
Cooker Bomb Blast| ಮಂಗಳೂರು ಕುಕ್ಕರ್ ಬಾಂಬ್ ಉಗ್ರನಿಂದ ಕದ್ರಿ ದೇವಸ್ಥಾನ ಸ್ಫೋಟಕ್ಕೂ ಸಂಚು; 10 ವರ್ಷ ಕಠಿಣ ಶಿಕ್ಷೆ
2022ರ ನ.19ರಂದು ಮಂಗಳೂರಿನ ಜನನಿಬಿಡ ಪ್ರದೇಶವಾದ ನಾಗುರಿಯ ಬೈದರ್ಕಳ ಗರೋಡಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ಪ್ರೆಶರ್ ಕುಕ್ಕರ್ ಅನಿರೀಕ್ಷಿತವಾಗಿ ಭೀಕರ ಸ್ಫೋಟ ಸಂಭವಿಸಿತು.
ಕರಾವಳಿ ನಗರಿ ಮಂಗಳೂರನ್ನು ಬೆಚ್ಚಿಬೀಳಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು ಅಪರಾಧಿ ಮಹಮ್ಮದ್ ಶಾರಿಕ್‌ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತೀರ್ಥಹಳ್ಳಿ ಮೂಲದ ಮೊಹಮ್ಮದ್ ಶಾರಿಕ್ ಶಿಕ್ಷೆಗೊಳಗಾದ ಆರೋಪಿ. 2022ರ ನ.19ರಂದು ಸಂಜೆ ಸುಮಾರು 4.30ರ ಸಮಯದಲ್ಲಿ ಮಂಗಳೂರಿನ ಜನನಿಬಿಡ ಪ್ರದೇಶವಾದ ನಾಗುರಿಯ ಬೈದರ್ಕಳ ಗರೋಡಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾವೊಂದರಲ್ಲಿ ಪ್ರೆಶರ್ ಕುಕ್ಕರ್ ಅನಿರೀಕ್ಷಿತವಾಗಿ ಭೀಕರ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆಗೆ ಆಟೋದ ಚಾವಣಿ ಹಾರಿಹೋಗಿ ಬೆಂಕಿ ಹೊತ್ತಿಕೊಂಡಿತು. ಆರಂಭದಲ್ಲಿ ಇದು ಸಾಮಾನ್ಯ ಗ್ಯಾಸ್ ಸಿಲಿಂಡರ್ ಸ್ಫೋಟ ಅಥವಾ ಇಂಜಿನ್ ದೋಷ ಎಂದು ಭಾವಿಸಲಾಗಿತ್ತು. ಆದರೆ, ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಆಟೋದೊಳಗೆ ಸುಟ್ಟ ಗಾಯಗಳೊಂದಿಗೆ ಬಿದ್ದಿದ್ದ ಪ್ರಯಾಣಿಕನ ಬ್ಯಾಗ್‌ನಲ್ಲಿ ಪ್ರೆಶರ್ ಕುಕ್ಕರ್ ಮತ್ತು ವೈಯರ್ ಸಂವೇದಕಗಳು ಪತ್ತೆಯಾದಾಗ, ಇದು ಯೋಜಿತ ಭಯೋತ್ಪಾದನಾ ಕೃತ್ಯ ಎಂಬುದು ತಿಳಿಯಿತು.
ಆಟೋ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಶಾರಿಕ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಶಾರಿಕ್ ತನ್ನ ಬ್ಯಾಗ್‌ನಲ್ಲಿ ಐಇಡಿ ಅಳವಡಿಸಿದ್ದ ಕುಕ್ಕರ್ ಬಾಂಬ್ ಹೊತ್ತೊಯ್ಯುತ್ತಿದ್ದಾಗ, ಟೈಮರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬಾಂಬ್ ದಾರಿಯಲ್ಲೇ ಸ್ಫೋಟಗೊಂಡಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಕದ್ರಿ ಮಂಜುನಾಥ ದೇವಸ್ಥಾನದ ಸಂಚು
ಶಾರಿಕ್‌ನ ಗುರಿಯು ಮಂಗಳೂರಿನ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನವಾಗಿತ್ತು ಎಂಬುದು ತನಿಖೆಯ ವೇಳೆ ಬಯಲಾಗಿತ್ತು. ಸ್ಫೋಟ ನಡೆದ ದಿನ ದೇವಸ್ಥಾನದಲ್ಲಿ ಒಂದು ದೊಡ್ಡ ಸಮಾರಂಭ ನಡೆಯುತ್ತಿತ್ತು ಮತ್ತು ಸಾವಿರಾರು ಭಕ್ತರು ನೆರೆದಿದ್ದರು. ಅಲ್ಲಿ ಬಾಂಬ್ ಸ್ಫೋಟಿಸಿ ದೊಡ್ಡ ಮಟ್ಟದ ಪ್ರಾಣಹಾನಿ ಮತ್ತು ಕೋಮು ಸಂಘರ್ಷ ಉಂಟುಮಾಡುವುದು ಶಾರಿಕ್‌ನ ಮೂಲ ಉದ್ದೇಶವಾಗಿತ್ತು. ಒಂದು ವೇಳೆ ಬಾಂಬ್ ದೇವಸ್ಥಾನದ ಆವರಣದೊಳಗೆ ಸ್ಫೋಟಗೊಂಡಿದ್ದರೆ, ಅದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದುರಂತವಾಗುತ್ತಿತ್ತು.
