯಾಲಯವು ಶಿಕ್ಷೆಗೆ ತಡೆ ನೀಡದ ಹೊರತು ಅನರ್ಹತೆ ಮುಂದುವರಿಯುತ್ತದೆ.

ಒಬ್ಬ ಜನಪ್ರತಿನಿಧಿಗೆ ಎರಡು ವರ್ಷ ಶಿಕ್ಷೆಯಾದರೆ, ಅವರು ಶಿಕ್ಷೆ ಅನುಭವಿಸುವ ಅವಧಿಯ ಜೊತೆಗೆ, ಜೈಲಿನಿಂದ ಬಿಡುಗಡೆಯಾದ ನಂತರದ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ. ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ ಕೇವಲ ಶಿಕ್ಷೆಯನ್ನು ಅಮಾನತುಗೊಳಿಸಿದರೆ ಸಾಲದು, ಬದಲಾಗಿ ದೋಷಾರೋಪಣೆ ಅಥವಾ ಶಿಕ್ಷೆಯ ತೀರ್ಪಿಗೆ ತಡೆ ನೀಡಬೇಕು. ನ್ಯಾಯಾಲಯವು ದೋಷಾರೋಪಣೆಗೆ ತಡೆ ನೀಡಿದರೆ ಮಾತ್ರ ಅವರ ಶಾಸಕ ಸ್ಥಾನವು ಮರುಸ್ಥಾಪನೆಯಾಗಲು ಸಾಧ್ಯವಿದೆ.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು 2016ರ ಜೂ.15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ವೊಂದರಲ್ಲಿ ಹತ್ಯೆ ಮಾಡಲಾಗಿತ್ತು. ಮುಂಜಾನೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ದುಷ್ಕರ್ಮಿಗಳು ನುಗ್ಗಿ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಈ ಕೊಲೆ ಪ್ರಕರಣವು ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ನಂತರ ಪ್ರಕರಣದ ಗಂಭೀರತೆ ಮತ್ತು ರಾಜಕೀಯ ನಂಟಿನ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯ ವೇಳೆ ವಿನಯ್ ಕುಲಕರ್ಣಿ ಅವರ ಪಾತ್ರವಿರುವುದು ಬೆಳಕಿಗೆ ಬಂದಿತ್ತು.

ಸಿಬಿಐ ತನಿಖೆ - ರಾಜಕೀಯ ತಿರುವು

ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಮತ್ತು ಸಹೋದರ ಗುರುನಾಥ ಗೌಡ ಇದೊಂದು ರಾಜಕೀಯ ಸುಪಾರಿ ಕೊಲೆ ಎಂದು ಆರೋಪಿಸಿದರು. ನಂತರ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಯಿತು, ಆದರೆ ಅಲ್ಲೂ ಕುಟುಂಬಸ್ಥರಿಗೆ ನ್ಯಾಯ ಸಿಗಲಿಲ್ಲ. ಬಳಿಕ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸುದೀರ್ಘ ಕಾನೂನು ಹೋರಾಟ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2019ರಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿತು. ಸಿಬಿಐ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಂಡ ಮೇಲೆ ತನಿಖೆ ಹೊಸ ವೇಗವನ್ನು ಪಡೆಯಿತು. ಕೊಲೆಯ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಒಳಸಂಚು ಇದೆ ಎಂಬ ಗಂಭೀರ ಆರೋಪ ಕೇಳಿಬಂತು. ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು, ಅಂತಿಮವಾಗಿ 2020ರ ನವೆಂಬರ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದರು. ಪ್ರಕರಣದಲ್ಲಿ ಕೇವಲ ರಾಜಕೀಯ ವ್ಯಕ್ತಿಗಳಲ್ಲದೆ, ಸಾಕ್ಷ್ಯ ನಾಶಕ್ಕೆ ಸಹಕರಿಸಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 21 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಯಿತು.

