ಪ್ರೇಮದ ಹುಚ್ಚಾಟಕ್ಕೆ ಬಲಿಯಾದ ಕುಟುಂಬ: ಪುದುಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ ಶ್ವೇತಾ
x

ಪ್ರೇಮದ ಹುಚ್ಚಾಟಕ್ಕೆ ಬಲಿಯಾದ ಕುಟುಂಬ: ಪುದುಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ ಶ್ವೇತಾ

ಹತ್ಯೆಗೆ ಪೋಷಕರ ಅಸಮ್ಮತಿ ಮಾತ್ರವಲ್ಲ, ಆರ್ಥಿಕ ಮುಗ್ಗಟ್ಟುಗಳೂ ಕಾರಣವಾಗಿವೆ. ಬ್ಯಾಂಕ್‌ವೊಂದರಲ್ಲಿ ಸುಮಾರು 30 ಲಕ್ಷ ರೂ ಸಾಲ ಪಡೆದಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


Click the Play button to hear this message in audio format

ಜೀವನದಲ್ಲಿ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂಬ ಹತಾಶೆ ಮತ್ತು ಪ್ರೀತಿಯ ವ್ಯಾಮೋಹದಿಂದಾಗಿ ಪ್ರಿಯಕರನೊಂದಿಗೆ ಸೇರಿ ತಂದೆ - ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ವೈಟ್‌ಫೀಲ್ಡ್ ವಿಭಾಗದ ಪೊಲೀಸರ ತಂಡ ಬಂಧಿಸಿದೆ.

ಕೃತ್ಯದ ಬಳಿಕ ಪರಾರಿಯಾಗಿದ್ದ ಶ್ವೇತಾ (25)ಳನ್ನು ಪುದುಚೇರಿ ರೈಲ್ವೇ ನಿಲ್ದಾಣದ ಬಳಿ ಬಂಧಿಸಲಾಗಿದೆ. ಆಕೆಯ ಪ್ರಿಯಕರ ಕೆನತ್​ಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಚಾಕುವಿನಿಂದ ಇರಿದು ಸೋಮಸುಂದರ್ (52) ಅವರ ಪತ್ನಿ ಮತ್ತುಲಕ್ಷ್ಮಿ (48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ (19) ಎಂಬವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸೋಮವಾರ ರಾತ್ರಿ ಸೀಗೇಹಳ್ಳಿಯಲ್ಲಿರುವ ಡಾಮಿನಿಕ್ ಲೇಔಟ್‌ನ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು. ಆರೋಪಿ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ ಇಬ್ಬರೂ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಾಗ ಪರಿಚಿತರಾಗಿದ್ದರು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದು, ವರ್ಕ್ ಫ್ರಮ್ ಹೋಮ್‌ನಲ್ಲಿದ್ದರು. ಕಳೆದ ಎರಡು ತಿಂಗಳಿನಿಂದ ಲಿವ್-ಇನ್ ರಿಲೇಷನ್‌ನಲ್ಲಿ ಸೀಗೇಹಳ್ಳಿಯ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ತಮ್ಮ ಇರುವಿಕೆಯನ್ನು ಪೋಷಕರಿಂದ ಮರೆಮಾಚಿದ್ದರೂ, ನಂತರದ ದಿನಗಳಲ್ಲಿ ಪೋಷಕರಿಗೆ ತಾವು ವಾಸಿಸುತ್ತಿರುವ ಸ್ಥಳದ ಮಾಹಿತಿ ನೀಡಿದ್ದರು.

ಹತ್ಯೆಗೆ ಕಾರಣ

ಈ ಹತ್ಯೆಗೆ ಕೇವಲ ಪೋಷಕರ ಅಸಮ್ಮತಿ ಮಾತ್ರವಲ್ಲ, ಆರ್ಥಿಕ ಮುಗ್ಗಟ್ಟುಗಳೂ ಕಾರಣವಾಗಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶ್ವೇತಾ ಬ್ಯಾಂಕ್‌ವೊಂದರಲ್ಲಿ ಸುಮಾರು 30 ಲಕ್ಷ ರೂಪಾಯಿ ಸಾಲ ಪಡೆದಿದ್ದಳು. ಈ ಸಾಲದ ಮಾಸಿಕ ಕಂತುಗಳನ್ನು ಸಕಾಲಕ್ಕೆ ಪಾವತಿಸದ ಕಾರಣ, ಮಾರತ್‌ಹಳ್ಳಿಯಲ್ಲಿರುವ ತಂದೆ ಸೋಮಸುಂದರ್ ಅವರ ಮನೆಗೆ ಬ್ಯಾಂಕ್‌ನಿಂದ ನೋಟಿಸ್‌ಗಳು ಬಂದಿದ್ದವು. ಅಲ್ಲದೆ, ಮೊಬೈಲ್ ಸಾಲದ ಮರುಪಾವತಿ ಸಂದೇಶಗಳೂ ಪೋಷಕರಿಗೆ ತಲುಪಿದ್ದವು. ಕೆನತ್ ಜೊತೆ ಶ್ವೇತಾ ವಾಸಿಸುತ್ತಿರುವುದಕ್ಕೆ ಸೋಮಸುಂದರ್ ದಂಪತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತಾಯಿ ಮುತ್ತುಲಕ್ಷ್ಮಿ ಅವರು ಶ್ವೇತಳನ್ನು ಮನೆಗೆ ಕರೆಸಿಕೊಂಡು ಬುದ್ಧಿವಾದ ಹೇಳಿದ್ದರು. ಇದು ಶ್ವೇತಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಕೃತ್ಯ ಸಮರ್ಥಿಸಿಕೊಂಡ ಆರೋಪಿ