ಪ್ರೇಮ್‌ರಾಜ್ ಎಂಬ ಮುಖವಾಡ
ಮೊಹಮ್ಮದ್ ಶಾರಿಕ್ ಕೇವಲ ಉಗ್ರನಾಗಿರದೆ, ಒಬ್ಬ ಕುತಂತ್ರ ಬುದ್ಧಿಯ ಸಂಚುಕೋರನಾಗಿದ್ದ. ತನ್ನ ಮುಸ್ಲಿಂ ಗುರುತನ್ನು ಮರೆಮಾಚಲು ಆತ ಹಿಂದೂ ಯುವಕನಂತೆ ನಟಿಸುತ್ತಿದ್ದ. ಹಾವೇರಿ ಮೂಲದ ಪ್ರೇಮ್‌ರಾಜ್ ಎಂಬ ಯುವಕನ ಆಧಾರ್ ಕಾರ್ಡ್ ಕದ್ದು, ಅದಕ್ಕೆ ತನ್ನ ಫೋಟೋ ಅಂಟಿಸಿ ನಕಲಿ ದಾಖಲೆ ಸೃಷ್ಟಿಸಿದ್ದ.
ಕೈಗೆ ಕೆಂಪು ದಾರ ಕಟ್ಟಿಕೊಂಡು, ಹಣೆಗೆ ತಿಲಕ ಇಟ್ಟುಕೊಂಡು ತಾನು ಹಿಂದೂ ಎಂದು ಬಿಂಬಿಸಿಕೊಳ್ಳುತ್ತಿದ್ದ. ಇದು ಸ್ಫೋಟದ ನಂತರ ತನಿಖಾ ಸಂಸ್ಥೆಗಳನ್ನು ದಾರಿ ತಪ್ಪಿಸಲು ಆತ ಹೂಡಿದ್ದ ಪ್ಲಾನ್ ಆಗಿತ್ತು. ಮೈಸೂರಿನ ಲೋಕನಾಯಕ ನಗರದಲ್ಲಿ ಬಾಡಿಗೆ ಮನೆ ಪಡೆದಿದ್ದ ಶಾರಿಕ್, ಅಲ್ಲಿಯೇ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿದ್ದ. ಆನ್‌ಲೈನ್ ಮೂಲಕ ವಿದೇಶಿ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದು ಬಾಂಬ್ ತಯಾರಿಸುವ ತರಬೇತಿ ಪಡೆದಿದ್ದ ಎಂಬುದು ಎನ್‌ಐಎ ತನಿಖೆಯಲ್ಲಿ ಸಾಬೀತಾಗಿದೆ.
ಉಗ್ರನ ಹಳೆಯ ಇತಿಹಾಸ
ಶಾರಿಕ್ ಈ ಹಿಂದೆಯೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ. 2020ರಲ್ಲಿ ಮಂಗಳೂರಿನ ಗೋಡೆಗಳ ಮೇಲೆ ‘ಲಷ್ಕರ್-ಇ-ತೊಯ್ಬಾ’ ಮತ್ತು ‘ತಾಲಿಬಾನ್’ ಪರವಾಗಿ ಉಗ್ರಗಾಮಿ ಬರಹಗಳನ್ನು ಬರೆದಿದ್ದಕ್ಕಾಗಿ ಈತನನ್ನು ಬಂಧಿಸಲಾಗಿತ್ತು. ಆದರೆ, ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಈತ ತಲೆಮರೆಸಿಕೊಂಡು ಮತ್ತಷ್ಟು ತೀವ್ರಗಾಮಿ ವಿಚಾರಗಳಿಗೆ ಮಾರುಹೋಗಿದ್ದ. ಐಸಿಸ್ ಸಿದ್ಧಾಂತದಿಂದ ಪ್ರೇರಿತನಾಗಿದ್ದ ಈತ ಡಾರ್ಕ್ ವೆಬ್ ಮೂಲಕ ಭಯೋತ್ಪಾದನಾ ನೆಟ್‌ವರ್ಕ್‌ನೊಂದಿಗೆ ಸಂಪರ್ಕದಲ್ಲಿದ್ದ.