ಸಿಬಿಐ ಪ್ರವೇಶದಿಂದ ಪ್ರಕರಣಕ್ಕೆ ತಿರುವು

2018ರಲ್ಲಿ ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಿ, 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿತು. ಯೋಗೇಶ್ ಗೌಡ ಅವರ ಕುಟುಂಬದ ಸತತ ಮನವಿ ಮತ್ತು ಅಂದಿನ ಬಿಜೆಪಿ ನಾಯಕರ ಒತ್ತಾಯದ ಮೇರೆಗೆ ಸರ್ಕಾರವು ಪ್ರಕರಣವನ್ನು ಸಿಬಿಐಗೆ ತನಿಖೆಗೆ ಹಸ್ತಾಂತರಿಸಿತು.

ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿ ಮೊಕ್ಕಾಂ ಹೂಡಿ ಹಳೆಯ ಕಡತಗಳನ್ನು ಕೆದಕಿದಾಗ ಅಚ್ಚರಿಯ ಸಂಗತಿಗಳು ಹೊರಬಂದವು. ಪೊಲೀಸರು ಮತ್ತು ಸಿಐಡಿ ಈ ಹಿಂದೆ ಸಲ್ಲಿಸಿದ್ದ ವರದಿಗಿಂತ ಭಿನ್ನವಾದ ಸತ್ಯಗಳು ಬೆಳಕಿಗೆ ಬಂದವು. ಕೊಲೆಗೆ ಬಳಸಿದ್ದ ಆಯುಧಗಳು, ಆರೋಪಿಗಳ ನಡುವಿನ ಫೋನ್ ಕರೆಗಳ ದಾಖಲೆ ಮತ್ತು ಕೊಲೆಗಾರರಿಗೆ ನೀಡಲಾದ ಹಣದ ಮೂಲವನ್ನು ಸಿಬಿಐ ಪತ್ತೆಹಚ್ಚಿತು.

ಶಾಸಕ ವಿನಯ್ ಕುಲಕರ್ಣಿ ಬಂಧನ

ಸಿಬಿಐ ತನಿಖೆಯು ಕಾಂಗ್ರೆಸ್‌ನ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರತ್ತ ಬೆರಳು ಮಾಡಿತು. 2020ರ ನ.5 ರಂದು ಸಿಬಿಐ ಅಧಿಕಾರಿಗಳು ಧಾರವಾಡದ ನಿವಾಸದ ಮೇಲೆ ದಾಳಿ ಮಾಡಿ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದರು. ಸುದೀರ್ಘ ವಿಚಾರಣೆಯ ನಂತರ ಅವರನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಯಿತು. ಸಿಬಿಐ ಸಲ್ಲಿಸಿದ ಆರೋಪಪಟ್ಟಿ ಪ್ರಕಾರ, ಯೋಗೇಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ತೀವ್ರ ರಾಜಕೀಯ ಪೈಪೋಟಿ ಇತ್ತು. ಯೋಗೇಶ್ ಗೌಡರು ವಿನಯ್ ಕುಲಕರ್ಣಿ ಅವರ ಭದ್ರಕೋಟೆಯಲ್ಲೇ ಅವರಿಗೆ ಸವಾಲಾಗಿದ್ದರು. ಧಾರವಾಡ ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ನಡೆದ ವಾಗ್ವಾದ ಮತ್ತು ಜಮೀನು ವಿಚಾರದ ನೆಪದಲ್ಲಿ ನಡೆದ ವೈಷಮ್ಯವು ಕೊಲೆಗೆ ಪ್ರಚೋದನೆ ನೀಡಿತು. ವಿನಯ್ ಕುಲಕರ್ಣಿ ಅವರ ಸೂಚನೆಯ ಮೇರೆಗೆ ಅವರ ಆಪ್ತರು ಸುಪಾರಿ ನೀಡಿ ಈ ಹತ್ಯೆ ಮಾಡಿಸಿದ್ದಾರೆ ಎಂಬುದು ಸಿಬಿಐ ವಾದವಾಗಿತ್ತು.

Read More
Next Story