Police foil horrific mass murder plot in Mumbai: Pune-based accused arrested!
x

ಎಐ ಆಧಾರಿತ ಚಿತ್ರ

ಮುಂಬೈನಲ್ಲಿ ಭೀಕರ ಸಾಮೂಹಿಕ ಹತ್ಯೆ ಸಂಚು ಭೇದಿಸಿದ ಪೊಲೀಸರು: ಪುಣೆ ಮೂಲದ ಆರೋಪಿ ಬಂಧನ!

ಮಾತ್ರೆ ಸೇವಿಸಿದ ಕೆಲವೇ ಹೊತ್ತಿನಲ್ಲಿ ಸಲ್ಮಾನ್ ಸಯ್ಯದ್ ಎಂಬ ಯುವಕ ಸೇರಿದಂತೆ ಹಲವರಿಗೆ ತೀವ್ರ ವಾಂತಿಭೇದಿಯಾಗಿ, ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.


Click the Play button to hear this message in audio format

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಭೀಕರ ದುರಂತವೊಂದನ್ನು ಸೃಷ್ಟಿಸಲು ಹೂಡಲಾಗಿದ್ದ ಆಘಾತಕಾರಿ ಸಂಚನ್ನು ಮುಂಬೈ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮೊಹರಂ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಸಾವಿರಾರು ಜನರಿಗೆ ವಿಷದ ಮಾತ್ರೆಗಳನ್ನು ಹಂಚಿ, ಸಾಮೂಹಿಕ ಹತ್ಯಾಕಾಂಡ ನಡೆಸಲು ಯತ್ನಿಸುತ್ತಿದ್ದ ಪುಣೆ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಯನ್ನು ಪುಣೆಯ ವಿಮಾನ ನಗರದ ನಿವಾಸಿ ಫಯಾಜ್ ಪ್ರೇಮ್‌ಜಿ (39) ಎಂದು ಗುರುತಿಸಲಾಗಿದೆ. ಈತ ಬಿಬಿಎ ಪದವೀಧರನಾಗಿದ್ದು, ತನ್ನ ತಂದೆಯ ಜೊತೆ ಪೇಂಟ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ನೋವು ನಿವಾರಕದ ಹೆಸರಲ್ಲಿ 'ಸಾವಿನ ಮಾತ್ರೆ'

ದಕ್ಷಿಣ ಮುಂಬೈನ ಡೊಂಗ್ರಿ ಪ್ರದೇಶದ ನೋರ್ ಬಾಗ್‌ನಿಂದ ರೆಹಮತ್ ಬಾಗ್ ಕಡೆಗೆ ಸಾಗುತ್ತಿದ್ದ ಮೊಹರಂ ಮೆರವಣಿಗೆಯ ವೇಳೆ ಈ ಘಟನೆ ನಡೆದಿದೆ. ಧಾರ್ಮಿಕ ಆಚರಣೆಯ ಅಂಗವಾಗಿ ದೇಹವನ್ನು ದಂಡಿಸಿಕೊಂಡು ಸುಸ್ತಾಗಿದ್ದ ಭಕ್ತರಿಗೆ, ಈತ ಮತ್ತು ಈತನ ಕಡೆಯವರು 'ನೋವು ನಿವಾರಕ ಮಾತ್ರೆಗಳು' ಎಂದು ಹೇಳಿ ಕ್ಯಾಪ್ಸೂಲ್‌ಗಳನ್ನು ವಿತರಿಸಿದ್ದಾರೆ. ಮೊಹರಂ ವೇಳೆ ಉಚಿತವಾಗಿ ಆಹಾರ, ನೀರು, ಔಷಧಿಗಳನ್ನು ಹಂಚುವುದು ವಾಡಿಕೆಯಾಗಿದ್ದರಿಂದ ಜನರು ಸಂಶಯ ಪಡದೆ ಮಾತ್ರೆಗಳನ್ನು ಸೇವಿಸಿದ್ದಾರೆ.

