ಶಿವಮೊಗ್ಗದ ಐಸಿಸ್‌ ಪಿತೂರಿ: ಕೀನ್ಯಾದಲ್ಲಿ ಸಿಕ್ಕಿಬಿದ್ದ ಉಗ್ರ ಅರಾಫತ್‌ ಅಲಿಗೆ 6 ವರ್ಷ ಜೈಲು ಶಿಕ್ಷೆ
x

ಶಿವಮೊಗ್ಗದ ಐಸಿಸ್‌ ಪಿತೂರಿ: ಕೀನ್ಯಾದಲ್ಲಿ ಸಿಕ್ಕಿಬಿದ್ದ ಉಗ್ರ ಅರಾಫತ್‌ ಅಲಿಗೆ 6 ವರ್ಷ ಜೈಲು ಶಿಕ್ಷೆ

ಅಪರಾಧಿ ಅರಾಫತ್ ಅಲಿ ತೀರ್ಥಹಳ್ಳಿಯವನಾಗಿದ್ದರೂ, ಆತನ ಕಾರ್ಯವ್ಯಾಪ್ತಿ ಅಂತಾರಾಷ್ಟ್ರೀಯ ಮಟ್ಟದವರೆಗೆ ಇತ್ತು. ಅರಾಫತ್ ಅಲಿ ಐಸಿಸ್ ಸಂಘಟನೆಗೆ ಯುವಕರನ್ನು ಸೆಳೆಯುವ ಮುಖ್ಯ ಜವಾಬ್ದಾರಿ ಹೊತ್ತಿದ್ದನು.


Click the Play button to hear this message in audio format

ಶಿವಮೊಗ್ಗ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಐಸಿಸಿ ಭಯೋತ್ಪಾದನಾ ಸಂಘಟನೆ ನಡೆಸಿದ ಪಿತೂರಿ ಪ್ರಕರಣದಲ್ಲಿ 10ನೇ ಆರೋಪಿಯಾಗಿದ್ದ ಐಸಿಸ್‌ ಉಗ್ರ ಸಂಘಟನೆ ಸದಸ್ಯ ಅರಾಫತ್‌ ಅಲಿಗೆ ಎನ್‌ಐಎ ವಿಶೇಷ ನ್ಯಾಯಾಲಯವು 6 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 47 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ನ್ಯಾಯಾಲಯವು 2025ರ ನವೆಂಬರ್‌ ಇಬ್ಬರು ಅಪರಾಧಿಗಳಿಗೆ ಆರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, ಇದೀಗ ಮೂರನೇ ಅಪರಾಧಿಗೂ ಶಿಕ್ಷೆ ಪ್ರಕಟಿಸಲಾಗಿದೆ.

2022ರ ಆ.15ರಂದು ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವೀರ ಸಾವರ್ಕರ್ ಬ್ಯಾನರ್ ಹಾಕುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿತ್ತು. ಈ ವೇಳೆ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿತ್ತು. ಮೇಲ್ನೋಟಕ್ಕೆ ಇದು ಕೇವಲ ಕೋಮು ಘರ್ಷಣೆಯಂತೆ ಕಂಡರೂ, ಪೊಲೀಸರು ಬಂಧಿತರಾದ ಜಬೀವುಲ್ಲಾ, ತನ್ವೀರ್ ಮತ್ತು ನದೀಮ್ ಫೈಜಲ್ ಅವರ ವಿಚಾರಣೆ ನಡೆಸಿದಾಗ ಸತ್ಯ ಬಹಿರಂಗಗೊಂಡಿತು. ಇದು ಕೇವಲ ಸ್ಥಳೀಯ ಗಲಾಟೆಯಾಗಿರದೆ, ಇದರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯ ಪ್ರೇರಣೆ ಇರುವುದು ದೃಢಪಟ್ಟಿತು.

