
ಶಾರ್ಜಾದಲ್ಲಿ ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಹತ್ಯೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತದೇಹ ಒಂಬತ್ತು ತುಂಡುಗಳಾಗಿ ಕಾರಿನಲ್ಲಿ ಪತ್ತೆಯಾಗಿದೆ.
ಶಾರ್ಜಾದಲ್ಲಿ ಕುಂದಾಪುರದ ವ್ಯಕ್ತಿ ಭೀಕರ ಕೊಲೆ: ಮೃತದೇಹವನ್ನು 9 ತುಂಡು ಮಾಡಿ ಬ್ಯಾಗ್ನಲ್ಲಿಟ್ಟಿದ್ದ ಹಂತಕರು; ಪತ್ನಿ-ಮಗ ನಾಪತ್ತೆ
ಅಲ್ವಿನ್ ಪ್ರಕಾಶ್ ಕಳೆದ 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಟೀನಾ ಕುಂದರ್ ಶಾರ್ಜಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ದಂಪತಿಯ ಪುತ್ರ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಕುಟುಂಬ ತಿಳಿಸಿದೆ.
ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಎಂಬುವವರು ಯುಎಇಯ ಶಾರ್ಜಾದಲ್ಲಿ ಕೊಲೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜುಲೈನಲ್ಲಿ ನಾಪತ್ತೆಯಾಗಿದ್ದ ಅವರ ಮೃತದೇಹ ಸುಮಾರು ಎರಡು ತಿಂಗಳ ಬಳಿಕ ಕಾರೊಂದರಲ್ಲಿ ಪತ್ತೆಯಾಗಿದ್ದು, ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಬ್ಯಾಗ್ಗಳಲ್ಲಿ ಇರಿಸಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಲ್ವಿನ್ ಪ್ರಕಾಶ್ ಕುಂದರ್ ಕಳೆದ 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಡಿಸೆಂಬರ್ನಲ್ಲಿ ಅವರು ಕುಂದಾಪುರಕ್ಕೆ ಬಂದು ಬಳಿಕ ಶಾರ್ಜಾಗೆ ಮರಳಿದ್ದರು. ಅವರ ಪತ್ನಿ ಟೀನಾ ಕುಂದರ್ ಶಾರ್ಜಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ದಂಪತಿಯ ಪುತ್ರ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ಕುಟುಂಬ ತಿಳಿಸಿದೆ.
ಜುಲೈ 20ರ ಬಳಿಕ ಅನುಮಾನ ಮೂಡಿಸಿದ ಸಂದೇಶ
ಜುಲೈ 20ರಂದು ಅಲ್ವಿನ್ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಕರೆ ಮಾಡಿದ್ದರು. ಆದರೆ ಅಲ್ವಿನ್ ಕರೆ ಸ್ವೀಕರಿಸದೆ, ತಾವು ಕ್ಷೇಮವಾಗಿರುವುದಾಗಿ ಸಂದೇಶ ಕಳುಹಿಸಿದ್ದರು. ಸಾಮಾನ್ಯವಾಗಿ ಅಲ್ವಿನ್ ಧ್ವನಿ ಸಂದೇಶಗಳ ಮೂಲಕವೇ ಮಾತನಾಡುತ್ತಿದ್ದರು ಎನ್ನಲಾಗಿದ್ದು, ಈ ರೀತಿಯ ಸಂದೇಶ ಕುಟುಂಬಕ್ಕೆ ಅನುಮಾನ ಮೂಡಿಸಿತ್ತು. ನಂತರ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪಾಸ್ಪೋರ್ಟ್ ದಾಖಲೆಗಳಿಂದ ಬಯಲಾದ ಸತ್ಯ
ಅಲ್ವಿನ್ ಅವರ ಸ್ನೇಹಿತರೊಬ್ಬರು ಅವರು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ಗೆ ತೆರಳಿದಾಗ, ಅವರು ಭಾರತಕ್ಕೆ ತೆರಳಿದ್ದಾರೆ ಎಂದು ವಾಚ್ಮನ್ ತಿಳಿಸಿದ್ದ. ಕಂಪನಿಯ ಮಾನವ ಸಂಪನ್ಮೂಲ ವಿಭಾಗವೂ ಆರಂಭದಲ್ಲಿ ಇದೇ ಮಾಹಿತಿ ನೀಡಿತ್ತು. ಆದರೆ ಕುಟುಂಬ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ಕಂಪನಿ ಪಾಸ್ಪೋರ್ಟ್ ದಾಖಲೆಗಳನ್ನು ಪರಿಶೀಲಿಸಿದ್ದು, ಅಲ್ವಿನ್ ಇನ್ನೂ ಶಾರ್ಜಾದಲ್ಲೇ ಇದ್ದರು ಎಂಬುದು ತಿಳಿದುಬಂದಿದೆ. ಬಳಿಕ ನಾಪತ್ತೆ ದೂರು ದಾಖಲಿಸಿ ಹುಡುಕಾಟ ಆರಂಭಿಸಲಾಗಿತ್ತು.
