
Gangster Ravi Pujari| ರೆಮೋ ಡಿಸೋಜಾಗೆ ಬೆದರಿಕೆ ಕೇಸ್; ಮುಂಬೈ ಪೊಲೀಸರ ವಶದಿಂದ ಬೆಂಗಳೂರಿಗೆ ರವಿ ಪೂಜಾರಿ
ರವಿ ಪೂಜಾರಿಯನ್ನು ಕಳೆದ ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರು ಬಾಡಿ ವಾರಂಟ್ ಮೇಲೆ ಬೆಂಗಳೂರಿನಿಂದ ಮುಂಬೈಗೆ ಕರೆದೊಯ್ಯಲಾಗಿತ್ತು. ನಿರ್ದೇಶಕ ರೆಮೋ ಡಿಸೋಜಾಗೆ ಬೆದರಿಕೆ ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಯಿತು.
ಉದ್ಯಮಿಗಳಿಗೆ ಬೆದರಿಕೆ ಹಾಕಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದ ಮತ್ತು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ವಶದಿಂದ ಬೆಂಗಳೂರಿಗೆ ವಾಪಸ್ ಕರೆತರಲಾಗಿದೆ.
ಕೆಲವು ದಿನಗಳಿಂದ ಸುಲಿಗೆ ಮತ್ತು ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮುಂಬೈ ಪೊಲೀಸರ ಸುದೀರ್ಘ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಆತನನ್ನು ಬೆಂಗಳೂರಿಗೆ ಕರೆತರುತ್ತಿದ್ದು, 54ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಮುಂಬೈ ಪೊಲೀಸರ ತನಿಖೆ
ಪಾತಕಿ ರವಿ ಪೂಜಾರಿಯನ್ನು ಕಳೆದ ಕೆಲವು ದಿನಗಳ ಹಿಂದೆ ಮುಂಬೈ ಪೊಲೀಸರು ಬಾಡಿ ವಾರಂಟ್ ಮೇಲೆ ಬೆಂಗಳೂರಿನಿಂದ ಮುಂಬೈಗೆ ಕರೆದೊಯ್ದಿದ್ದರು. ಪ್ರಮುಖವಾಗಿ 2018ರಲ್ಲಿ ನಡೆದಿದ್ದ ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ ಹಾಗೂ ಚಿತ್ರ ನಿರ್ದೇಶಕ ರೆಮೋ ಡಿಸೋಜಾ ಮತ್ತು ಅವರ ಪತ್ನಿಯಿಂದ 50 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಲಾಯಿತು.
ಮೂಲಗಳ ಪ್ರಕಾರ, ರವಿ ಪೂಜಾರಿ ಹೆಸರಿನಲ್ಲಿ ರೆಮೋ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಹಣ ನೀಡದಿದ್ದರೆ ಪ್ರಾಣಕ್ಕೆ ಅಪಾಯವಿರುವುದಾಗಿ ಬೆದರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಪೊಲೀಸರು ರವಿ ಪೂಜಾರಿಯನ್ನು ಎದುರು ಹಾಕಿಕೊಂಡು ವಿಚಾರಣೆ ನಡೆಸಿದ್ದು, ಆತ ಯಾವ ರೀತಿ ವಿದೇಶದಲ್ಲಿ ಕುಳಿತು ಮುಂಬೈನ ಗಣ್ಯರನ್ನು ಗುರಿಯಾಗಿಸಿಕೊಂಡಿದ್ದ ಎಂಬ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ 15 ಗಂಭೀರ ಪ್ರಕರಣಗಳು
ರವಿ ಪೂಜಾರಿ ವಿರುದ್ಧ ಮುಂಬೈನಲ್ಲಿ ಸುಮಾರು 15ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಸಂಘಟಿತ ಅಪರಾಧಗಳು ಸೇರಿವೆ.
ಕಳೆದ ವರ್ಷ ಸೆನೆಗಲ್ ಸರ್ಕಾರವು ರವಿ ಪೂಜಾರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಭಾರತೀಯ ತನಿಖಾ ಸಂಸ್ಥೆಗಳಿಗೆ ಹಸಿರು ನಿಶಾನೆ ತೋರಿಸಿತ್ತು. ಒಟ್ಟು ಒಂಬತ್ತು ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು ಅಂತಾರಾಷ್ಟ್ರೀಯ ಒಪ್ಪಂದದಡಿ ಅನುಮೋದನೆ ದೊರೆತಿದ್ದು, ಇದರಲ್ಲಿ ಮೂರು ಅತ್ಯಂತ ಗಂಭೀರ ಪ್ರಕರಣಗಳಿಗೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅನ್ವಯಿಸಲಾಗಿದೆ. ಈ ಕಾಯ್ದೆಯು ಸಂಘಟಿತ ಅಪರಾಧಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗದಂತೆ ಮಾಡಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಮುಂಬೈ ಪೊಲೀಸರು ಈ ಪ್ರಕರಣಗಳ ಅಡಿಯಲ್ಲೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಸೆನೆಗಲ್‌ನಿಂದ ಭಾರತದ ಜೈಲಿಗೆ
1990ರ ದಶಕದ ಅಂತ್ಯದಲ್ಲಿ ಭಾರತದಿಂದ ಪರಾರಿಯಾಗಿದ್ದ ರವಿ ಪೂಜಾರಿ, ಆಸ್ಟ್ರೇಲಿಯಾ, ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ನೆಲೆಸಿದ್ದ. ಅಂತಿಮವಾಗಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಆಂಟೋನಿ ಫೆರ್ನಾಂಡಿಸ್ ಎಂಬ ನಕಲಿ ಹೆಸರಿನಲ್ಲಿ ನೆಲೆಸಿದ್ದ. ಅಲ್ಲಿ ಆತ ಒಬ್ಬ ಉದ್ಯಮಿ ಮತ್ತು ಸಮಾಜ ಸೇವಕ ಎಂಬಂತೆ ನಟಿಸುತ್ತಿದ್ದ. ನಮಸ್ತೆ ಇಂಡಿಯಾ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದ ಎನ್ನಲಾಗಿದೆ. ರವಿ ಪೂಜಾರಿ ಸೆನೆಗಲ್‌ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಗುಪ್ತಚರ ಸಂಸ್ಥೆ ಹಾಗೂ ಕರ್ನಾಟಕ ಪೊಲೀಸರು ಆತನನ್ನು ಹಿಡಿಯಲು ಜಂಟಿ ಕಾರ್ಯಾಚರಣೆ ಕೈಗೊಂಡರು.
