ಪಶ್ಚಿಮ ಬಂಗಾಳ ಮೂಲದ ಯುವತಿ ಅಪಹರಿಸಿ ಸಾಮೂಹಿಕ ಅತ್ಯಾಚಾರ- ಮೂವರು ಆರೋಪಿಗಳ ಬಂಧನ
x

ಪಶ್ಚಿಮ ಬಂಗಾಳ ಮೂಲದ ಯುವತಿ ಅಪಹರಿಸಿ ಸಾಮೂಹಿಕ ಅತ್ಯಾಚಾರ- ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳನ್ನು ತಿ. ನರಸೀಪುರ ಪಟ್ಟಣದ ಕಿರಣ್ ಅಲಿಯಾಸ್ ಹುಚ್ಚ, ರಿಹಾನ್ ಖಾನ್ ಹಾಗೂ ಕಿಶೋರ್ ಕುಮಾರ್ ಎಂದು ಗುರುತಿಸಲಾಗಿದೆ. ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Click the Play button to hear this message in audio format

ಪಶ್ಚಿಮ ಬಂಗಾಳ ಮೂಲದ 30 ವರ್ಷದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೈಸೂರು ಜಿಲ್ಲೆಯ ತಿ. ನರಸೀಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜುಲೈ 18ರ ರಾತ್ರಿ ತಿ. ನರಸೀಪುರ ತಾಲೂಕಿನ ಮೂಗೂರು ಗ್ರಾಮದ ಸಮೀಪದ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿಗಳನ್ನು ತಿ. ನರಸೀಪುರ ಪಟ್ಟಣದ ಕಿರಣ್ ಅಲಿಯಾಸ್ ಹುಚ್ಚ, ರಿಹಾನ್ ಖಾನ್ ಹಾಗೂ ಕಿಶೋರ್ ಕುಮಾರ್ ಎಂದು ಗುರುತಿಸಲಾಗಿದೆ. ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪಹರಣಕ್ಕೆ ಬಳಸಿದ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಳಾಸ ಕೇಳುವ ನೆಪದಲ್ಲಿ ಅಪಹರಣ

ಪೊಲೀಸರ ಮಾಹಿತಿ ಪ್ರಕಾರ, ಸಂತ್ರಸ್ತೆ ಕಳೆದ ಮೂರು ತಿಂಗಳಿಂದ ತಿ. ನರಸೀಪುರ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ನಗರದ ಚಾಟ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 18ರ ರಾತ್ರಿ ಸ್ನೇಹಿತರ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಮೂವರು ಆರೋಪಿಗಳು ವಿಳಾಸ ಕೇಳುವ ನೆಪದಲ್ಲಿ ಆಕೆಯನ್ನು ಸಂಪರ್ಕಿಸಿದ್ದಾರೆ.

ಬಳಿಕ ಬಲವಂತವಾಗಿ ಕಾರಿನೊಳಗೆ ಕೂರಿಸಿಕೊಂಡು ಮೂಗೂರು ಗ್ರಾಮದ ಸಮೀಪದ ಲಾಡ್ಜ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ, ಆಕೆಯ ಮೊಬೈಲ್ ಫೋನ್‌ಗಳು ಹಾಗೂ 5 ಸಾವಿರ ರೂ. ನಗದು ಕಸಿದುಕೊಂಡಿದ್ದಾರೆ ಎನ್ನಲಾಗಿದೆ.

1 ಲಕ್ಷ ರೂ.ಗೆ ಬೇಡಿಕೆ- ಚಾಣಾಕ್ಷತನದಿಂದ ತಪ್ಪಿಸಿಕೊಂಡ ಸಂತ್ರಸ್ತೆ

ಪ್ರಕರಣದ ಬಳಿಕ ಆರೋಪಿಗಳು ಸಂತ್ರಸ್ತೆಯನ್ನು ಲಾಡ್ಜ್‌ನ ಕೊಠಡಿಯಲ್ಲಿ ಇರಿಸಿ, ಮತ್ತಷ್ಟು ಹಣಕ್ಕಾಗಿ 1 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಹಣ ಮನೆಯಲ್ಲಿದೆ ಎಂದು ನಂಬಿಸಿದ ಸಂತ್ರಸ್ತೆಯನ್ನು ಆರೋಪಿಗಳು ಅದೇ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆ ಸಮೀಪ ಕಾರಿನಿಂದ ಇಳಿದ ತಕ್ಷಣ ಮಹಿಳೆ ಮನೆಯೊಳಗೆ ಓಡಿ ಬಾಗಿಲು ಹಾಕಿಕೊಂಡು ಜೋರಾಗಿ ಕೂಗಿ ಸಹಾಯ ಕೋರಿದ್ದಾರೆ.

ಮನೆಯ ಮಾಲೀಕರು ಹಾಗೂ ಸ್ಥಳೀಯರು ನೆರವಿಗೆ ಧಾವಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಮನೆಯ ಮಾಲೀಕರ ಸಹಾಯದಿಂದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿ, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು

ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ತಿ. ನರಸೀಪುರ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ, ಮೂವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಸಿದ್ದ ಕಾರನ್ನೂ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪಶ್ಚಿಮ ಬಂಗಾಳ ಮೂಲದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Live Updates

  • 21 July 2026 7:09 PM IST

    ಪ್ರಧಾನಿ ನಿವಾಸ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ಮುಖಂಡರು ಪೊಲೀಸ್‌ ವಶಕ್ಕೆ

    ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ​ ಪಾರ್ಟಿ ನಡೆಸಿದ ಸಂಸತ್ ಚಲೋ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲ ಪ್ರಯೋಗ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಮುಂದೆ ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Read More
Next Story