ʻರಾʼ ಅಧಿಕಾರಿ ಎಂದು ಮೂರು ದಶಕಗಳಿಂದ ವಂಚಿಸುತ್ತಿದ್ದ ಖದೀಮ ಕೊನೆಗೂ ಪೊಲೀಸರ ಬಲೆಗೆ
x

ಆಂಟನಿಗೆ ಸಂಬಂಧಿಸಿರಬಹುದಾದ 17 ಪ್ರಕರಣಗಳ ಪಟ್ಟಿಯನ್ನು ಮಂಗಳೂರು ನಗರ ಪೊಲೀಸರು ಸಿದ್ಧಪಡಿಸಿದ್ದಾರೆ.

ʻರಾʼ ಅಧಿಕಾರಿ ಎಂದು ಮೂರು ದಶಕಗಳಿಂದ ವಂಚಿಸುತ್ತಿದ್ದ ಖದೀಮ ಕೊನೆಗೂ ಪೊಲೀಸರ ಬಲೆಗೆ

ಪೊಲೀಸರ ಪ್ರಕಾರ, ಸ್ಯಾಮ್‌ ಆಂಟನಿ ಹಲವು ವರ್ಷಗಳಿಂದ ಹಲವು ಹೆಸರುಗಳನ್ನು ಬಳಸುತ್ತಿದ್ದ. ಕೆಲವೊಮ್ಮೆ ತಾನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿ, ಮತ್ತೊಮ್ಮೆ ರಾ (RAW) ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ.


Click the Play button to hear this message in audio format

ಸುಮಾರು ಮೂರು ದಶಕಗಳಿಂದ ವಿವಿಧ ಹೆಸರುಗಳು ಮತ್ತು ನಕಲಿ ಗುರುತಿನೊಂದಿಗೆ ಪೊಲೀಸರಿಗೆ ವಂಚಿಸುತ್ತಿದ್ದ 64 ವರ್ಷದ ಸ್ಯಾಮ್ ಆಂಟನಿ ಅಲಿಯಾಸ್ ಸ್ಯಾಮ್‌ ಪೀಟರ್‌ನನ್ನು ಮಂಗಳೂರು ನಗರ ಪೊಲೀಸರು ಸೆಪ್ಟೆಂಬರ್ 1ರಂದು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ. 2019ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ.

ಪೊಲೀಸರ ಪ್ರಕಾರ, ಸ್ಯಾಮ್‌ ಆಂಟನಿ ಹಲವು ವರ್ಷಗಳಿಂದ ಸ್ಯಾಮ್‌ ಪೀಟರ್, ಡ್ಯಾನಿ ಥರಕ್ಕನ್, ರಾಜೇಶ್ ರಾಬಿನ್ಸನ್ ಮತ್ತು ಆಂಥೋನಿ ಫ್ರಾನ್ಸಿಸ್ ಸೇರಿದಂತೆ ಹಲವು ಹೆಸರುಗಳನ್ನು ಬಳಸುತ್ತಿದ್ದ. ಕೆಲವೊಮ್ಮೆ ತಾನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿ, ಮತ್ತೊಮ್ಮೆ ರಾ (RAW) ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಈ ಗುರುತುಗಳಿಗೆ ಹೊಂದುವಂತೆ ನಕಲಿ ಪಾಸ್‌ಪೋರ್ಟ್, ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನೂ ಹೊಂದಿದ್ದ.