ಎನ್‌ಐಎ ತನಿಖೆ ಹಾಗೂ ಚಾರ್ಜ್‌ಶೀಟ್
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಇದನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತು. ಎನ್‌ಐಎ ಅಧಿಕಾರಿಗಳು ಶಾರಿಕ್‌ನ ಇಂಚಿಂಚು ಮಾಹಿತಿ ಕಲೆಹಾಕಿದರು. ಶಾರಿಕ್‌ಗೆ ಆರ್ಥಿಕ ಸಹಾಯ ಮಾಡಿದ ಮಾಜ್ ಮುನೀರ್ ಮತ್ತು ಸೈಯದ್ ಯಾಸಿನ್ ಸೇರಿದಂತೆ 16 ಮಂದಿಯನ್ನು ಆರೋಪಿಗಳೆಂದು ಗುರುತಿಸಿ ಬಂಧಿಸಲಾಯಿತು. ಆತನ ಮೊಬೈಲ್ ಕರೆಗಳು, ಮೈಸೂರಿನ ಮನೆಯಲ್ಲಿದ್ದ ರಾಸಾಯನಿಕಗಳು ಮತ್ತು ನಕಲಿ ದಾಖಲೆಗಳನ್ನು ಪ್ರಮುಖ ಸಾಕ್ಷ್ಯಗಳಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಎನ್‌ಐಎ ಸಲ್ಲಿಸಿದ ಸುದೀರ್ಘ ಚಾರ್ಜ್‌ಶೀಟ್‌ನಲ್ಲಿ ಶಾರಿಕ್ ಹೇಗೆ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಎಂಬ ವಿವರಗಳಿದ್ದವು.
ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸುಮಾರು ಮೂರು ವರ್ಷಗಳ ಕಾಲ ವಿಚಾರಣೆ ನಡೆಯಿತು. ತನಿಖಾ ಸಂಸ್ಥೆಗಳು ಕಲೆಹಾಕಿದ್ದ ಭದ್ರವಾದ ಸಾಕ್ಷ್ಯಗಳ ಮುಂದೆ ತಪ್ಪಿಸಿಕೊಳ್ಳಲು ದಾರಿಯಿಲ್ಲದ ಶಾರಿಕ್, ಅಂತಿಮವಾಗಿ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ಮತ್ತು ಮಾಡಿದ ತಪ್ಪನ್ನು ಒಪ್ಪಿಕೊಂಡನು. ಯುಎಪಿಎ ಕಾಯ್ದೆಯಡಿ ಮತ್ತು ಸ್ಫೋಟಕ ಕಾಯ್ದೆಯಡಿ ಶಾರಿಕ್‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, 49 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ನ್ಯಾಯಾಲಯದಲ್ಲಿ ನಾಟಕೀಯ ಬೆಳವಣಿಗೆ
ಶಿಕ್ಷೆ ಪ್ರಕಟವಾದ ನಂತರ ಶಾರಿಕ್ ನ್ಯಾಯಾಧೀಶರ ಮುಂದೆ ಒಂದು ವಿಚಿತ್ರ ಮನವಿ ಮಾಡಿದ್ದನು. ʼನನಗೆ ಕಳೆದ ೩ ವರ್ಷಗಳಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲ, ಆರೋಗ್ಯ ಸರಿ ಇಲ್ಲ. ನನ್ನನ್ನು ಬೆಂಗಳೂರಿನ ಜೈಲಿನಿಂದ ಶಿವಮೊಗ್ಗ ಜೈಲಿಗೆ ವರ್ಗಾವಣೆ ಮಾಡಿʼ ಎಂದು ಕೇಳಿಕೊಂಡಿದ್ದನು. ಆದರೆ, ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಎಲ್ಲಾ ಕೈದಿಗಳು ಬೆಂಗಳೂರಿಗೆ ವರ್ಗಾವಣೆ ಬೇಕು ಎಂದು ಕೇಳುತ್ತಾರೆ, ನೀವೇಕೆ ಶಿವಮೊಗ್ಗ ಕೇಳುತ್ತಿದ್ದೀರಾ? ಜೈಲಿನಲ್ಲಿ ಎಲ್ಲರಿಗೂ ಇರುವ ಸೌಲಭ್ಯಗಳೇ ನಿಮಗೂ ಇರುತ್ತವೆ ಎಂದು ಹೇಳಿ ಆತನ ಮನವಿಯನ್ನು ತಿರಸ್ಕರಿಸಿದರು.

