
ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಮುಂದೂಡಲು ದರ್ಶನ್ ಅರ್ಜಿ ವಜಾ
ಹೈಕೋರ್ಟ್ ಸೂಚಿಸಿರುವ ಏಳು ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬರಾಗಿದ್ದಾರೆ. ಉಳಿದ ಸಾಕ್ಷಿಗಳ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದುವರಿಸಿ, ಪ್ರದೋಷ್ ಅವರನ್ನು ಏಳನೇ ಸಾಕ್ಷಿಯಾಗಿ ವಿಚಾರಣೆ ನಡೆಸುವಂತೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ. ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಮಯ ಅಗತ್ಯವಿದೆ ಎಂದು ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಮನವಿ ಮಾಡಲಾಗಿತ್ತು.
ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಕನಿಷ್ಠ 10 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಈ ಅವಧಿಯಲ್ಲಿ ಪ್ರಕರಣದ ಇತರ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಬಹುದು. ಆದರೆ, ಪ್ರದೋಷ್ ಅವರ ಹೇಳಿಕೆಯನ್ನು ಮಾತ್ರ ಮುಂದೂಡಿ, ನಂತರ ದಾಖಲಿಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು.
ಹೈಕೋರ್ಟ್ ಸೂಚಿಸಿರುವ ಏಳು ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬರಾಗಿದ್ದಾರೆ. ಉಳಿದ ಸಾಕ್ಷಿಗಳ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದುವರಿಸಿ, ಪ್ರದೋಷ್ ಅವರನ್ನು ಏಳನೇ ಸಾಕ್ಷಿಯಾಗಿ ವಿಚಾರಣೆ ನಡೆಸುವಂತೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಪ್ರದೋಷ್ ಅವರ ಹೇಳಿಕೆ ದಾಖಲಿಸಲು ಪ್ರಾಸಿಕ್ಯೂಷನ್ ತ್ವರಿತವಾಗಿ ಮುಂದಾಗುತ್ತಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅಗತ್ಯವಿರುವ ಸಮಯವನ್ನು ನೀಡಬೇಕು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಆದರೆ, ಈ ಮನವಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸದೆ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಪ್ರದೋಷ್ ಅವರ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮಗಳ ಮೇಲೆ ಇದೀಗ ಗಮನ ನೆಟ್ಟಿದೆ.

