ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಉಡುಪಿಯ ಅಲ್ವಿನ್‌ ಪ್ರಕಾಶ್‌ ಕುಂದರ್‌ ಮೃತದೇಹ ತಾಯ್ನಾಡಿಗೆ
x

ಶಾರ್ಜಾದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಉಡುಪಿಯ ಅಲ್ವಿನ್‌ ಪ್ರಕಾಶ್‌ ಕುಂದರ್‌ ಮೃತದೇಹ ತಾಯ್ನಾಡಿಗೆ

ಶಾರ್ಜಾದ ಅಲ್ ನಹ್ದಾ ಪ್ರದೇಶದ ನಿರ್ಜನ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಅಲ್ವಿನ್ ಅವರ ಮೃತದೇಹ ಪತ್ತೆಯಾಗಿತ್ತು. ಎರಡು ಚೀಲಗಳಲ್ಲಿ ಮೃತದೇಹದ ಭಾಗಗಳನ್ನು ಇರಿಸಲಾಗಿತ್ತು.


Click the Play button to hear this message in audio format

ದುಬೈನ ಶಾರ್ಜಾದಲ್ಲಿ ನಿಗೂಢವಾಗಿ ಹತ್ಯೆಗೀಡಾದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ ಇಂದು ತಾಯ್ನಾಡಿಗೆ ತಲುಪಿದೆ. ಅಲ್ವಿನ್ ಅವರ ಮೃತದೇಹವನ್ನು ಕಂಡು ಸಹೋದರ ಅನಿಲ್ ಪ್ರಶಾಂತ್ ಕುಂದರ್ ಕಣ್ಣೀರಿಟ್ಟಿದ್ದಾರೆ. ಪ್ರಕರಣದ ಭೀಕರ ವಿವರಗಳು ಮರಣೋತ್ತರ ಪರೀಕ್ಷೆ ಹಾಗೂ ಫೊರೆನ್ಸಿಕ್ ವರದಿಗಳ ಮೂಲಕ ಹೊರಬರುತ್ತಿದ್ದು, ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.

ಅಲ್ವಿನ್ ಪ್ರಕಾಶ್ ಕುಂದರ್ ಕಳೆದ 14 ವರ್ಷಗಳಿಂದ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಅವರು ನಾಪತ್ತೆಯಾದ ಬಳಿಕ ಕುಟುಂಬಸ್ಥರು ಆತಂಕಗೊಂಡಿದ್ದರು. ಸುಮಾರು ಎರಡು ತಿಂಗಳ ಬಳಿಕ ಅವರ ಮೃತದೇಹ ಕಾರೊಂದರಲ್ಲಿ ಪತ್ತೆಯಾಗಿದ್ದು, ದೇಹವನ್ನು ಒಂಬತ್ತು ಭಾಗಗಳಾಗಿ ಕತ್ತರಿಸಿ ಎರಡು ಚೀಲಗಳಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ.

ಕಾರಿನ ಡಿಕ್ಕಿಯಲ್ಲಿ ಪತ್ತೆಯಾದ ಮೃತದೇಹ

ಶಾರ್ಜಾದ ಅಲ್ ನಹ್ದಾ ವಾಣಿಜ್ಯ ಪ್ರದೇಶದ ನಿರ್ಜನ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಅಲ್ವಿನ್ ಅವರ ಮೃತದೇಹ ಪತ್ತೆಯಾಗಿತ್ತು. ಎರಡು ಚೀಲಗಳಲ್ಲಿ ಮೃತದೇಹದ ಭಾಗಗಳನ್ನು ಇರಿಸಲಾಗಿತ್ತು ಎಂದು ಫೊರೆನ್ಸಿಕ್ ವರದಿಯನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಈ ಪ್ರಕರಣದ ಕುರಿತು ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಯ ನಿಖರ ಕಾರಣ ಹಾಗೂ ಹತ್ಯೆಯಲ್ಲಿ ಭಾಗಿಯಾಗಿರುವವರ ಬಗ್ಗೆ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

ಪತ್ನಿ, ಪುತ್ರ ನಾಪತ್ತೆ; ತನಿಖೆ ಮುಂದುವರಿಕೆ

ಅಲ್ವಿನ್ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರನೂ ಘಟನೆ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಅವರ ಪತ್ತೆಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಪತ್ನಿ ಅಥವಾ ಪುತ್ರನ ಪಾತ್ರದ ಕುರಿತು ಯಾವುದೇ ಅಂತಿಮ ನಿರ್ಧಾರಕ್ಕೆ ತನಿಖಾ ಸಂಸ್ಥೆಗಳು ಬಂದಿಲ್ಲ. ಅವರ ನಾಪತ್ತೆಯ ವಿಚಾರವೂ ಪ್ರಕರಣದ ತನಿಖೆಯ ಭಾಗವಾಗಿದೆ.

ಕುಟುಂಬಸ್ಥರಿಂದ ತನಿಖೆಗೆ ಆಗ್ರಹ

ಅಲ್ವಿನ್ ಅವರ ಸಾವಿನ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಬೇಕು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಶಾರ್ಜಾ ಪೊಲೀಸರ ತನಿಖೆಯೊಂದಿಗೆ ಭಾರತೀಯ ಅಧಿಕಾರಿಗಳ ಸಹಕಾರವೂ ಅಗತ್ಯವಿದೆ ಎಂದು ಕುಟುಂಬದವರು ಮನವಿ ಮಾಡಿದ್ದಾರೆ. ಅಲ್ವಿನ್ ಅವರ ಮೃತದೇಹವನ್ನು ಇಂದು ತಾಯ್ನಾಡಿಗೆ ತರಲಾಗಿದ್ದು, ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.

Read More
Next Story