ತುಂಗಾ ತಟದಲ್ಲಿ ಬಾಂಬ್ ಟೆಸ್ಟ್ ಮತ್ತು ಶಾರೀಕ್ ಗ್ಯಾಂಗ್

ತನಿಖೆಯ ಎಳೆ ಹಿಡಿದು ಸಾಗಿದ ಭದ್ರತಾ ಪಡೆಗಳಿಗೆ ತೀರ್ಥಹಳ್ಳಿಯ ಉಗ್ರ ಶಾರೀಕ್‌ನ ಕುತಂತ್ರಗಳು ಬಯಲಾಗಿದ್ದವು. ಶಿವಮೊಗ್ಗದ ಸೈಯ್ಯದ್ ಯಾಸೀನ್ ಹಾಗೂ ಮಂಗಳೂರಿನ ಮಾಝ್ ಜೊತೆಗೂಡಿ ರಾಜ್ಯಾದ್ಯಂತ ಸರಣಿ ವಿಧ್ವಂಸಕ ಕೃತ್ಯಗಳಿಗೆ ಈತ ಸಂಚು ರೂಪಿಸಿದ್ದ. ಇದರ ಮುನ್ಸೂಚನೆಯಾಗಿ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿ ಪರೀಕ್ಷೆ ನಡೆಸಿದ್ದ ಆಘಾತಕಾರಿ ವಿಚಾರವೂ ತನಿಖೆ ವೇಳೆ ದೃಢಪಟ್ಟಿತ್ತು.

ಯುವಕರ ಬ್ರೈನ್‌ವಾಶ್ ಮತ್ತು ಕ್ರಿಪ್ಟೋ ಫಂಡಿಂಗ್

ಈ ಇಡೀ ಜಾಲದಲ್ಲಿ 10ನೇ ಆರೋಪಿಯಾಗಿದ್ದ ತೀರ್ಥಹಳ್ಳಿ ಮೂಲದ ಅರಾಫತ್ ಅಲಿಯ ಪಾತ್ರ ಅತ್ಯಂತ ಅಪಾಯಕಾರಿಯಾಗಿತ್ತು. ಐಸಿಸ್ ಸಂಘಟನೆಗೆ ಯುವಕರನ್ನು ಸೆಳೆದು, ಇಸ್ಲಾಂ ಮೂಲಭೂತವಾದದ ವಿಷಬೀಜ ಬಿತ್ತಿ ಬ್ರೈನ್‌ವಾಶ್ ಮಾಡುವ ಹೊಣೆ ಈತನದ್ದಾಗಿತ್ತು. ಮಂಗಳೂರಿನಲ್ಲಿ ಲಷ್ಕರ್-ಎ-ತೈಬಾ ಹಾಗೂ ಐಸಿಸ್ ಪರ ಗೋಡೆಬರಹ ಬರೆಯಲು ಪ್ರಚೋದನೆ ನೀಡಿದ್ದ ಈತ, ವಿದೇಶದಲ್ಲಿದ್ದ ಐಸಿಸ್ ಹ್ಯಾಂಡ್ಲರ್‌ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಭದ್ರತಾ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚಲು ಬ್ಯಾಂಕಿಂಗ್ ವ್ಯವಸ್ಥೆ ಬದಲು ಆಧುನಿಕ ತಂತ್ರಜ್ಞಾನ ಬಳಸಿ ಕ್ರಿಪ್ಟೋ ಕರೆನ್ಸಿ ಮೂಲಕ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಪೂರೈಕೆ ಮಾಡುತ್ತಿದ್ದ.

ಕೀನ್ಯಾದಿಂದ ಲ್ಯಾಂಡ್ ಆಗುತ್ತಿದ್ದಂತೆ ಬಿತ್ತು ಬೇಡಿ

2020ರಿಂದಲೇ ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಿ ವಿದೇಶದಲ್ಲಿ ನೆಲೆಸಿದ್ದ ಅರಾಫತ್ ಅಲಿಗಾಗಿ ತನಿಖಾ ಸಂಸ್ಥೆಗಳು ಬಲೆ ಹೆಣೆದಿದ್ದವು. 2023ರ ಸೆಪ್ಟೆಂಬರ್ ತಿಂಗಳಲ್ಲಿ ಕೀನ್ಯಾದ ನೈರೋಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಎನ್‌ಐಎ ಅಧಿಕಾರಿಗಳು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯವು ಯುಎಪಿಎ ಕಾಯ್ದೆಯಡಿ ಅಪರಾಧಿಗೆ 6 ವರ್ಷ ಕಠಿಣ ಕಾರಾಗೃಹ ವಾಸ ವಿಧಿಸಿ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ 2025ರ ನವೆಂಬರ್‌ನಲ್ಲಿ ಇಬ್ಬರು ಅಪರಾಧಿಗಳಿಗೆ ಶಿಕ್ಷೆಯಾಗಿದ್ದು, ಇದೀಗ ಅರಾಫತ್ ಅಲಿ ಶಿಕ್ಷೆಗೆ ಗುರಿಯಾದ ಮೂರನೇ ಅಪರಾಧಿಯಾಗಿದ್ದಾನೆ.

Read More
Next Story