ಸಚಿವ ಜಮೀರ್‌ ತಾಯಿ ಮನೆಯಲ್ಲಿ 1.13 ಕೋಟಿ ಚಿನ್ನ ಕದ್ದ ಸೋದರ ಸಂಬಂಧಿಗಳ ಬಂಧನ
x

ಸಚಿವ ಜಮೀರ್‌ ತಾಯಿ ಮನೆಯಲ್ಲಿ 1.13 ಕೋಟಿ ಚಿನ್ನ ಕದ್ದ ಸೋದರ ಸಂಬಂಧಿಗಳ ಬಂಧನ

ಆರೋಪಿಗಳಾದ ಅಮೀರ್ ಮತ್ತು ಸೈಯದ್ ಸಚಿವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಜ.15ರಂದು ಕುಶಲೋಪರಿ ವಿಚಾರಿಸುವ ನೆಪದಲ್ಲಿ ಅವರು ಸಚಿವರ ಮನೆಗೆ ಬಂದಿದ್ದರು. ಈ ವೇಳೆ ಕಳ್ಳತನ ಮಾಡಿ ಪರಾರಿಯಾಗಿದ್ದರು.


Click the Play button to hear this message in audio format

ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಮನೆಯಲ್ಲೇ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಶಿವಾಜಿನಗರ ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯವನ್ನು ಎಸಗಿದವರು ಯಾರೋ ಹೊರಗಿನ ಖದೀಮರಲ್ಲ, ಬದಲಾಗಿ ಸಚಿವರ ತಾಯಿಯ ರಕ್ತಸಂಬಂಧಿಗಳು ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಶಿವಾಜಿನಗರದ ಸ್ಟೇಷನ್ ರಸ್ತೆಯಲ್ಲಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ನಿವಾಸವು ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಸಚಿವರ ತಾಯಿ ಇಲ್ಲಿ ವಾಸವಾಗಿದ್ದು, ಅವರು ಮದುವೆ ಉಡುಗೊರೆಯಾಗಿ ಬಂದಿದ್ದ ಹಾಗೂ ಜೀವನಪರ್ಯಂತ ಉಳಿತಾಯದ ಮೂಲಕ ಖರೀದಿಸಿದ್ದ ಸುಮಾರು 1.2 ಕೆಜಿಗೂ ಅಧಿಕ ಚಿನ್ನಾಭರಣಗಳನ್ನು ಮನೆಯ ಕೋಣೆಯೊಂದರ ಕಪಾಟಿನಲ್ಲಿ ಸುರಕ್ಷಿತವಾಗಿಟ್ಟಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಆಭರಣಗಳನ್ನು ಪರಿಶೀಲಿಸಿದಾಗ, ಅವುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಕಂಗೆಟ್ಟ ಸಚಿವರ ತಾಯಿ, ತಕ್ಷಣ ಶಿವಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡ ಶಿವಾಜಿನಗರ ಪೊಲೀಸರು, ಮನೆಯೊಳಗೆ ಯಾರಿಗೆಲ್ಲಾ ಮುಕ್ತ ಪ್ರವೇಶವಿತ್ತು ಎಂಬ ಬಗ್ಗೆ ಮಾಹಿತಿ ಕಲೆಹಾಕಿದರು. ಹೊರಗಿನವರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ ಯಾವುದೇ ಕುರುಹುಗಳು ಕಂಡುಬಂದಿರಲಿಲ್ಲ. ಹೀಗಾಗಿ, ಮನೆಯೊಳಗೆ ಬಂದು ಹೋಗುವ ಆಪ್ತರ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಸಚಿವರ ತಾಯಿ ಕೂಡ ಕೆಲವು ಸಂಬಂಧಿಕರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನದ ಬೆನ್ನತ್ತಿದ ಪೊಲೀಸರು ತಾಂತ್ರಿಕ ಮಾಹಿತಿ ಮತ್ತು ಮೊಬೈಲ್ ಕರೆಗಳ ವಿವರವನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದರು. ವಿಚಾರಣೆಯ ನಂತರ ಈ ಕಳ್ಳತನದ ಹಿಂದೆ ಸಚಿವರ ಸೋದರ ಸಂಬಂಧಿಗಳಾದ ಗೋವಿಂದಪುರದ ಅಮೀರ್ ಅಹ್ಮದ್ ಹಾಗೂ ಸೈಯದ್ ಅಮೀನ್ ಅಹ್ಮದ್ ಅವರ ಕೈವಾಡವಿರುವುದು ಸಾಬೀತಾಯಿತು.

