ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್; ಜಾಮೀನು ಮಂಜೂರು
x

ವಚನಾನಂದ ಸ್ವಾಮೀಜಿಗೆ ಬಿಗ್ ರಿಲೀಫ್; ಜಾಮೀನು ಮಂಜೂರು

ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ದಾವಣಗೆರೆ ವಿಶೇಷ ಪೋಕ್ಸೋ ನ್ಯಾಯಾಲಯ ರೆಗ್ಯುಲರ್ ಜಾಮೀನು ನೀಡಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ರದ್ದುಪಡಿಸಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.


Click the Play button to hear this message in audio format

ಮಠದಲ್ಲಿದ್ದ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು ಶ್ರೀಗಳಿಗೆ ರೆಗ್ಯುಲರ್ (ನಿಯಮಿತ) ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಹರಿಹರ ಪೀಠದ ಮಠದಲ್ಲಿದ್ದ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ವಚನಾನಂದ ಸ್ವಾಮೀಜಿ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಆರಂಭದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ 'ಝೀರೋ ಎಫ್‌ಐಆರ್' ದಾಖಲಿಸಲಾಗಿತ್ತು. ಆ ಬಳಿಕ ಮುಂದಿನ ಕಾನೂನು ಕ್ರಮ ಹಾಗೂ ತನಿಖೆಗಾಗಿ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತನ ತಾಯಿ

ಈ ಗಂಭೀರ ಪ್ರಕರಣ ದಾಖಲಾಗುವ ಮುನ್ನವೇ ಮುಂಜಾಗ್ರತಾ ಕ್ರಮವಾಗಿ ವಚನಾನಂದ ಸ್ವಾಮೀಜಿ ಅವರು ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಆರೋಪದ ತೀವ್ರತೆಯನ್ನು ಪರಿಗಣಿಸಿ ಸ್ವಾಮೀಜಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಸಂತ್ರಸ್ತ ಬಾಲಕನ ತಾಯಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜೂನ್ 25 ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠವು, "ಈಗ ಬಾಲಕರೂ ಸಹ ಸುರಕ್ಷಿತವಾಗಿಲ್ಲವೇ?" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೆ, ವಚನಾನಂದ ಸ್ವಾಮೀಜಿಯ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ ಆದೇಶಿಸಿತ್ತು. ಆದರೆ, ಕಾನೂನು ಪ್ರಕ್ರಿಯೆಗಾಗಿ ರೆಗ್ಯುಲರ್ ಜಾಮೀನು ಪಡೆದುಕೊಳ್ಳಲು ಶ್ರೀಗಳಿಗೆ ಮೂರು ವಾರಗಳ ಕಾಲಾವಕಾಶವನ್ನು ನೀಡಿತ್ತು.

ವಿಶೇಷ ನ್ಯಾಯಾಲಯದಿಂದ ಜಾಮೀನು:

ಹೈಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ವಚನಾನಂದ ಸ್ವಾಮೀಜಿ ಅವರು, ಜೂನ್ 27 ರಂದು ದಾವಣಗೆರೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ರೆಗ್ಯುಲರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು, ಇಂದು ಸ್ವಾಮೀಜಿಗೆ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ತೀವ್ರ ಕಾನೂನು ಹೋರಾಟ ಎದುರಿಸುತ್ತಿದ್ದ ಹರಿಹರ ಶ್ರೀಗಳಿಗೆ ಸದ್ಯದ ಮಟ್ಟಿಗೆ ದೊಡ್ಡ ಹಂತದ ಸಮಾಧಾನ ಸಿಕ್ಕಂತಾಗಿದೆ.

Read More
Next Story