Yogeshgowda murder case: ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ
x

Yogeshgowda murder case: ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ

ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ, ಯಾವುದೇ ಜನಪ್ರತಿನಿಧಿಗೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಕ್ಷೆಯಾದರೆ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶಾಸಕ ವಿನಯ್‌ ಕುಲಕರ್ಣಿ ಸೇರಿ ಇಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದ ಬಳಿಕ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ವಿನಯ್ ಕುಲಕರ್ಣಿ ಮತ್ತು ಮತ್ತೊಬ್ಬ ಅಪರಾಧಿ ಚಂದ್ರಶೇಖರ್ ಇಂಡಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಕೆಳ ನ್ಯಾಯಾಲಯ ನೀಡಿದ ಜೀವಾವಧಿ ಶಿಕ್ಷೆಯ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಮತ್ತು ಶಿಕ್ಷೆಯನ್ನು ಅಮಾನತಿನಲ್ಲಿ ಇಡಬೇಕು ಎಂದು ಕೋರಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ, ಯಾವುದೇ ಜನಪ್ರತಿನಿಧಿಗೆ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಕ್ಷೆಯಾದರೆ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ತೀರ್ಪು ಪ್ರಕಟವಾದ 90 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಿ ತೀರ್ಪಿಗೆ ತಡೆಯಾಜ್ಞೆ ತರದಿದ್ದರೆ ಶಾಸಕ ಸ್ಥಾನ ಅನರ್ಹವಾಗುವ ಭೀತಿ ವಿನಯ್ ಕುಲಕರ್ಣಿ ಅವರಿಗಿದೆ. ಹೀಗಾಗಿ, ರಾಜಕೀಯ ಭವಿಷ್ಯವನ್ನು ಉಳಿಸಿಕೊಳ್ಳಲು ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿಬಿಐ ತನಿಖೆಯಲ್ಲಿ ಹಲವು ಲೋಪಗಳಿವೆ ಮತ್ತು ತಮ್ಮ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನಷ್ಟೇ ಬಳಸಲಾಗಿದೆ ಎಂಬ ವಾದವನ್ನು ಮೇಲ್ಮನವಿಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.

ಧಾರವಾಡದ ಪ್ರಭಾವಿ ನಾಯಕರಾಗಿರುವ ವಿನಯ್ ಕುಲಕರ್ಣಿ ಅವರಿಗೆ ಈ ತೀರ್ಪು ದೊಡ್ಡ ಹೊಡೆತ ನೀಡಿದೆ. ಹೈಕೋರ್ಟ್‌ನಲ್ಲಿ ತೀರ್ಪಿಗೆ ತಡೆಯಾಜ್ಞೆ ಸಿಗದಿದ್ದರೆ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆ. ಇದು ಕೇವಲ ಕಾನೂನು ಹೋರಾಟವಲ್ಲದೆ, ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಸೋಮವಾರದ ವಿಚಾರಣೆಗೆ ಬರುವ ಸಾಧ್ಯತೆ ಇದೆ.

2016ರ ಜೂ.15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಒಡೆತನದ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಯೋಗೇಶ್ ಗೌಡ ಅವರು ಧಾರವಾಡ ಜಿಲ್ಲಾ ಪಂಚಾಯತ್‌ನ ಬಿಜೆಪಿ ಸದಸ್ಯರಾಗಿದ್ದರು. ಅಂದು ಬೆಳಿಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಹಂತಕರು ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು. ಈ ಕೊಲೆಯು ಕೇವಲ ವೈಯಕ್ತಿಕ ದ್ವೇಷವೋ ಅಥವಾ ರಾಜಕೀಯ ಪ್ರೇರಿತವೋ ಎಂಬ ಪ್ರಶ್ನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು.

ತನಿಖೆಯ ಹಾದಿ ಹಾಗೂ ಸಿಬಿಐ ಪ್ರವೇಶ

ಆರಂಭದಲ್ಲಿ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಆದರೆ, ತನಿಖೆಯ ಹಾದಿ ಮತ್ತು ಆರೋಪಿಗಳ ಪತ್ತೆಯ ವಿಚಾರದಲ್ಲಿ ಯೋಗೇಶ್ ಗೌಡ ಅವರ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ಆಗಿನ ಸಚಿವ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂದು ಬಿಜೆಪಿ ನಾಯಕರು ಮತ್ತು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ಅಧಿಕಾರಿಗಳು ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ, ಇಂಚಿಂಚು ಮಾಹಿತಿಯನ್ನು ಕಲೆ ಹಾಕಿದರು. ತನಿಖೆಯ ವೇಳೆ ಕ್ರಿಮಿನಲ್ ಸಂಚು, ಸಾಕ್ಷ್ಯನಾಶ ಮತ್ತು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿ, ವಿನಯ್ ಕುಲಕರ್ಣಿ ಸೇರಿದಂತೆ 21 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ವಿಶೇಷ ನ್ಯಾಯಾಲಯದ ತೀರ್ಪು

ಸುದೀರ್ಘ ವಿಚಾರಣೆಯ ನಂತರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಳೆದ ವಾರ ಅಂತಿಮ ತೀರ್ಪು ಪ್ರಕಟಿಸಿತು. ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಯಿತು. ಸಾಕ್ಷ್ಯ ನಾಶ ಮತ್ತು ಭ್ರಷ್ಟಾಚಾರದ ಆರೋಪದಡಿ ಇನ್‌ಸ್ಪೆಕ್ಟರ್ ಚನ್ನಕೇಶವ ಟಿಂಕರಿಕರ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿಯವರನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಮೃತ ಯೋಗೇಶ್ ಗೌಡ ಅವರ ಇಬ್ಬರು ಮಕ್ಕಳಿಗೆ ತಲಾ 8 ಲಕ್ಷ ರೂ.ಗಳಂತೆ ಒಟ್ಟು 16 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

Read More
Next Story