
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರ ಪುಂಡಾಟ; ವಾರ್ಡರ್ ಮೇಲೆ ಹಲ್ಲೆಗೆ ಯತ್ನ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸುತ್ತಿರುವ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಕೈದಿಗಳು ಅನಾರೋಗ್ಯದ ನೆಪ ಒಡ್ಡಿ ಜೈಲು ಆವರಣದಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪ ಹಾಗೂ ಕೈದಿಗಳ ಪುಂಡಾಟಿಕೆಯ ಮತ್ತೊಂದು ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ ಬಾಂಬ್ ಸ್ಫೋಟ ಪ್ರಕರಣದ ಕೈದಿಗಳನ್ನು ಪ್ರಶ್ನಿಸಿದ ಜೈಲು ಸಿಬ್ಬಂದಿ ಜೊತೆ ಕೈದಿಗಳು ತೀವ್ರ ವಾಗ್ವಾದ ನಡೆಸಿ, ಜೈಲಿನ ಆವರಣದಲ್ಲೇ ಧರ್ಮದ ಪರ ಘೋಷಣೆ ಕೂಗಿ ಅಟ್ಟಹಾಸ ಮೆರೆದಿರುವ ಗಂಭೀರ ಘಟನೆ ಸಂಭವಿಸಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದಿದೆ ಎನ್ನಲಾದ ಈ ಘಟನೆಯಿಂದಾಗಿ ಕಾರಾಗೃಹದ ಆವರಣದಲ್ಲಿ ಕೆಲಕಾಲ ತೀವ್ರ ಉದ್ವಿಗ್ನ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಘಟನೆಗೆ ಅಸಲಿ ಕಾರಣವೇನು?
ಜೈಲಿನ ಮೂಲಗಳ ಪ್ರಕಾರ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸುತ್ತಿರುವ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಕೈದಿಗಳು ಅನಾರೋಗ್ಯದ ನೆಪ ಒಡ್ಡಿ ಜೈಲು ಆವರಣದಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಆದರೆ, ಜೈಲಿನ ನಿಯಮಾವಳಿಗಳನ್ನು ಮರೆಮಾಚಲು ಯತ್ನಿಸಿದ ಈ ಇಬ್ಬರು, ತಮ್ಮ ಅಸಲಿ ಗುರುತನ್ನು ಮರೆಮಾಚಿ ಬೇರೊಬ್ಬ ಕೈದಿಯ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಲು ಸಂಚು ರೂಪಿಸಿದ್ದರು.
ಆಸ್ಪತ್ರೆಯ ದಾಖಲಾತಿ ವಿಭಾಗದಲ್ಲಿದ್ದ ಜೈಲು ವಾರ್ಡರ್ ಕೈದಿಗಳ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ಇಬ್ಬರ ನಕಲಿ ಆಟ ಬಯಲಾಗಿದೆ. "ನಿಮ್ಮ ಹೆಸರೇನು?, ಬೇರೆ ಕೈದಿಯ ಹೆಸರಿನಲ್ಲಿ ಆಸ್ಪತ್ರೆಗೆ ಸೇರಲು ಯಾಕೆ ಪ್ರಯತ್ನಿಸುತ್ತಿದ್ದೀರಿ?" ಎಂದು ವಾರ್ಡರ್ ಕಟ್ಟುನಿಟ್ಟಾಗಿ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಉಗ್ರರು ವಾರ್ಡರ್ ಜೊತೆ ಏಕವಚನದಲ್ಲಿ ಮಾತಿನ ಚಕಮಕಿ ಆರಂಭಿಸಿದ್ದಾರೆ.
ಜೈಲಾಧಿಕಾರಿಗಳ ವಿರುದ್ಧವೇ ತಿರುಗಿಬಿದ್ದ ಉಗ್ರರು
ಜೈಲು ವಾರ್ಡರ್ ಮತ್ತು ಇಬ್ಬರು ಕೈದಿಗಳ ನಡುವೆ ಮಾತಿನ ಚಕಮಕಿ ಜೋರಾಗುತ್ತಿದ್ದಂತೆ, ಜೈಲಿನ ವಿವಿಧ ಬ್ಯಾರಕ್‌ಗಳಲ್ಲಿದ್ದ ಬಾಂಬ್ ಸ್ಫೋಟ ಪ್ರಕರಣದ ಇತರ 50ಕ್ಕೂ ಹೆಚ್ಚು ಉಗ್ರ ಕೈದಿಗಳು ಕ್ಷಣಾರ್ಧದಲ್ಲಿ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದಾರೆ. ವಾರ್ಡರ್ ಕ್ರಮವನ್ನು ತೀವ್ರವಾಗಿ ವಿರೋಧಿಸಿದ ಈ ಕೈದಿಗಳ ಗುಂಪು, ಜೈಲಿನ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಅಷ್ಟಕ್ಕೇ ನಿಲ್ಲದ ಕೈದಿಗಳ ಉದ್ರಿಕ್ತ ಗುಂಪು, ಜೈಲಿನೊಳಗೇ ನಿಂತು ಒಂದು ನಿರ್ದಿಷ್ಟ ಧರ್ಮದ ಪರವಾಗಿ ಅತ್ಯಂತ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಜೈಲು ನಿಯಮಾವಳಿಗಳನ್ನು ಅಣಕಿಸಿದ್ದಾರೆ. ಈ ವೇಳೆ ಕರ್ತವ್ಯ ನಿರತರಾಗಿದ್ದ ಜೈಲು ವಾರ್ಡರ್ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಲು ಸಹ ಪುಂಡ ಕೈದಿಗಳು ಮುಂದಾಗಿದ್ದಾರೆ. ಜೈಲಿನ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಉಗ್ರ ಕೈದಿಗಳು ಒಟ್ಟಾಗಿ ಧರ್ಮದ ಹೆಸರಿನಲ್ಲಿ ಘೋಷಣೆ ಕೂಗಿ ಹಲ್ಲೆಗೆ ಯತ್ನಿಸಿರುವುದು ತೀವ್ರ ಆತಂಕ ಮೂಡಿಸಿದೆ.
ಪರಿಸ್ಥಿತಿ ತಣ್ಣಗಾಗಿಸಿದ ಅಧಿಕಾರಿಗಳು
ಜೈಲಿನೊಳಗೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಜೈಲು ಕಂಟ್ರೋಲ್ ರೂಂ ಸಿಬ್ಬಂದಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರಣಿ ವಿವಾದಗಳಿಂದ ಸುದ್ದಿಯಾಗುತ್ತಿರುವ ಪರಪ್ಪನ ಅಗ್ರಹಾರಕ್ಕೆ ತಕ್ಷಣವೇ ಜೈಲಿನ ಹಿರಿಯ ಅಧಿಕಾರಿಗಳು ಹಾಗೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದ ಪೊಲೀಸ್ ಪಡೆ ಧಾವಿಸಿದೆ.
ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರತಿಭಟನೆ ಹಾಗೂ ದಾಂಧಲೆ ನಡೆಸುತ್ತಿದ್ದ ಉಗ್ರ ಕೈದಿಗಳ ಮನವೊಲಿಸಲು ಯತ್ನಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಜೈಲಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ ಹಾಗೂ ಉದ್ರಿಕ್ತ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್‌ಗಳಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