ಮಾತ್ರೆ ಸೇವಿಸಿದ ಕೆಲವೇ ಹೊತ್ತಿನಲ್ಲಿ ಸಲ್ಮಾನ್ ಸಯ್ಯದ್ ಎಂಬ ಯುವಕ ಸೇರಿದಂತೆ ಹಲವರಿಗೆ ತೀವ್ರ ವಾಂತಿಭೇದಿಯಾಗಿ, ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಮತ್ತು ಪೊಲೀಸರು ಗಸ್ತು ತಿರುಗುತ್ತಿದ್ದ ತಂಡಕ್ಕೆ ಮಾಹಿತಿ ನೀಡಿದ್ದಾರೆ.

14,900 ವಿಷದ ಮಾತ್ರೆ ಜಪ್ತಿ!

ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಡೊಂಗ್ರಿ ಭಾಗದ ಗೆಸ್ಟ್ ಹೌಸ್ ಒಂದರಲ್ಲಿದ್ದ ಫಯಾಜ್ ಪ್ರೇಮ್‌ಜಿಯನ್ನು ವಶಕ್ಕೆ ಪಡೆದಿದ್ದಾರೆ. ಆತ ತಂಗಿದ್ದ ಕೋಣೆಯನ್ನು ತಪಾಸಣೆ ನಡೆಸಿದಾಗ ಪೊಲೀಸರೇ ಬೆಚ್ಚಿಬಿದ್ದಿದ್ದು, ಅಲ್ಲಿ ಬರೋಬ್ಬರಿ 14,900 ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಲಾಗಿದೆ.

ತನಿಖೆಯಲ್ಲಿ ಬಯಲಾದ ಆಘಾತಕಾರಿ ಸತ್ಯಗಳು

ಆರೋಪಿಯು ಆನ್‌ಲೈನ್ ಮೂಲಕ ಬರೋಬ್ಬರಿ 50 ಕೆಜಿ ಜಿಂಕ್ ಫಾಸ್ಫೈಡ್ (ಇಲಿ ಪಾಷಾಣ) ಮತ್ತು 30,000 ಖಾಲಿ ಕ್ಯಾಪ್ಸೂಲ್‌ಗಳನ್ನು ಆರ್ಡರ್ ಮಾಡಿದ್ದ. ಕಳೆದ 15 ದಿನಗಳಿಂದ ಮುಂಬೈನ ಗೆಸ್ಟ್ ಹೌಸ್‌ನಲ್ಲೇ ಉಳಿದುಕೊಂಡು ಪ್ರತಿಯೊಂದು ಕ್ಯಾಪ್ಸೂಲ್‌ಗೆ ತಲಾ 1 ಗ್ರಾಂ ನಷ್ಟು ಜಿಂಕ್ ಫಾಸ್ಫೈಡ್ ವಿಷವನ್ನು ತುಂಬಿ ಸುಮಾರು 30,000 ಮಾತ್ರೆಗಳನ್ನು ಸಿದ್ಧಪಡಿಸಲು ಈತ ಸಂಚು ರೂಪಿಸಿದ್ದ. ಜಿಂಕ್ ಫಾಸ್ಫೈಡ್ ಮನುಷ್ಯನ ಹೊಟ್ಟೆಗೆ ಸೇರಿದರೆ ಹೊಟ್ಟೆಯಲ್ಲಿನ ಆಮ್ಲದೊಂದಿಗೆ ವರ್ತಿಸಿ 'ಫಾಸ್ಫಿನ್' ಎಂಬ ಮಾರಕ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ಬಹುಅಂಗಾಂಗ ವೈಫಲ್ಯಕ್ಕೆ ಕಾರಣವಾಗಿ ತಕ್ಷಣವೇ ಸಾವು ಸಂಭವಿಸುತ್ತದೆ.

ಬೈಕುಲ್ಲಾ ಠಾಣೆ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 109 (ಕೊಲೆ ಯತ್ನ), 110 (ಹತ್ಯೆಗೆ ಯತ್ನ) ಹಾಗೂ 123 (ವಿಷದ ಮೂಲಕ ಹಾನಿ ಉಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಮಯಪ್ರಜ್ಞೆಯಿಂದ ಪೊಲೀಸರು ದಾಳಿ ನಡೆಸಿದ್ದರಿಂದ ಸುಮಾರು 30,000 ಜನರ ಜೀವಕ್ಕೆ ಎದುರಾಗಿದ್ದ ಬಹುದೊಡ್ಡ ವಿಧ್ವಂಸಕ ಕೃತ್ಯವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.

Read More
Next Story