ಇಂಗ್ಲಿಷ್ ಮಾತುಗಾರಿಕೆ, ಕಾನೂನು ಜ್ಞಾನವೇ ಪ್ರಮುಖ ಅಸ್ತ್ರ

ಆಂಟನಿಗೆ ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತವಿದ್ದು, ಕಾನೂನು ವಿಚಾರಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 10 ನಿಮಿಷ ಮಾತನಾಡಿದರೆ ಸಾಕು, ತಾನು ಕೇಂದ್ರ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿ ಅಥವಾ ಪ್ರತಿಷ್ಠಿತ ಉದ್ಯಮಿ ಎಂಬ ನಂಬಿಕೆಯನ್ನು ಮೂಡಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಚ್ಚುಕಟ್ಟಾಗಿ ಉಡುಪು ಧರಿಸಿ, ಅಧಿಕಾರಿಯಂತೆ ನಡೆದುಕೊಳ್ಳುತ್ತಿದ್ದ ಆತ ತನ್ನ ಮಾತು ಮತ್ತು ವರ್ತನೆಯ ಮೂಲಕ ಎದುರಿನವರ ಗೌರವ ಗಳಿಸುತ್ತಿದ್ದ. ಇದೇ ತಂತ್ರವನ್ನು ಬಳಸಿಕೊಂಡು ಶ್ರೀಮಂತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್, ತೆರಿಗೆ ವಿವಾದಗಳಲ್ಲಿ ಸಿಲುಕಿದವರೇ ಟಾರ್ಗೆಟ್

ಬ್ಯಾಂಕ್ ವಂಚನೆ, ತೆರಿಗೆ ವಿವಾದ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಿಲುಕಿದ್ದ ಶ್ರೀಮಂತ ಉದ್ಯಮಿಗಳನ್ನು ಆಂಟನಿ ಸಂಪರ್ಕಿಸುತ್ತಿದ್ದ. ತಾನು ಹಿರಿಯ ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಷನ್ ಬ್ಯೂರೋ ಅಧಿಕಾರಿ ಎಂದು ಹೇಳಿಕೊಂಡು, ಹಣ ನೀಡಿದರೆ ಪ್ರಕರಣದಿಂದ ಪಾರು ಮಾಡುವುದಾಗಿ ಭರವಸೆ ನೀಡುತ್ತಿದ್ದ. ಪೊಲೀಸರ ಪ್ರಕಾರ, ಎನ್‌ಸಿಐಬಿ ಒಂದು ಸ್ವತಂತ್ರ ಸರ್ಕಾರೇತರ ಸಂಸ್ಥೆಯಾಗಿದ್ದರೂ, ಅದನ್ನು ದೇಶದ ಪ್ರಮುಖ ತನಿಖಾ ಸಂಸ್ಥೆಯಂತೆ ಬಿಂಬಿಸಿ ಸಂತ್ರಸ್ತರನ್ನು ನಂಬಿಸುತ್ತಿದ್ದ.

ಉದ್ಯಮಿಯಿಂದ 1.13 ಕೋಟಿ ರೂ. ಸುಲಿಗೆ ಆರೋಪ

2018ರಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಚಿನ್ನದ ಸರಕು ವಶಪಡಿಸಿಕೊಂಡ ಬಳಿಕ ಉದ್ಯಮಿ ಅಬ್ದುಲ್ ಶರೀಫ್ ಅವರ ಸಹೋದರ ಶಿಯಾಬುದ್ದೀನ್‌ನನ್ನು ಡಿಆರ್‌ಐ ವಿಚಾರಣೆ ನಡೆಸುತ್ತಿತ್ತು. ಈ ವಿಚಾರ ತಿಳಿದುಕೊಂಡ ಆಂಟನಿ ಐವರ ತಂಡದೊಂದಿಗೆ ಶರೀಫ್ ಅವರನ್ನು ಸಂಪರ್ಕಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಸಿಐಬಿನ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಪ್ರಕರಣ ಮುಚ್ಚಿಸಿಕೊಡುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಸುಮಾರು 10 ತಿಂಗಳ ಅವಧಿಯಲ್ಲಿ ಹಲವು ಕಂತುಗಳಲ್ಲಿ ಶರೀಫ್‌ನಿಂದ 1.13 ಕೋಟಿ ರೂ. ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಶರೀಫ್ ದೂರು ನೀಡಿದ್ದು, 2019ರ ಆಗಸ್ಟ್ 27ರಂದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಬೆಂಗಳೂರಿನಲ್ಲೂ ನಕಲಿ ಕಚೇರಿ; ಏಳು ತಿಂಗಳ ಬಳಿಕ ಪರಾರಿ

ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲೂ 2019ರಲ್ಲಿ ಆಂಟನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಎನ್‌ಸಿಐಬಿ ಅಧಿಕಾರಿ ಎಂದು ಹೇಳಿಕೊಂಡು ಕಚೇರಿಯೊಂದನ್ನು ತೆರೆದು ಸುಮಾರು ಏಳು ತಿಂಗಳು ನಡೆಸಿದ್ದ ಆತ, ಬಳಿಕ ಬಾಡಿಗೆಯನ್ನೂ ಪಾವತಿಸದೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಂಟನಿ ಪ್ರತ್ಯೇಕ ಗ್ಯಾಂಗ್ ನಡೆಸುತ್ತಿರಲಿಲ್ಲ. ಆದರೆ ಬೆಂಗಳೂರಿನ ಓರ್ವ ವಕೀಲ ಆತನ ಶಾಶ್ವತ ಸಹಚರನಾಗಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

1997ರಿಂದಲೇ ಅಪರಾಧದ ದಾಖಲೆ

ಪೊಲೀಸರು ಆಂಟನಿಯ ಹಳೆಯ ದಾಖಲೆಗಳನ್ನು ಪರಿಶೀಲಿಸಿದಾಗ ಆತನ ವಿರುದ್ಧದ ಮೊದಲ ವಂಚನೆ ಪ್ರಕರಣ 1997ರಲ್ಲಿ ಛತ್ತೀಸ್‌ಗಢದ ಖೈರಾಗಢ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಪತ್ತೆಯಾಗಿದೆ. 1998ರಲ್ಲಿ ಕರ್ನಾಟಕದ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಮೊದಲ ಪ್ರಕರಣ ದಾಖಲಾಗಿತ್ತು.

ಛತ್ತೀಸ್‌ಗಢದ ಬಳಿಕ ಕರ್ನಾಟಕ, ಬಿಹಾರ, ಚೆನ್ನೈ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಿ ವಿವಿಧ ಹೆಸರುಗಳಲ್ಲಿ ವಂಚನೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಆತನಿಗೆ ಹೆಚ್ಚಿನ ಸಂಪರ್ಕಗಳಿದ್ದ ಕಾರಣ ಅವುಗಳನ್ನು ಸುರಕ್ಷಿತ ತಾಣವಾಗಿ ಬಳಸುತ್ತಿದ್ದ ಎನ್ನಲಾಗಿದೆ.

ಮೊಬೈಲ್, ಬ್ಯಾಂಕ್ ವ್ಯವಹಾರದಲ್ಲೂ ಎಚ್ಚರಿಕೆ

ಆಂಟನಿ ತನ್ನ ಹೆಸರಿನಲ್ಲಿ ಯಾವುದೇ ಮೊಬೈಲ್ ಸಿಮ್ ನೋಂದಾಯಿಸಿಕೊಳ್ಳುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ, ತನ್ನ ಹೆಸರಿನ ಖಾತೆಗಳ ಮೂಲಕ ಹಣದ ವ್ಯವಹಾರ ನಡೆಸುತ್ತಿರಲಿಲ್ಲ ಎನ್ನಲಾಗಿದೆ.

2019ರ ಬಂಧನದ ಬಳಿಕ 2023ರಲ್ಲಿ ಜಾಮೀನು, ಮತ್ತೆ ನಾಪತ್ತೆ

2019ರ ಆಗಸ್ಟ್‌ನಲ್ಲಿ ಮಂಗಳೂರಿನ ಸಾಯಿ ಆರ್ಯ ಲಾಡ್ಜ್‌ನಲ್ಲಿ ಆಂಟನಿ ಸಮ್ ಪೀಟರ್ ಎಂಬ ಹೆಸರಿನಲ್ಲಿ ತಂಗಿದ್ದಾಗ ಪೊಲೀಸರು ಬಂಧಿಸಿದ್ದರು. ಆತನೊಂದಿಗೆ ಇದ್ದ ಏಳು ಮಂದಿಯನ್ನೂ ಬಂಧಿಸಿ ರಿವಾಲ್ವರ್, ಪಿಸ್ತೂಲ್, ನಕಲಿ ಗುರುತಿನ ಚೀಟಿಗಳು, ನಗದು, ವಾಹನಗಳು, ಮೊಬೈಲ್‌ಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಆತನ ವಿರುದ್ಧ ವಂಚನೆ, ನಕಲಿ ಗುರುತಿನ ಬಳಕೆ, ಅಪರಾಧ ಸಂಚು, ಶಸ್ತ್ರಾಸ್ತ್ರ ಕಾಯ್ದೆ ಮತ್ತು ರಾಜ್ಯ ಲಾಂಛನ ದುರ್ಬಳಕೆ ಸೇರಿದಂತೆ ಪ್ರಕರಣಗಳನ್ನು ದಾಖಲಿಸಲಾಗಿತ್ತು. 2007ರಲ್ಲೇ ಆತನ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು.

