Yogesh Gowda Murder Case| ಶಾಸಕ ವಿನಯ್‌ ಕುಲಕರ್ಣಿ ಕೈದಿ ನಂಬರ್ 16110‌
x

Yogesh Gowda Murder Case| ಶಾಸಕ ವಿನಯ್‌ ಕುಲಕರ್ಣಿ ಕೈದಿ ನಂಬರ್ 16110‌

ಜೈಲಿನ ನಿಯಮಾವಳಿಗಳ ಪ್ರಕಾರ ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ ಜೈಲಿನ ದಾಖಲೆ ಪುಸ್ತಕದಲ್ಲಿ ವಿನಯ್‌ ಕುಲಕರ್ಣಿ ಹೆಸರನ್ನು ನಮೂದಿಸಲಾಯಿತು. ಈ ವೇಳೆ ಅವರಿಗೆ 16110 ಕೈದಿ ಸಂಖ್ಯೆಯನ್ನು ನೀಡಲಾಯಿತು.


Click the Play button to hear this message in audio format

ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶಾಸಕ ವಿನಯ್‌ ಕುಲಕರ್ಣಿಗೆ 16110 ಎಂಬ ಸಂಖ್ಯೆಯ ಕೈದಿ ನಂಬರ್‌ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಂಖ್ಯೆಯ ಗುರುತು ನೀಡಲಾಗಿದೆ.

ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಪೊಲೀಸರು ವಿನಯ್ ಕುಲಕರ್ಣಿ ಮತ್ತು ಇತರ ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ಜೈಲಿನ ನಿಯಮಾವಳಿಗಳ ಪ್ರಕಾರ ಅವರ ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ ಜೈಲಿನ ದಾಖಲೆ ಪುಸ್ತಕದಲ್ಲಿ ಅವರ ಹೆಸರನ್ನು ನಮೂದಿಸಲಾಯಿತು. ಈ ವೇಳೆ ವಿನಯ್ ಕುಲಕರ್ಣಿ ಅವರಿಗೆ 16110 ಎಂಬ ಸಜಾ ಕೈದಿ ಸಂಖ್ಯೆಯನ್ನು ನೀಡಲಾಯಿತು. ಇತರೆ ಅಪರಾಧಿಗಳಿಗೂ ಕೈದಿ ನಂಬರ್‌ ನೀಡಲಾಗಿದೆ. ಜನರ ಮಧ್ಯೆ ಇರುತ್ತಿದ್ದ ನಾಯಕನಿಗೆ ಈಗ ಬಿಳಿ ಬಣ್ಣದ ಕೈದಿ ವಸ್ತ್ರವನ್ನು ನೀಡಲಾಗಿದೆ. ಅಧಿಕಾರದ ದರ್ಪದ ಬಟ್ಟೆಗಳನ್ನು ಕಳಚಿಟ್ಟು, ಸಾಮಾನ್ಯ ಕೈದಿಯಂತೆ ಬಿಳಿ ವಸ್ತ್ರ ಧರಿಸಿದಾಗ ಅವರ ಮುಖ ಮಂಕಾಗಿತ್ತು ಎಂದು ಮೂಲಗಳು ಹೇಳಿವೆ.

ಜೈಲಿನಲ್ಲಿ ಕಳೆದ ಮೊದಲ ರಾತ್ರಿ - ಮೌನಕ್ಕೆ ಶರಣಾದ ನಾಯಕ

ಜೈಲಿನ ಮೂಲಗಳ ಪ್ರಕಾರ, ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರಕ್ಕೆ ಬಂದ ಮೊದಲ ದಿನವೇ ಕುಗ್ಗಿಹೋಗಿದ್ದರು. ಜೈಲಿನ ಕೋಣೆ ಹಾಗೂ ಅಲ್ಲಿನ ವಾತಾವರಣ ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ನಡವಳಿಕೆಯಿಂದ ಸ್ಪಷ್ಟವಾಗುತ್ತಿತ್ತು. ಜೈಲಿನ ಮೆನುವಿನಂತೆ ನೀಡಲಾದ ರಾಗಿಮುದ್ದೆ ಮತ್ತು ಅನ್ನ-ಸಾರನ್ನು ಅವರು ಮೌನವಾಗಿಯೇ ಸ್ವೀಕರಿಸಿದರು. ಹೆಚ್ಚಿನ ಆಹಾರ ಸೇವಿಸಲು ಅವರು ಮನಸ್ಸು ಮಾಡಲಿಲ್ಲ ಎಂದು ತಿಳಿದುಬಂದಿದೆ. ಐಷಾರಾಮಿ ಜೀವನ ನಡೆಸುತ್ತಿದ್ದ ವಿನಯ್ ಕುಲಕರ್ಣಿ ಅವರಿಗೆ ಜೈಲಿನಲ್ಲಿ ಮಲಗುವುದು ಅತೀವ ಕಷ್ಟಕರವಾಗಿತ್ತು. ತಡರಾತ್ರಿಯವರೆಗೂ ನಿದ್ದೆ ಬಾರದೆ ಅವರು ಚಿಂತಾಕ್ರಾಂತರಾಗಿದ್ದರು. ತನ್ನ ರಾಜಕೀಯ ಜೀವನ ಮತ್ತು ಭವಿಷ್ಯದ ಬಗ್ಗೆ ಯೋಚಿಸುತ್ತಾ ಕಂಬಿಗಳ ಹಿಂದೆ ಮಂಕಾಗಿ ಕುಳಿತಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡದೆ, ಒಬ್ಬರೇ ಕುಳಿತ ದೃಶ್ಯ ಜೈಲಿನ ಸಿಬ್ಬಂದಿಯ ಗಮನಕ್ಕೆ ಬಂದಿವೆ.

ಪ್ರಕರಣದ ಹಿನ್ನೆಲೆ

2016 ರ ಜೂ.15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಇದು ಸ್ಥಳೀಯ ಆಸ್ತಿ ವಿವಾದ ಅಥವಾ ವೈಯಕ್ತಿಕ ದ್ವೇಷದ ಹತ್ಯೆ ಎಂದು ಬಿಂಬಿತವಾಗಿತ್ತಾದರೂ, ನಂತರದ ದಿನಗಳಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬ ಆರೋಪ ಕೇಳಿಬಂತು. ಯೋಗೇಶ್ ಗೌಡ ಅವರ ಪತ್ನಿ ಮತ್ತು ಕುಟುಂಬಸ್ಥರು ಈ ಪ್ರಕರಣದಲ್ಲಿ ಅಂದಿನ ಪ್ರಭಾವಿ ಸಚಿವ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂದು ಗಂಭೀರವಾಗಿ ದೂಷಿಸಿದ್ದರು. ರಾಜ್ಯ ಪೊಲೀಸ್ ತನಿಖೆಯ ನಂತರ ಪ್ರಕರಣವು ಸಿಬಿಐ ವಶಕ್ಕೆ ಪಡೆಯಿತು. ಸುದೀರ್ಘ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ಕೊಲೆಗೆ ಸಂಚು ರೂಪಿಸಿದ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸುಧೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು. ಆರೋಪಿಗಳ ವಿರುದ್ಧದ ಸಾಕ್ಷ್ಯಗಳು ಪ್ರಬಲವಾಗಿದ್ದರಿಂದ, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಯಿತು. ಮತ್ತೊಬ್ಬ ಅಪರಾಧಿಗೆ 7 ವರ್ಷಗಳ ಜೈಲು ಶಿಕ್ಷೆ ನೀಡಲಾಯಿತು.

Read More
Next Story