
ಕಚೇರಿಯಲ್ಲೇ ಯುವತಿಗೆ 20 ಬಾರಿ ಚಾಕು ಇರಿದು ಪ್ರೇಮಿ ಆತ್ಮಹತ್ಯೆಗೆ ಯತ್ನ
ಕಚೇರಿಯಲ್ಲೇ ಯುವತಿಗೆ 20 ಬಾರಿ ಚಾಕು ಇರಿದು ಕತ್ತು ಕೊಯ್ದಕೊಂಡ ಪಾಗಲ್ ಪ್ರೇಮಿ!
ಪಂಜಾಬ್‌ನ ಮೊಹಾಲಿಯಲ್ಲಿ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಯ ಕಚೇರಿಗೆ ನುಗ್ಗಿ 20ಕ್ಕೂ ಹೆಚ್ಚು ಬಾರಿ ಚಾಕು ಇರಿದು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ನಡೆದಿದೆ.
ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಯ ಕಚೇರಿಗೆ ನುಗ್ಗಿ ಆಕೆಗೆ 20ಕ್ಕೂ ಹೆಚ್ಚು ಬಾರಿ ಚಾಕು ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ. ಆ ಬಳಿಕ ತಾನೂ ಕೂಡ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಆರೋಪಿಯು ಗುರುವಾರ ಸಂಜೆ ಸುಮಾರು 7.40 ರ ಸುಮಾರಿಗೆ ಡಿಂಪಲ್ ಎಂಬ ಯುವತಿ ಕೆಲಸ ಮಾಡುತ್ತಿದ್ದ ಕಚೇರಿಗೆ ಪ್ರವೇಶಿಸಿದ್ದಾನೆ. ಯುವತಿಯು ತನ್ನ ಡೆಸ್ಕ್‌ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾಗ, ಹಿಂದಿನಿಂದ ಬಂದ ಆರೋಪಿಯು ಆಕೆಯ ಮೇಲೆ ದಿಢೀರ್ ಆಗಿ ಚಾಕುವಿನಿಂದ ಮನಸೋಇಚ್ಛೆ ದಾಳಿ ನಡೆಸಿದ್ದಾನೆ. ಕಣ್ಣಿನ ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಆಕೆಗೆ 20ಕ್ಕೂ ಹೆಚ್ಚು ಬಾರಿ ಇರಿದು ರಕ್ತದ ಮಡುವಿನಲ್ಲಿ ಬೀಳಿಸಿದ್ದಾನೆ. ಕಚೇರಿಯಲ್ಲಿದ್ದ ಸಹೋದ್ಯೋಗಿಗಳು ಇದನ್ನು ನೋಡಿ ತಡೆಯಲು ಬರುವಷ್ಟರಲ್ಲಿ ಯುವತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಕೃತ್ಯ ಎಸಗಿದ ತಕ್ಷಣ ಆರೋಪಿಯು ಅದೇ ಚಾಕುವಿನಿಂದ ತನ್ನದೇ ಹೊಟ್ಟೆ ಮತ್ತು ಕುತ್ತಿಗೆಗೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರ ನಡುವೆ ಪ್ರೇಮ ವೈಫಲ್ಯ ಹಾಗೂ ಹಳೇ ದ್ವೇಷವೇ ಈ ಭೀಕರ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಧಾವಿಸಿರುವ ಮೊಹಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

