
ಗ್ರಾಮಸ್ಥರು ತೆಪ್ಪದ ಸಹಾಯದಿಂದ ಬಾವಿಯಲ್ಲಿ ಸಾಬಣ್ಣ ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.
ತೆರೆದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರ ಸಾವು; ರಕ್ಷಣೆಗೆ ಬಾವಿಗೆ ಜಿಗಿದ ತಂದೆ ನಾಪತ್ತೆ
ಗ್ರಾಮಸ್ಥರು ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದು, ಬಾಲಕಿಯರಿಬ್ಬರ ಮೃತದೇಹಗಳು ಪತ್ತೆಯಾಗಿವೆ. ಆದರೆ ಮಕ್ಕಳ ತಂದೆ ಸಾಬಣ್ಣ ಅವರು ಪತ್ತೆಯಾಗಿಲ್ಲ.
ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಮಕ್ಕಳನ್ನು ರಕ್ಷಿಸಲು ಬಾವಿಗೆ ಇಳಿದಿದ್ದ ತಂದೆಯೂ ನಾಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ಸಾಕ್ಷಿ (15) ಹಾಗೂ ರಕ್ಷಿತಾ (10) ಎಂದು ಗುರುತಿಸಲಾಗಿದೆ. ತೋಟದ ಮನೆಯ ಸಮೀಪವಿದ್ದ ತೆರೆದ ಬಾವಿಗೆ ಬಾಲಕಿಯರು ಆಕಸ್ಮಿಕವಾಗಿ ಬಿದ್ದಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅವರನ್ನು ರಕ್ಷಿಸಲು ತಂದೆ ಸಾಬಣ್ಣ (40) ಕೂಡ ಬಾವಿಗೆ ಜಿಗಿದಿದ್ದಾರೆ.
ಸಾಬಣ್ಣ ಅವರಿಗೆ ಈಜು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಬಾಲಕಿಯರ ಮೃತದೇಹಗಳನ್ನು ಗ್ರಾಮಸ್ಥರು ಪತ್ತೆಹಚ್ಚಿದ್ದಾರೆ. ಆದರೆ ಸಾಬಣ್ಣ ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯರು ತೆಪ್ಪದ ಸಹಾಯದಿಂದ ಬಾವಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು, ಅವರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಘಟನೆ ಕುರಿತು ಮಾಹಿತಿ ಪಡೆದ ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯರು ಬಾವಿಗೆ ಬಿದ್ದ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಘಟನೆಯಿಂದ ತೀವ್ರ ದುಃಖ ಆವರಿಸಿದೆ.