ಓಮನ್ ಮಾರ್ಗದ ಬಳಿ ಕಾರಿನಲ್ಲಿ ಮೃತದೇಹ
ತನಿಖೆ ವೇಳೆ ಓಮನ್ ಕಡೆಗೆ ಸಾಗುವ ರಸ್ತೆಯ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಅಲ್ವಿನ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಅವರ ಸಹೋದರ ತಿಳಿಸಿದ್ದಾರೆ. ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿ ಎರಡು ಬ್ಯಾಗ್ಗಳಲ್ಲಿ ಇರಿಸಲಾಗಿತ್ತು ಎಂದು ಕುಟುಂಬ ಆರೋಪಿಸಿದೆ. ಮೃತದೇಹದ ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಮೃತರ ಅಣ್ಣ ತಿಳಿಸಿದ್ದಾರೆ.
ಪತ್ನಿ, ಪುತ್ರನ ಸಂಪರ್ಕವೂ ಇಲ್ಲ
ಅಲ್ವಿನ್ ಅವರ ಹತ್ಯೆಯ ಬಳಿಕ ಪತ್ನಿ ಟೀನಾ ಹಾಗೂ ಪುತ್ರನ ಸಂಪರ್ಕವೂ ಕುಟುಂಬಕ್ಕೆ ಸಿಗುತ್ತಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ. ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸಾಮಾನುಗಳೊಂದಿಗೆ ಹೊರಹೋಗುತ್ತಿರುವುದು ಕಂಡುಬಂದಿದೆ ಎಂದು ಕುಟುಂಬ ಹೇಳಿದೆ. ಆದರೆ ಈ ದೃಶ್ಯಕ್ಕೂ ಹತ್ಯೆಗೂ ನೇರ ಸಂಬಂಧವಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಪತ್ನಿ ಅಥವಾ ಪುತ್ರನಿಗೆ ಪ್ರಕರಣದಲ್ಲಿ ಯಾವುದೇ ಪಾತ್ರವಿದೆ ಎಂಬುದಕ್ಕೂ ಅಧಿಕೃತವಾಗಿ ದೃಢವಾಗಿಲ್ಲ.
ಹತ್ಯೆಯ ಹಿಂದಿನ ಕಾರಣ ಇನ್ನೂ ನಿಗೂಢ
ಅಲ್ವಿನ್ ಅವರ ಹತ್ಯೆಯ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶಾರ್ಜಾ ಪೊಲೀಸರು ಶಂಕಿತರ ಗುರುತು ಅಥವಾ ಹತ್ಯೆಯ ಕಾರಣದ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಉಡುಪಿ ಪೊಲೀಸರು ಕೂಡ ಶಾರ್ಜಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಅಲ್ವಿನ್ ಅವರ ಸಹೋದರ ಅನಿಲ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