ಸೋಮವಾರ ಸಂಜೆ ಶ್ವೇತಾ ಪೋಷಕರನ್ನು ಭೇಟಿಯಾಗಲು ಕರೆದಿದ್ದಳು. ಮಾತುಕತೆಯ ವೇಳೆ ಉಂಟಾದ ಜಗಳ ತಾರಕಕ್ಕೇರಿತು. ಪೂರ್ವ ಯೋಜಿತ ಸಂಚಿನಂತೆ, ಶ್ವೇತಾ ಮತ್ತು ಕೆನತ್ ಚಾಕುವಿನಿಂದ ತಾಯಿ ಮುತ್ತುಲಕ್ಷ್ಮೀಯನ್ನು ಹತ್ಯೆಗೈದರು. ಆ ನಂತರ, ಊಟದ ನೆಪದಲ್ಲಿ ಮನೆಗೆ ಬಂದಿದ್ದ ತಂದೆ ಸೋಮಸುಂದರ್ (52) ಮತ್ತು ತಂಗಿ ಸುಪ್ರಿಯಾ (19) ಅವರ ಮೇಲೂ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದರು. ಹತ್ಯೆಯ ನಂತರ ಬೈಕ್‌ನಲ್ಲಿ ಆರೋಪಿಗಳು ಪರಾರಿಯಾದರು. ತೀವ್ರವಾಗಿ ಗಾಯಗೊಂಡಿದ್ದ ಸೋಮಸುಂದರ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವನ್ನಪ್ಪಿದರು. ಘಟನೆಯ ನಂತರ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ತೀವ್ರ ಹುಡುಕಾಟ ನಡೆಸಿದರು. ಅಂತಿಮವಾಗಿ ಪುದುಚೇರಿ ರೈಲ್ವೇ ನಿಲ್ದಾಣದ ಬಳಿ ಶ್ವೇತಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆಕೆಯ ಪ್ರಿಯಕರ ಕೆನತ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ವಿಚಾರಣೆಯ ಸಂದರ್ಭದಲ್ಲಿ, ನನ್ನ ಪೋಷಕರು ನನ್ನ ಜೀವನವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದರು, ನನಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ ಎಂದು ಶ್ವೇತಾ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾಳೆ.

ಡೈರಿಯಲ್ಲಿದ್ದ ಆತಂಕಕಾರಿ ಬರಹಗಳು

ಘಟನಾ ಸ್ಥಳದಲ್ಲಿ ಪೊಲೀಸರಿಗೆ ಶ್ವೇತಾ ಬರೆದ ಡೈರಿ ದೊರೆತಿದೆ. ಆಕೆಯ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುವಂತಹ ಸಾಲುಗಳು ಅದರಲ್ಲಿವೆ. "ಐ ಆ್ಯಮ್ ಸ್ಯಾಡ್, ಐ ಆ್ಯಮ್ ಲೋನ್ಲಿ, ಫೀಲಿಂಗ್ ಲವ್ಡ್, ಐ ಆ್ಯಮ್ ಡಿಪ್ರೆಸ್ಡ್, ಐ ಆ್ಯಮ್ ಸೂಪಿರಿಯರ್" ಎಂದು ಆಕೆ ಬರೆದುಕೊಂಡಿದ್ದಾಳೆ. ಆಕೆಯ ಅತಿಯಾದ ಅಹಂಕಾರ ಮತ್ತು ಡಿಪ್ರೆಶನ್‌ನಂತಹ ಮಾನಸಿಕ ಸ್ಥಿತಿಯೇ ಈ ಘೋರ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆತ್ತವರ ಮಾತು ಕೇಳದ ಮಗಳು, ಪ್ರೀತಿಯ ಹೆಸರಿನಲ್ಲಿ ನಡೆದ ಹತ್ಯೆ, ಆರ್ಥಿಕ ಶಿಸ್ತಿನ ಕೊರತೆ ಮತ್ತು ಅತಿಯಾದ ಸ್ವಾತಂತ್ರ್ಯದ ಹಂಬಲವು ಹೇಗೆ ಕುಟುಂಬವನ್ನೇ ಸರ್ವನಾಶ ಮಾಡುತ್ತದೆ ಎಂಬುದಕ್ಕೆ ಈ ಘಟನೆ ಒಂದು ಕರಾಳ ಉದಾಹರಣೆಯಾಗಿದೆ. ಆಧುನಿಕ ಜೀವನಶೈಲಿ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸದಿದ್ದರೆ, ಇಂತಹ ದುರಂತಗಳು ಮರುಕಳಿಸುವುದು ನಿಶ್ಚಿತ ಎಂಬ ಕಠಿಣ ಸಂದೇಶವನ್ನು ಈ ಪ್ರಕರಣ ಸಮಾಜಕ್ಕೆ ರವಾನಿಸಿದೆ. ಪ್ರಸ್ತುತ ಶ್ವೇತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೆನತ್‌ಗಾಗಿ ನೆರೆಯ ರಾಜ್ಯಗಳಲ್ಲಿಯೂ ಜಾಲ ಬೀಸಿದ್ದಾರೆ. ಶೀಘ್ರವೇ ಆತನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story