Digital Arrest| ಡಿಜಿಟಲ್ ಅರೆಸ್ಟ್ ಹೆಸರಲ್ಲಿ 2.07 ಕೋಟಿ ರೂ. ದೋಚಿದ ಖದೀಮರು!
x

Digital Arrest| 'ಡಿಜಿಟಲ್ ಅರೆಸ್ಟ್' ಹೆಸರಲ್ಲಿ 2.07 ಕೋಟಿ ರೂ. ದೋಚಿದ ಖದೀಮರು!

'ನೀವು ದೊಡ್ಡ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ್ದೀರಿ, ನಿಮ್ಮ ಹಣವೆಲ್ಲಾ ಅಕ್ರಮ ಚಟುವಟಿಕೆಯಿಂದ ಬಂದಿದೆಯೇ ಎಂದು ನಾವು ಪರಿಶೀಲಿಸಬೇಕು" ಎಂದು ವಂಚಕರು ನಂಬಿಸಿದ್ದಾರೆ.


ರಾಜ್ಯದಲ್ಲಿ ಸೈಬರ್ ಅಪರಾಧಗಳ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ವಂಚಕರು ಹೊಸ ತಂತ್ರಗಳ ಮೂಲಕ ಜನರನ್ನು ಬಲೆಗೆ ಬೀಳಿಸಿ,ಹಣ ದೋಚುತ್ತಿದ್ದಾರೆ.

ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿದ ವಂಚಕರು, 61 ವರ್ಷದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 2,07,04,600 ರೂ. ಹಣವನ್ನು ದೋಚಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಾರಿ ನಿರ್ದೇಶನಾಲಯದ (ED) ಹಿರಿಯ ಅಧಿಕಾರಿಗಳಂತೆ ನಟಿಸಿದ ವಂಚಕರು, ಸತತ 18 ದಿನಗಳ ಕಾಲ ವ್ಯಕ್ತಿಯನ್ನು ಮಾನಸಿಕವಾಗಿ ಬಂಧನದಲ್ಲಿಟ್ಟು ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಿದ್ದಾರೆ.

ವಂಚನೆಯ ಜಾಲ ಆರಂಭವಾಗಿದ್ದು ಹೀಗೆ...

ಮಾರ್ಚ್ 31ರಂದು ಸಂತ್ರಸ್ತ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತನೊಬ್ಬ, ತಾನು ‘ನ್ಯಾಷನಲ್ ಡೇಟಾ ಪ್ರೊಟೆಕ್ಷನ್ ಸೆಂಟರ್’ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದ.

"ಮುಂಬೈ ಮೂಲದ ವ್ಯಕ್ತಿಯೊಬ್ಬರು ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು, ಅಸಭ್ಯ ಫೋಟೋ ವಿಡಿಯೋ ಕಳುಹಿಸಲು ಹಾಗೂ ಡ್ರಗ್ ಟ್ರಾಫಿಕಿಂಗ್‌ಗೆ ಬಳಸುತ್ತಿದ್ದಾರೆ. ನಿಮ್ಮ ವಿರುದ್ಧ ಮುಂಬೈನ ಕೋಲಾಬಾ ಪೊಲೀಸ್ ಠಾಣೆಯಲ್ಲಿ 30ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿವೆ" ಎಂದು ಹೆದರಿಸಿದ್ದಾನೆ.

ಅಧಿಕಾರಿಗಳ ಸೋಗಿನಲ್ಲಿ ಬೆದರಿಕೆ

ಸರಣಿ ಕರೆಗಳ ಮೂಲಕ ವಂಚಕರು NIA ಮತ್ತು ED ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿದ್ದಾರೆ. "ನೀವು ದೊಡ್ಡ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ್ದೀರಿ, ನಿಮ್ಮ ಹಣವೆಲ್ಲಾ ಅಕ್ರಮ ಚಟುವಟಿಕೆಯಿಂದ ಬಂದಿದೆಯೇ ಎಂದು ನಾವು ಪರಿಶೀಲಿಸಬೇಕು" ಎಂದು ನಂಬಿಸಿದ್ದಾರೆ. ಸಂತ್ರಸ್ತನನ್ನು ಭಯಭೀತಗೊಳಿಸಲು ವಿಲಾಸ್ ರಾವ್ ಪಟೇಲ್ ಎಂಬ ಇಡಿ ಅಧಿಕಾರಿಯ ಹೆಸರನ್ನು ಬಳಸಿ ಬೆದರಿಕೆ ಹಾಕಲಾಗಿದೆ.

ಹಂತ ಹಂತವಾಗಿ 2 ಕೋಟಿ ವರ್ಗಾವಣೆ

ಪರಿಶೀಲನೆಯ ನಂತರ ಹಣವನ್ನು ವಾಪಸ್ ನೀಡುವುದಾಗಿ ಸುಳ್ಳು ಭರವಸೆ ನೀಡಿದ ಖದೀಮರು, ಪ್ರಕರಣದಿಂದ ಹೊರಬರಲು ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಏಪ್ರಿಲ್ 7ರಿಂದ ಏಪ್ರಿಲ್ 18ರ ಅವಧಿಯಲ್ಲಿ, ಸಂತ್ರಸ್ತರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ RTGS ಮೂಲಕ ಒಟ್ಟು 2,07,04,600 ರೂಪಾಯಿಗಳನ್ನು ವಂಚಕರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹಣ ನೀಡಿದ ನಂತರವೂ ವಂಚಕರ ಬೇಡಿಕೆ ಮುಂದುವರಿದಾಗ, ತಾನು ಮೋಸ ಹೋಗಿರುವುದು ವ್ಯಕ್ತಿಗೆ ಅರಿವಾಗಿದೆ.

ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ

ಯಾವುದೇ ತನಿಖಾ ಸಂಸ್ಥೆಗಳು (CBI, ED, NIA) ಫೋನ್ ಅಥವಾ ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ ಅಥವಾ 'ಡಿಜಿಟಲ್ ಅರೆಸ್ಟ್' ಮಾಡುವುದಿಲ್ಲ.

ಯಾವುದೇ ಅಧಿಕೃತ ತನಿಖೆಗೆ ಹಣದ ವರ್ಗಾವಣೆಯ ಅಗತ್ಯವಿರುವುದಿಲ್ಲ. ಅಪರಿಚಿತ ಕರೆಗಳಿಗೆ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ವಿವರಗಳನ್ನು ನೀಡಬೇಡಿ. ಇಂತಹ ಕರೆಗಳು ಬಂದಲ್ಲಿ ತಕ್ಷಣವೇ 1930 ಸೈಬರ್ ಕ್ರೈಂ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.ಈ ಬಗ್ಗೆ ಮಂಗಳೂರು ನಗರದ ಸೈಬರ್ ಆರ್ಥಿಕ ಮತ್ತು ಮಾದಕದ್ರವ್ಯ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Read More
Next Story