Retired soldier lured with gift on his birthday: Rs 2.82 lakh. Cyber ​​fraudsters duped him!
x

ಎಐ ಆಧಾರಿತ ಚಿತ್ರ

ಹುಟ್ಟುಹಬ್ಬದಂದೇ ನಿವೃತ್ತ ಯೋಧನಿಗೆ 'ಗಿಫ್ಟ್' ಆಮಿಷ; 2.82 ಲಕ್ಷ ರೂ. ಪಂಗನಾಮ!

ವಿಳಾಸ ಪಡೆದು ಕರೆ ಮಾಡಿದ ಸೈಬರ್‌ ವಂಚಕರು, ನಿಮ್ಮ ಉಡುಗೊರೆ ರೆಡಿಯಾಗಿದೆ. ಆದರೆ, ಕೊರಿಯರ್ ಹಾಗೂ ಕಸ್ಟಮ್ಸ್ ಡ್ಯೂಟಿ ಚಾರ್ಜ್ ಅನ್ನು ಮುಂಗಡವಾಗಿ ಪಾವತಿಸಬೇಕು ಎಂದು ನಂಬಿಸಿ ಹಣ ಪಡೆದಿದ್ದಾರೆ.


Click the Play button to hear this message in audio format

ನಿವೃತ್ತ ಯೋಧರೊಬ್ಬರಿಗೆ ಅವರ ಹುಟ್ಟುಹಬ್ಬದ ದಿನದಂದೇ ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. 'ಹ್ಯಾಪಿ ಬರ್ತ್‌ಡೇ' ಎಂದು ಶುಭಕೋರಿ, ಗಿಫ್ಟ್ ಕಳುಹಿಸುವ ಆಮಿಷವೊಡ್ಡಿ ನಿವೃತ್ತ ಯೋಧನ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗಿದೆ.

ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ನಿವಾಸಿ, ನಿವೃತ್ತ ಯೋಧ ಶಿವಕುಮಾರ್ ಸೈಬರ್ ಜಾಲದ ಬಲೆಗೆ ಬಿದ್ದು 2.82 ಲಕ್ಷ ರೂ. ಕಳೆದುಕೊಂಡ ದುರ್ದೈವಿ. ಜೂ. 20ರಂದು ಅವರ ಹುಟ್ಟುಹಬ್ಬವಿತ್ತು. ಅಂದು ಮುಂಜಾನೆ ಅಪರಿಚಿತ ವ್ಯಕ್ತಿಗಳು ಶಿವಕುಮಾರ್ ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಮಾತುಕತೆ ನಡುವೆ, "ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮ ಕಡೆಯಿಂದ ವಿಶೇಷ ಗಿಫ್ಟ್ ನೀಡುತ್ತಿದ್ದೇವೆ" ಎಂದು ನಂಬಿಸಿ, ಪಾರ್ಸೆಲ್ ಕಳುಹಿಸಲು ಅವರ ಮನೆ ವಿಳಾಸವನ್ನು ಪಡೆದುಕೊಂಡಿದ್ದಾರೆ.

ವಿಳಾಸ ಪಡೆದು ಕರೆ ಮಾಡಿದ ಸೈಬರ್‌ ವಂಚಕರು, "ನಿಮ್ಮ ಉಡುಗೊರೆ ರೆಡಿಯಾಗಿದೆ. ಆದರೆ, ಕೊರಿಯರ್ ಹಾಗೂ ಕಸ್ಟಮ್ಸ್ ಡ್ಯೂಟಿ ಚಾರ್ಜ್ ಮುಂಗಡವಾಗಿ ಪಾವತಿಸಬೇಕು. ಗಿಫ್ಟ್ ಕೈ ಸೇರಿದ ತಕ್ಷಣ ಈ ಹಣವನ್ನು ರಿಫಂಡ್ ಮಾಡಲಾಗುವುದು" ಎಂದು ನಂಬಿಸಿ ಆನ್‌ಲೈನ್ ಲಿಂಕ್ ಕಳುಹಿಸಿದ್ದಾರೆ.

ಹಂತ ಹಂತವಾಗಿ ಹಣ ವರ್ಗಾವಣೆ

ಖದೀಮರ ಮಾತು ನಿಜವೆಂದು ನಂಬಿದ ಶಿವಕುಮಾರ್ ಅವರು, ಲಿಂಕ್ ಬಳಸಿ ವಿವಿಧ ಶುಲ್ಕಗಳ ನೆಪದಲ್ಲಿ ಹಂತ ಹಂತವಾಗಿ ಒಟ್ಟು 2,82 ಲಕ್ಷ ರೂ. ಸಾವಿರ ರೂ. ಹಣವನ್ನು ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಹಣ ಜಮಾವಣೆಯಾಗುತ್ತಿದ್ದಂತೆ ವಂಚಕರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ತಾನು ಮೋಸ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸದ್ಯ ನಿವೃತ್ತ ಯೋಧ ಶಿವಕುಮಾರ್ ಅವರು ತುಮಕೂರು ಸಿಇಎನ್ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರ ಪತ್ತೆಗಾಗಿ ಸೈಬರ್ ಸೆಲ್ ನೆರವಿನೊಂದಿಗೆ ತನಿಖೆ ಚುರುಕುಗೊಳಿಸಿದ್ದಾರೆ.

ಸೈಬರ್ ಸುರಕ್ಷತಾ ಎಚ್ಚರಿಕೆ

ಅಪರಿಚಿತರಿಂದ ಬರುವ ಇಂತಹ "ಉಚಿತ ಗಿಫ್ಟ್" ಅಥವಾ ಲಾಟರಿ ಕರೆಗಳನ್ನು ನಂಬಬೇಡಿ. ಕಸ್ಟಮ್ಸ್ ಡ್ಯೂಟಿ, ಕೊರಿಯರ್ ಚಾರ್ಜ್ ಹೆಸರಿನಲ್ಲಿ ಮುಂಗಡವಾಗಿ ಹಣ ಪಾವತಿಸಲು ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಒಂದು ವೇಳೆ ಸೈಬರ್ ವಂಚನೆಗೊಳಗಾದರೆ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Read More
Next Story