Kerala model Harsha Sunny arrested with ganja worth Rs 11.82 crore
x

ಕೇರಳ ಮಾಡೆಲ್ ಹರ್ಷಾ ಸನ್ನಿ

11.82 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಸಮೇತ ಕೇರಳ ಮಾಡೆಲ್ ಹರ್ಷಾ ಸನ್ನಿ ಅರೆಸ್ಟ್

ವೃತ್ತಿಯಲ್ಲಿ ಮಾಡೆಲ್ ಹಾಗೂ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ಹರ್ಷಾ ಸನ್ನಿ ವಿರುದ್ಧ 'ಮಾದಕ ದ್ರವ್ಯ ಮತ್ತು ಮಾನಸಿಕ ವಿಕೃತಿ ವಸ್ತುಗಳ ಕಾಯ್ದೆ' (NDPS Act, 1985) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Click the Play button to hear this message in audio format

ಬ್ಯಾಂಕಾಕ್‌ನಿಂದ ಮುಂಬೈಗೆ ಬರೋಬ್ಬರಿ 11.82 ಕೋಟಿ ರೂಪಾಯಿ ಮೌಲ್ಯದ 'ಹೈಡ್ರೋಪೋನಿಕ್ ಗಾಂಜಾ'ವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖ್ಯಾತ ಮಾಡೆಲ್ ಹಾಗೂ 'ಮಿಸಸ್ ಕೇರಳ' ಸೌಂದರ್ಯ ಸ್ಪರ್ಧೆಯ ಮಾಜಿ ರನ್ನರ್-ಅಪ್ ಹರ್ಷಾ ಸನ್ನಿ (29) ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದ್ದು, ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜೂನ್ 11ರ ಬೆಳಗಿನ ಜಾವ ಬ್ಯಾಂಕಾಕ್‌ನಿಂದ ಏರ್ ಇಂಡಿಯಾ (TG-351) ವಿಮಾನದ ಮೂಲಕ ಮುಂಬೈಗೆ ಬಂದಿಳಿದ ಹರ್ಷಾ ಅವರ ವರ್ತನೆ ಕಂಡು ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಯುನಿಟ್ (AIU) ಹಾಗೂ ಕಸ್ಟಮ್ಸ್ ಅಧಿಕಾರಿಗಳಿಗೆ ತೀವ್ರ ಅನುಮಾನ ಮೂಡಿತ್ತು. ಹೀಗಾಗಿ ಅವರ ಟ್ರಾಲಿ ಬ್ಯಾಗ್ ಅನ್ನು ಅಧಿಕಾರಿಗಳು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದರು.

ಬ್ಯಾಗ್‌ನಲ್ಲಿತ್ತು 12 ಪ್ಯಾಕೆಟ್ ಗಾಂಜಾ

ಟ್ರೋಲಿ ಬ್ಯಾಗ್‌ನೊಳಗೆ ಅತ್ಯಂತ ಜಾಣ್ಮೆಯಿಂದ ಅಡಗಿಸಿಡಲಾಗಿದ್ದ 12 ವ್ಯಾಕ್ಯೂಮ್-ಸೀಲ್ಡ್ ಪ್ಯಾಕೆಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡರು. ಸ್ಥಳದಲ್ಲೇ ಎನ್‌ಡಿಪಿಎಸ್ (NDPS) ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷಿಸಿದಾಗ ಇದು ಅತ್ಯುನ್ನತ ತಂತ್ರಜ್ಞಾನ ಬಳಸಿ ಬೆಳೆಸಲಾದ 'ಹೈಡ್ರೋಪೋನಿಕ್ ಗಾಂಜಾ' ಎಂಬುದು ದೃಢಪಟ್ಟಿದೆ. ಜಪ್ತಿಯಾದ ಮಾದಕ ವಸ್ತುವಿನ ಒಟ್ಟು ತೂಕ 11.824 ಕೆ.ಜಿ. ಆಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 11.82 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪರಿಚಯಸ್ಥರ ಮೇಲೆ ಗೂಬೆ ಕೂರಿಸಿದ ಆರೋಪಿ

ವೃತ್ತಿಯಲ್ಲಿ ಮಾಡೆಲ್ ಹಾಗೂ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ಹರ್ಷಾ ಸನ್ನಿ ವಿರುದ್ಧ 'ಮಾದಕ ದ್ರವ್ಯ ಮತ್ತು ಮಾನಸಿಕ ವಿಕೃತಿ ವಸ್ತುಗಳ ಕಾಯ್ದೆ' (NDPS Act, 1985) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಹರ್ಷಾ, "ನಾನು ಪ್ರವಾಸ ಮತ್ತು ಮಾಡೆಲಿಂಗ್/ನೈಲ್-ಆರ್ಟ್ ಅವಕಾಶಗಳ ಹುಡುಕಾಟಕ್ಕಾಗಿ ಬ್ಯಾಂಕಾಕ್‌ಗೆ ತೆರಳಿದ್ದೆ. ಅಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರು ನನ್ನ ವಿಶ್ವಾಸಗಳಿಸಿ ಈ ಬ್ಯಾಗ್‌ ಅನ್ನು ಭಾರತಕ್ಕೆ ಕೊಂಡೊಯ್ಯುವಂತೆ ನೀಡಿದ್ದರು. ಅದರಲ್ಲಿದ್ದ ವಸ್ತುಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ" ಎಂದು ವಾದಿಸಿದ್ದಾರೆ.

ತನಿಖೆ ಚುರುಕು

ಆರೋಪಿಯ ಈ ಕಥೆಯನ್ನು ಕಸ್ಟಮ್ಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಈ ರೀತಿ ಕಥೆ ಹೆಣೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೃಹತ್ ಮಾದಕವಸ್ತು ಸಾಗಾಟದ ಹಿಂದೆ ದೊಡ್ಡ ಅಂತರರಾಷ್ಟ್ರೀಯ ಸ್ಮಗ್ಲಿಂಗ್ ಜಾಲ ಕೆಲಸ ಮಾಡುತ್ತಿರುವ ಶಂಕೆ ಇದ್ದು, ಈ ಗಾಂಜಾ ಮುಂಬೈನಲ್ಲಿ ಯಾರಿಗೆ ತಲುಪಬೇಕಿತ್ತು ಎಂಬ ಬಗ್ಗೆ ಆಳವಾದ ತನಿಖೆ ಮುಂದುವರಿದಿದೆ. ಸದ್ಯ ಆರೋಪಿಯ ಕಾಲ್ ಡಿಟೇಲ್ಸ್ (CDR) ಹಾಗೂ ಸಂಪರ್ಕ ಜಾಲದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

Read More
Next Story