2023ರಲ್ಲಿ ಜಾಮೀನು ಪಡೆದ ಬಳಿಕ ಆಂಟನಿ ಮತ್ತೆ ನಾಪತ್ತೆಯಾಗಿದ್ದ. ಸುಮಾರು ಮೂರು ವರ್ಷಗಳ ಕಾಲ ಪೊಲೀಸರು ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.

ರಾಜಕೀಯ ಸಂಪರ್ಕದಿಂದ ಕೊನೆಗೂ ಪೊಲೀಸರ ಬಲೆಗೆ

ಸುಮಾರು ಮೂರು ತಿಂಗಳ ಹಿಂದೆ ಹಳೆಯ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಮಂಗಳೂರು ನಗರ ಪೊಲೀಸರು ಆಂಟನಿಯ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡರು. ಸಿಸಿಬಿಯಡಿ ಮೂರು ವಿಶೇಷ ತಂಡಗಳನ್ನು ರಚಿಸಿ ಆತನ ಹುಡುಕಾಟ ಆರಂಭಿಸಿದರು.

ಕೇರಳ ಮತ್ತು ಚೆನ್ನೈನಲ್ಲಿ ಆತನ ಹಳೆಯ ಸಹಚರರ ಮೂಲಕ ಸುಳಿವು ಹುಡುಕುತ್ತಿದ್ದ ಪೊಲೀಸರಿಗೆ ಕೇರಳದ ರಾಜಕಾರಣಿಯೊಬ್ಬರೊಂದಿಗೆ ಆತ ಆತ್ಮೀಯವಾಗಿದ್ದ ಮಾಹಿತಿ ದೊರೆತಿತ್ತು. ಕೇರಳದಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆತನ ಫೋಟೋ ಪೊಲೀಸರಿಗೆ ಸಿಕ್ಕಿದ್ದು, ಅದರ ಆಧಾರದ ಮೇಲೆ ಆತನನ್ನು ಪತ್ತೆಹಚ್ಚಲಾಯಿತು.

ಬಂಧನದ ವೇಳೆ ಕೂಡ ಆತ ನಕಲಿ ದಾಖಲೆಗಳನ್ನು ಹೊಂದಿದ್ದು, ಡ್ಯಾನಿಯಲ್ ಥರಕ್ಕನ್ ಎಂಬ ಹೆಸರಿನಲ್ಲಿ ‘ಎನ್‌ಸಿಐಬಿನ ನಿವೃತ್ತ ಹಿರಿಯ ಅಧಿಕಾರಿ’ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ 17 ಪ್ರಕರಣಗಳ ತನಿಖೆ

ಆಂಟನಿಗೆ ಸಂಬಂಧಿಸಿರಬಹುದಾದ 17 ಪ್ರಕರಣಗಳ ಪಟ್ಟಿಯನ್ನು ಮಂಗಳೂರು ನಗರ ಪೊಲೀಸರು ಸಿದ್ಧಪಡಿಸಿದ್ದಾರೆ. ದೇಶದ ವಿವಿಧ ಪೊಲೀಸ್ ಠಾಣೆಗಳಿಗೆ ಪತ್ರ ಬರೆದು ಆತನ ವಿರುದ್ಧ ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಬಂಧನದ ಬಳಿಕವೂ ಆತನ ಪರವಾಗಿ ವಕೀಲರು, ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಪೊಲೀಸರನ್ನು ಸಂಪರ್ಕಿಸಿ ಆತ ಪ್ರಾಮಾಣಿಕ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ಆತನ ಹಿಂದಿನ ಅಪರಾಧದ ವಿವರಗಳನ್ನು ತಿಳಿಸಿದ ಬಳಿಕವೇ ಅವರಿಗೆ ವಾಸ್ತವಿಕತೆ ಮನವರಿಕೆಯಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Read More
Next Story