
Bangalore Crime| ಮಗಳನ್ನು ಉಸಿರುಗಟ್ಟಿಸಿ ಕೊಂದು ತಾಯಿಯೂ ಆತ್ಮಹತ್ಯೆ
ಸುವರ್ಣ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕಾಗಿ ಇಂತಹ ತೀವ್ರ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದು, ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಸುವರ್ಣ (45) ಮತ್ತು ಅವರ ಪುತ್ರಿ ಕಾರುಣ್ಯ (13) ಎಂದು ಗುರುತಿಸಲಾಗಿದೆ. ಸುವರ್ಣ ಅವರು ತಮ್ಮ ಮಗಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ತಾವೂ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಸುವರ್ಣ ಅವರ ಪತಿ ಚಂದ್ರಶೇಖರ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ಪತ್ನಿಗೆ ಸತತವಾಗಿ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಚಂದ್ರಶೇಖರ್, ಕೂಡಲೇ ತಮ್ಮ ಸಹೋದರನಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಹೋದರ ಮನೆಗೆ ತೆರಳಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗಳು ಶವವಾಗಿ ಬಿದ್ದಿರುವುದನ್ನು ಕಂಡು ದಿಗ್ಭ್ರಮೆಗೊಂಡ ಆತ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಸುವರ್ಣ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕಾಗಿ ಇಂತಹ ತೀವ್ರ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ವೈಟ್‌ಫೀಲ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಕೊಲೆ ಮತ್ತು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
"ಘಟನಾ ಸ್ಥಳದ ಮಹಜರು ನಡೆಸಿದ್ದೇವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಇದೊಂದು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣವಾಗಿದೆ. ಕೊಲೆ ಹಾಗೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ," ಎಂದು ವೈಟ್‌ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

