
ಆರೋಪಿ ಮಲ್ಲಿಕಾರ್ಜುನ ಅರಕೇರಿ ಹಾಗೂ ಮೃತ ಬಾಲಕ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ
Vijayapura Crime |ಮಗನ ಹುಟ್ಟಿನ ಬಗ್ಗೆ ಶಂಕೆ: 'ಮಗ ನನ್ನಂತಿಲ್ಲ' ಎಂದು ಬಾಲಕನನ್ನು ನದಿಗೆ ತಳ್ಳಿ ಕೊಂದ ತಂದೆ!
ಮಗನನ್ನು ಕೊಲ್ಲಲು ಸಂಚು ರೂಪಿಸಿದ ಮಲ್ಲಿಕಾರ್ಜುನ, ಕಳೆದ ಮಾರ್ಚ್ 16 ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ನಂಬಿಸಿ ಮನೆಯಿಂದ ಕರೆದೊಯ್ದಿದಿದ್ದ.
ಸಮಾಜವೇ ತಲೆ ತಗ್ಗಿಸುವಂತಹ ಅತೀ ಅಮಾನುಷ ಘಟನೆಯೊಂದು ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮಗನ ಬುದ್ಧಿ ಮತ್ತು ನಡವಳಿಕೆ ತನ್ನಂತಿಲ್ಲ ಎಂಬ ಕ್ಷುಲ್ಲಕ ಅನುಮಾನಕ್ಕೆ ಬಿದ್ದ ತಂದೆಯೊಬ್ಬ ತನ್ನ 6 ವರ್ಷದ ಪುತ್ರನನ್ನು ನದಿಗೆ ತಳ್ಳಿ ಹತ್ಯೆ ಮಾಡಿರುವ ಘೋರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಬಂಧಿತ ಆರೋಪಿ. ಈತನ ಕೃತ್ಯಕ್ಕೆ ಬಲಿಯಾದ ದುರ್ದೈವಿ ಬಾಲಕ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6). ಮಲ್ಲಿಕಾರ್ಜುನನಿಗೆ ಗ್ರಾಮದ ಕೆಲವರು ಮಗುವಿನ ಹೋಲಿಕೆ ಕುರಿತು ಚುಚ್ಚುಮಾತುಗಳಿಂದ ಛೇಡಿಸುತ್ತಿದ್ದರು. "ನಿನ್ನ ಮಗ ನೋಡಲು ನಿನ್ನಂತಿಲ್ಲ, ಅವನಿಗೆ ನಿನ್ನ ಹೋಲಿಕೆಯಿಲ್ಲ" ಎನ್ನುತ್ತಿದ್ದ ಮಾತುಗಳನ್ನೇ ಗಂಭೀರವಾಗಿ ಪರಿಗಣಿಸಿದ ಮಲ್ಲಿಕಾರ್ಜುನ, ಮಗನ ಮೇಲೆ ಅನುಮಾನ ಪಡಲು ಶುರುಮಾಡಿದ್ದ. ಇದೇ ದ್ವೇಷ ಕೊನೆಗೆ ಬಾಲಕನ ಪ್ರಾಣಕ್ಕೆ ಕಂಟಕವಾಗಿದೆ.
ಶಾಲೆಗೆ ಸೇರಿಸುವ ನೆಪದಲ್ಲಿ ನದಿಗೆ ತಳ್ಳಿದ !
ಮಗನನ್ನು ಕೊಲ್ಲಲು ಸಂಚು ರೂಪಿಸಿದ ಮಲ್ಲಿಕಾರ್ಜುನ, ಕಳೆದ ಮಾರ್ಚ್ 16 ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ನಂಬಿಸಿ ಮನೆಯಿಂದ ಕರೆದೊಯ್ದಿದ್ದಾನೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿ ಕೃಷ್ಣಾ ನದಿ ತೀರಕ್ಕೆ ಮಗುವನ್ನು ಕರೆದೊಯ್ದು, ಯಾರು ಇಲ್ಲದ ಸಮಯ ಸಾಧಿಸಿ ನೀರಿಗೆ ತಳ್ಳಿದ್ದಾನೆ. ಮಗು ನೀರಿನಲ್ಲಿ ಮುಳುಗಿ ಪ್ರಾಣಬಿಡುವುದನ್ನು ನೋಡುತ್ತಾ ನಿಂತು ಕ್ರೂರತೆ ಮೆರೆದಿದ್ದಾನೆ.
ಹುಟ್ಟುಹಬ್ಬದ ದಿನ ನಾಟಕ ಬಯಲು
ಹತ್ಯೆಯ ಬಳಿಕ ಮನೆಗೆ ಬಂದ ಆರೋಪಿ, ಮಗನನ್ನು ಹಾಸ್ಟೆಲ್‌ಗೆ ಸೇರಿಸಿರುವುದಾಗಿ ಪತ್ನಿಗೆ ಸುಳ್ಳು ಹೇಳಿದ್ದ. ಆದರೆ ಏಪ್ರಿಲ್ 1 ರಂದು ಸಿದ್ದಾರ್ಥನ ಹುಟ್ಟುಹಬ್ಬವಿದ್ದ ಕಾರಣ, "ಮಗನನ್ನು ಮನೆಗೆ ಕರೆತನ್ನಿ" ಎಂದು ತಾಯಿ ಭಾಗ್ಯಶ್ರೀ ಪಟ್ಟು ಹಿಡಿದಾಗ ಆರೋಪಿ ಮನೆಯಿಂದ ಪರಾರಿಯಾಗಿದ್ದಾನೆ. ಇದರಿಂದ ಅನುಮಾನಗೊಂಡ ಪತ್ನಿ ಪೊಲೀಸರಿಗೆ ದೂರು ನೀಡಿದಾಗ ಅಸಲಿ ಸತ್ಯ ಹೊರಬಂದಿದೆ.
ಪೊಲೀಸ್ ತನಿಖೆ, ಬಂಧನ
"ಮಾರ್ಚ್ 16 ರಂದು ಮಹಾರಾಷ್ಟ್ರದ ಮಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕನ ಶವದ ಮಾಹಿತಿ ಹಾಗೂ ಆರೋಪಿ ನೀಡಿದ ಹೇಳಿಕೆಗಳು ತಾಳೆಯಾಗಿವೆ" ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

