
ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಆರು ಮಂದಿ ಸ್ನೇಹಿತರಿದ್ದ ಕಾರು ಚೋರಡಿ ಬ್ರಿಡ್ಜ್ ಬಳಿ ಪಲ್ಟಿಯಾಗಿದೆ.
ಸಿಗಂದೂರು ದರ್ಶನಕ್ಕೆ ಹೊರಟಿದ್ದ ಸ್ನೇಹಿತರ ಕಾರು ಪಲ್ಟಿ; 6 ಜನರಿಗೆ ಗಾಯ
ಸಿಗಂದೂರು ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರಿನ ಆರು ಸ್ನೇಹಿತರ ಕಾರು ಚೋರಡಿ ಬ್ರಿಡ್ಜ್ ಬಳಿ ಪಲ್ಟಿಯಾಗಿ ಎಲ್ಲರೂ ಗಾಯಗೊಂಡಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಅವರನ್ನು ರಕ್ಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೆಂಗಳೂರಿನಿಂದ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಆರು ಮಂದಿ ಸ್ನೇಹಿತರಿದ್ದ ಕಾರು ಚೋರಡಿ ಬ್ರಿಡ್ಜ್ ಬಳಿ ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಎಲ್ಲ ಆರು ಮಂದಿಗೂ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶಿವಮೊಗ್ಗ ತಾಲೂಕಿನ ಚೋರಡಿ ಬ್ರಿಡ್ಜ್ ಸಮೀಪಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಡಿವೈಡರ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲೇ ಮೂರು ಬಾರಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದರೊಳಗಿದ್ದವರು ನೆರವಿಗಾಗಿ ಕೂಗಿಕೊಂಡಿದ್ದಾರೆ.
ಇದೇ ವೇಳೆ ಕರ್ತವ್ಯದ ನಿಮಿತ್ತ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಸಾಗರ ಪೇಟೆ ಠಾಣೆಯ ಎಎಸ್‌ಐ ಮೀರಾಬಾಯಿ ಹಾಗೂ ಪೊಲೀಸ್ ಸಿಬ್ಬಂದಿ ಅಪಘಾತವನ್ನು ಗಮನಿಸಿದ್ದಾರೆ. ಕೂಡಲೇ ವಾಹನ ನಿಲ್ಲಿಸಿ, ಕಾರಿನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಪ್ರಾಥಮಿಕ ನೆರವು ನೀಡಿದ್ದಾರೆ.
ಬಳಿಕ ಸ್ಥಳೀಯ ಇನೋವಾ ವಾಹನ ಹಾಗೂ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಸಮಯಪ್ರಜ್ಞೆಯಿಂದ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ದೊರೆತಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

