
ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಚಿಕ್ಕಬಾಣವಾರದ ವಿದ್ಯಾರ್ಥಿನಿ ತೇಜು (೨೦) ಮೃತದೇಹ ಪತ್ತೆಯಾಗಿದೆ.
ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ ಆತ್ಮಹತ್ಯೆ ಶಂಕೆ
ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಚಿಕ್ಕಬಾಣವಾರದ ವಿದ್ಯಾರ್ಥಿನಿ ತೇಜು (20) ಮೃತದೇಹ ಪತ್ತೆಯಾಗಿದೆ. ಪ್ರೇಮ ವೈಫಲ್ಯದ ಹಿನ್ನೆಲೆ ಸ್ನೇಹಿತನಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ.
ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದ್ದು ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ಬಂದ ಸಾರ್ವಜನಿಕರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ. ಮೃತರನ್ನು ಚಿಕ್ಕಬಾಣವಾರ ಮೂಲದ ಇಪ್ಪತ್ತು ವರ್ಷದ ವಿದ್ಯಾರ್ಥಿನಿ ತೇಜು ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿ ತೇಜು ಸೋಮವಾರ ಸಂಜೆ ನಾಲ್ಕೂವರೆ ಸುಮಾರಿಗೆ ಸ್ಯಾಂಕಿ ಕೆರೆಗೆ ಬಂದಿದ್ದು ಅಲ್ಲಿಂದಲೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಇಂದು ಮುಂಜಾನೆ ಕೆರೆಯಲ್ಲಿ ತೇಲುತ್ತಿದ್ದ ಶವವನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸದಾಶಿವನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಸ್ನೇಹಿತನಿಗೆ ಕೊನೆಯ ಸಂದೇಶ ರವಾನೆ
ಮೃತ ಯುವತಿ ಆತ್ಮಹತ್ಯೆಗೂ ಮುನ್ನ ತನ್ನ ಸ್ನೇಹಿತನಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿದೆ. ತನಗೆ ಜೀವನ ಸಾಕಾಗಿದೆ ಹಾಗೂ ಬದುಕಿನ ಮೇಲೆ ಜಿಗುಪ್ಸೆ ಬಂದಿದೆ ಎಂದು ಕೊನೆಯ ಮೆಸೇಜ್ ಮಾಡಿದ ತೇಜು ತಕ್ಷಣವೇ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆಯ ಪ್ರಕಾರ ಪ್ರೇಮ ವೈಫಲ್ಯವೇ ಈ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಸದಾಶಿವನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನೆ ಕುರಿತು ಯುವತಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೋಷಕರ ಬರುವಿಕೆಗಾಗಿ ಪೊಲೀಸರು ಕಾಯುತ್ತಿದ್ದು ಮುಂದಿನ ತನಿಖೆ ಮುಂದುವರಿದಿದೆ.