ಕೃತ್ಯ ಎಸಗಿದ ರೀತಿ

ಆರೋಪಿಗಳಾದ ಅಮೀರ್ ಮತ್ತು ಸೈಯದ್ ಸಚಿವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಜ.15ರಂದು ಕುಶಲೋಪರಿ ವಿಚಾರಿಸುವ ನೆಪದಲ್ಲಿ ಅವರು ಸಚಿವರ ಮನೆಗೆ ಬಂದಿದ್ದರು. ಸಚಿವರ ತಾಯಿಯೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ವಿಶ್ವಾಸ ಗಳಿಸಿದ್ದ ಈ ಇಬ್ಬರು, ತಾಯಿ ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ ಅಥವಾ ಅಡುಗೆ ಮನೆಯಲ್ಲಿದ್ದಾಗ ಚಾಣಾಕ್ಷತನದಿಂದ ಕೋಣೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಎಗರಿಸಿದ್ದರು. ಸಂಬಂಧಿಕರೇ ಆಗಿದ್ದರಿಂದ ಮನೆಯ ಭದ್ರತಾ ಸಿಬ್ಬಂದಿಯಾಗಲಿ ಅಥವಾ ಮನೆಯವರಾಗಲಿ ಅವರ ಮೇಲೆ ಸಂಶಯ ಪಟ್ಟಿರಲಿಲ್ಲ.

ಕಳ್ಳತನಕ್ಕೆ ಕಾರಣವೇನು?

ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು ಕೃತ್ಯಕ್ಕೆ ಕಾರಣವಾದ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಬಂಧಿತ ಅಮೀರ್ ಅಹ್ಮದ್ ಗೋವಿಂದಪುರದಲ್ಲಿ ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ. ಆದರೆ ಇತ್ತೀಚಿನ ವರ್ಷಗಳಲ್ಲಿ ಟ್ರಾವೆಲ್ಸ್ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದರಿಂದ ಆತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಸಾಲಗಾರರ ಕಾಟ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಆತ ಈ ಸುಲಭ ಹಾದಿಯನ್ನು ಆರಿಸಿಕೊಂಡಿದ್ದ. ಈ ಕೆಲಸಕ್ಕೆ ಆತನ ಪಾಲುದಾರನಾಗಿದ್ದ ಹಾಗೂ ಇಸ್ತ್ರಿ ಅಂಗಡಿ ನಡೆಸುತ್ತಿದ್ದ ಸೈಯದ್ ಅಮೀನ್ ಕೂಡ ಹಣದಾಸೆಗೆ ಸಾಥ್ ನೀಡಿದ್ದ. ಕದ್ದ ಚಿನ್ನಾಭರಣಗಳನ್ನು ಈ ಇಬ್ಬರು ಆರೋಪಿಗಳು ನೇರವಾಗಿ ಮಾರಾಟ ಮಾಡದೆ, ಮತ್ತಿಕೆರೆ ಹಾಗೂ ಕೆ.ಜಿ. ಹಳ್ಳಿ ಸಮೀಪದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಲ್ಲಿ ಅಡಮಾನವಿಟ್ಟಿದ್ದರು. ಅಲ್ಲಿಂದ ಬಂದ ಹಣವನ್ನು ತಮ್ಮ ಉದ್ಯಮದ ನಷ್ಟ ಸರಿದೂಗಿಸಲು ಮತ್ತು ವೈಯಕ್ತಿಕ ಖರ್ಚುಗಳಿಗೆ ಬಳಸಿಕೊಂಡಿದ್ದರು.

ಪೊಲೀಸರ ಕಾರ್ಯಾಚರಣೆ

ಶಿವಾಜಿನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೇವಲ ಇಬ್ಬರು ಆರೋಪಿಗಳನ್ನು ಬಂಧಿಸುವುದಷ್ಟೇ ಅಲ್ಲದೆ, ಅವರಿಂದ 1.13 ಕೋಟಿ ರೂ. ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿವರ ತಾಯಿ ನೀಡಿದ್ದ ದೂರಿನಲ್ಲಿ ಸುಮಾರು 1.2 ಕೆಜಿ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ತಿಳಿಸಲಾಗಿತ್ತು. ಉಳಿದ ಆಭರಣಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
Next Story