ಮಕ್ಕಳ ಕಳ್ಳನೆಂಬ ವದಂತಿ: ಮತ್ತೆ ಅಮಾಯಕರು, ಮಾನಸಿಕ ಅಸ್ವಸ್ಥರ ಮೇಲೆ ಹಲ್ಲೆ!
x

ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಪ್ರದೇಶದಲ್ಲಿ ಅಪರಿಚಿತ ಯುವಕನೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು, ಆತ ಮಕ್ಕಳನ್ನು ಕದಿಯಲು ಬಂದಿದ್ದಾನೆ ಎಂದು ಶಂಕಿಸಿದ್ದಾರೆ

ಮಕ್ಕಳ ಕಳ್ಳನೆಂಬ ವದಂತಿ: ಮತ್ತೆ ಅಮಾಯಕರು, ಮಾನಸಿಕ ಅಸ್ವಸ್ಥರ ಮೇಲೆ ಹಲ್ಲೆ!

ಯಾವುದೇ ವಿಚಾರಣೆ ನಡೆಸದೆ, ಮಕ್ಕಳ ಕಳ್ಳನೆಂಬ ತಪ್ಪು ಗ್ರಹಿಕೆಯಿಂದ ಗುಂಪು ಸೇರಿ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.


Click the Play button to hear this message in audio format

ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಆಧಾರರಹಿತ ವದಂತಿಗಳು ಮತ್ತು ಸುಳ್ಳು ಸುದ್ದಿಗಳಿಗೆ ಕಿವಿಗೊಟ್ಟು ಅಮಾಯಕರು ಹಾಗೂ ಮಾನಸಿಕ ಅಸ್ವಸ್ಥರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸುವ ಅಮಾನವೀಯ ಘಟನೆಗಳು ರಾಜ್ಯದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾನಸಿಕ ಅಸ್ವಸ್ಥ ಯುವಕನೋರ್ವನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಹಿಗ್ಗಾಮುಗ್ಗಾ ಥಳಿಸಿದ ತಾಜಾ ಘಟನೆಯು, ಈ ಹಿಂದಿನ ಅನೇಕ ಕ್ರೂರ ಪ್ರಕರಣಗಳನ್ನು ಮತ್ತೆ ನೆನಪಿಸಿದೆ.

ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಪ್ರದೇಶದಲ್ಲಿ ಅಪರಿಚಿತ ಯುವಕನೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು, ಆತ ಮಕ್ಕಳನ್ನು ಕದಿಯಲು ಬಂದಿದ್ದಾನೆ ಎಂದು ಶಂಕಿಸಿದ್ದಾರೆ. ಯಾವುದೇ ವಿಚಾರಣೆ ನಡೆಸದೆ, ಮಕ್ಕಳ ಕಳ್ಳನೆಂಬ ತಪ್ಪು ಗ್ರಹಿಕೆಯಿಂದ ಗುಂಪು ಸೇರಿ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯಗಳನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಘಟನೆಯ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಹೊನ್ನಾಳಿ ಠಾಣೆ ಪೊಲೀಸರು, ಉದ್ರಿಕ್ತ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಯುವಕನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ವಿಚಾರಣೆ ಹಾಗೂ ವೈದ್ಯಕೀಯ ತಪಾಸಣೆಯ ವೇಳೆ ಆ ಯುವಕ ಮಾನಸಿಕ ಅಸ್ವಸ್ಥ ಎಂಬುದು ದೃಢಪಟ್ಟಿದೆ. ಆತನಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಹೊನ್ನಾಳಿ ಪೊಲೀಸರು ಈ ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದಿತ್ತು ಅಮಾಯಕನ ಬರ್ಬರ ಹತ್ಯೆ

ಮಕ್ಕಳ ಕಳ್ಳನೆಂಬ ಶಂಕೆಯು ಅಮಾಯಕನೊಬ್ಬನ ಪ್ರಾಣವನ್ನೇ ಬಲಿಪಡೆದ ಕರಾಳ ಇತಿಹಾಸ ರಾಜಧಾನಿ ಬೆಂಗಳೂರಿಗಿದೆ. 2018ರ ಮೇ ತಿಂಗಳಲ್ಲಿ ಚಾಮರಾಜಪೇಟೆಯಲ್ಲಿ ರಾಜಸ್ಥಾನ ಮೂಲದ ಕಾಲುರಾಮ್ (26) ಎಂಬಾತನನ್ನು ಮಕ್ಕಳ ಕಳ್ಳನೆಂದು ಭಾವಿಸಿದ ಗುಂಪೊಂದು ನಡುರಸ್ತೆಯಲ್ಲಿಯೇ ಅಮಾನವೀಯವಾಗಿ ಥಳಿಸಿ, ಎಳೆದಾಡಿ ಕೊಲೆ ಮಾಡಿತ್ತು. ಈ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು ಮತ್ತು ಈ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿದಂತೆ 14 ಜನರನ್ನು ಪೊಲೀಸರು ಬಂಧಿಸಿದ್ದರು.

ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಇಂತಹ ತಪ್ಪು ಗ್ರಹಿಕೆಯ ಹಲ್ಲೆಗಳು ವರದಿಯಾಗುತ್ತಲೇ ಇವೆ:

ಬೆಳಗಾವಿಯ ಮಾಳಮಾರುತಿಯ ಬಸವನಕುಡಚಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಯುವಕನೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿದ ದಾರುಣ ಘಟನೆ ಹಿಂದೆ ನಡೆದಿತ್ತು. ಕಲಬುರಗಿಯ ಜೇವರ್ಗಿ ತಾಲೂಕಿನ ಜೇರಟಗಿಯಲ್ಲಿ ಸೀತಮ್ಮ ಹುಲಿಗೆಪ್ಪ ಎಂಬ ಜೋಗತಿಯನ್ನು ಮಕ್ಕಳ ಕಳ್ಳಿ ಎಂದು ಶಂಕಿಸಿ ಗ್ರಾಮಸ್ಥರು ಮನಬಂದಂತೆ ಥಳಿಸಿದ್ದರು. ಇದೇ ಜಿಲ್ಲೆಯ ಹೀರಾಪುರದಲ್ಲಿ ಮೈಮೇಲೆ ಸರಿಯಾಗಿ ಬಟ್ಟೆಯೂ ಇರದಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಕಂಬಕ್ಕೆ ಕಟ್ಟಿ ಹೊಡೆಯಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ವಿಜಯಪುರ ಮತ್ತು ಬಾಗಲಕೋಟೆಯ ಹೂವಿನಹಿಪ್ಪರಗಿ, ದೇವರಹಿಪ್ಪರಗಿ, ಮತ್ತು ಬಸವನಬಾಗೇವಾಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಮಕ್ಕಳ ಕಳ್ಳರೆಂಬ ವದಂತಿಗೆ ಅಮಾಯಕರು ಏಟು ತಿಂದಿದ್ದರು. ವಿಜಯಪುರದಲ್ಲಿ ನಾಲ್ವರು ಅಮಾಯಕರ ಮೇಲೆ ಗುಂಪು ಹಲ್ಲೆ ನಡೆಸಿತ್ತು. ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಯುವತಿಯೊಂದಿಗೆ ಹೋಗಿದ್ದ ತನ್ನ ಮಗನನ್ನು ಹುಡುಕಿಕೊಂಡು ಬಳ್ಳಾರಿಗೆ ಬಂದಿದ್ದ ತಾಯಿ ಮತ್ತು ಸಂಬಂಧಿಕರನ್ನೇ ಮಕ್ಕಳ ಕಳ್ಳರೆಂದು ಭಾವಿಸಿ ಸಾರ್ವಜನಿಕರು ತೀವ್ರವಾಗಿ ಥಳಿಸಿದ್ದರು. ಮಂಗಳೂರಿನ ಗುರುಕಂಬಳ ಎಂಬಲ್ಲಿ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಮಕ್ಕಳ ಕಳ್ಳರೆಂದು ಶಂಕಿಸಿ, ಓರ್ವನನ್ನು ದೂರವಾಣಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಲಾಗಿತ್ತು.

ಸಾಮಾಜಿಕ ಜಾಲತಾಣಗಳ ದುರ್ಬಳಕೆ

ಬಹುಪಾಲು ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (ವಿಶೇಷವಾಗಿ ವಾಟ್ಸ್​​ಆ್ಯಪ್​ ) ಹರಿದಾಡುವ ಸುಳ್ಳು ಸಂದೇಶಗಳು, ಹಳೆಯ ವಿಡಿಯೋಗಳು ಅಥವಾ ಬೇರೆ ರಾಜ್ಯದ ವಿಡಿಯೋಗಳನ್ನು ಸ್ಥಳೀಯ ಘಟನೆಗಳೆಂದು ಬಿಂಬಿಸಿ ಹರಡುವುದೇ ಈ ರೀತಿಯ ಗುಂಪು ಹಲ್ಲೆಗಳಿಗೆ ಪ್ರಮುಖ ಕಾರಣವಾಗಿದೆ. ಅಪರಿಚಿತರು, ಭಿಕ್ಷುಕರು, ಅಲೆಮಾರಿಗಳು ಮತ್ತು ಮುಖ್ಯವಾಗಿ ಮಾನಸಿಕ ಅಸ್ವಸ್ಥರು ಈ ವದಂತಿಗಳ ಮೊದಲ ಬಲಿಯಾಗುತ್ತಿದ್ದಾರೆ.

ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದೆ, ತಕ್ಷಣ ಸ್ಥಳೀಯ ಪೊಲೀಸರಿಗೆ ಅಥವಾ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ, ಇಂತಹ ಗುಂಪು ಹಲ್ಲೆಗಳು ನಿಲ್ಲದಿರುವುದು ಕಳವಳಕಾರಿ

Read More
Next Story