2019 ರ ಜ.21ರಂದು ಸೆನೆಗಲ್ ಪೊಲೀಸರ ನೆರವಿನೊಂದಿಗೆ ಡಾಕರ್‌ನ ಒಂದು ಕ್ಷೌರದಂಗಡಿಯಲ್ಲಿ ರವಿ ಪೂಜಾರಿಯನ್ನು ಬಂಧಿಸಲಾಯಿತು. ಕೇಂದ್ರ ಸರ್ಕಾರವು ಕೂಡಲೇ ಆತನ ಹಸ್ತಾಂತರಕ್ಕೆ ಕೋರಿಕೆ ಸಲ್ಲಿಸಿತು. ಆದರೆ, ರವಿ ಪೂಜಾರಿ ತಾನು ಆಂಟೋನಿ ಫೆರ್ನಾಂಡಿಸ್ ಎಂದು ವಾದಿಸಿ ಹಸ್ತಾಂತರ ಪ್ರಕ್ರಿಯೆಗೆ ಕಾನೂನು ಅಡ್ಡಿಗಳನ್ನು ಉಂಟು ಮಾಡಿದ್ದ.
ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಸೆನೆಗಲ್ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯಿತು. ರವಿ ಪೂಜಾರಿ ವಿರುದ್ಧ ಭಾರತದಲ್ಲಿರುವ ನೂರಾರು ಪ್ರಕರಣಗಳ ದಾಖಲೆಗಳನ್ನು ಭಾರತೀಯ ಅಧಿಕಾರಿಗಳು ಸಲ್ಲಿಸಿದರು. ಅಂತಿಮವಾಗಿ ಸೆನೆಗಲ್ ಸುಪ್ರೀಂ ಕೋರ್ಟ್ ಹಸ್ತಾಂತರಕ್ಕೆ ಹಸಿರು ನಿಶಾನೆ ತೋರಿಸಿತು. 2020ರ ಫೆ.24ರಂದು ರವಿ ಪೂಜಾರಿಯನ್ನು ಭಾರತೀಯ ಅಧಿಕಾರಿಗಳ ತಂಡವು ಸೆನೆಗಲ್‌ನಿಂದ ಏರ್ ಫ್ರಾನ್ಸ್ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿತು. ಅಂದಿನಿಂದ ಆತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ.
ಮಂಗಳೂರಿನ ಉದ್ಯಮಿಗಳ ಮೇಲೆ ದಾಳಿ, ವಿಕಾಸ್, ಸೋಮಶೇಖರ್ ಎಂಬುವರ ಹತ್ಯೆ ಯತ್ನ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಬಾಲಿವುಡ್‌ನ ಶಾರುಖ್ ಖಾನ್, ಸಲ್ಮಾನ್ ಖಾನ್, ಮಹೇಶ್ ಭಟ್ ಮತ್ತು ರೆಮೋ ಡಿಸೋಜಾ ಅವರಂತಹ ಗಣ್ಯರಿಗೆ ಬೆದರಿಕೆ ಹಾಕಿದ ಪ್ರಕರಣಗಳ ಸಂಬಂಧ ಹಸ್ತಾಂತರ ಮಾಡಲು ಸುಲಭವಾಯಿತು. ರವಿ ಪೂಜಾರಿಯನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಕೇರಳ ಪೊಲೀಸರು ತಮ್ಮ ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಗಾಗಿ ಬಾಡಿ ವಾರಂಟ್ ಮೇಲೆ ಕರೆದೊಯ್ಯುತ್ತಿರುತ್ತಾರೆ. ಇತ್ತೀಚೆಗೆ ಮುಂಬೈ ಪೊಲೀಸರು ವಿಚಾರಣೆ ಮುಗಿಸಿ ಆತನನ್ನು ಮತ್ತೆ ಬೆಂಗಳೂರಿಗೆ ಹಸ್ತಾಂತರಿಸುತ್ತಿರುವುದು ಇದೇ ಪ್ರಕ್ರಿಯೆಯ ಭಾಗವಾಗಿದೆ.

