
ಪತ್ನಿಯ ಕತ್ತು ಸೀಳಲು ಯತ್ನಿಸಿದ ಪತಿಗೆ ಸಾರ್ವಜನಿಕರಿಂದ ಧರ್ಮದೇಟು
ಬೆಂಗಳೂರು| ಪತ್ನಿಯ ಕತ್ತು ಸೀಳಲು ಯತ್ನಿಸಿದ ಪತಿಗೆ ಸಾರ್ವಜನಿಕರಿಂದ ಧರ್ಮದೇಟು
ಬೆಂಗಳೂರಿನ ನೆಲಮಂಗಲ ಸಮೀಪ ಪತ್ನಿಯ ಕತ್ತು ಸೀಳಲು ಯತ್ನಿಸಿದ ಪತಿಯನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೌಟುಂಬಿಕ ಕಲಹವೇ ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ.
ಸಂಸಾರಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಮಹಿಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಸಮೀಪದ ದಾಸನಪುರದಲ್ಲಿ ಹಾಡಹಗಲೇ ನಡೆದಿದೆ.
ಬಿಹಾರ ಮೂಲದ ಸಂಜಯ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಈತ ಬುಧವಾರ ಮಧ್ಯಾಹ್ನ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದು, ಮನೆಯಿಂದ ಹೊರಬರುತ್ತಿದ್ದ ಪತ್ನಿ ಸೋನಾಲಿಯನ್ನು ಅಡ್ಡಗಟ್ಟಿದ್ದಾನೆ. ರಸ್ತೆಯಲ್ಲೇ ಆಕೆಯನ್ನು ಎಳೆದಾಡಿ ಚಾಕುವಿನಿಂದ ಕತ್ತು ಸೀಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಸೋನಾಲಿಯ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಮತ್ತು ದಾರಿಹೋಕರು ಕೂಡಲೇ ಆರೋಪಿಯನ್ನು ಹಿಡಿದು ಗದರಿಸಿದ್ದಾರೆ.
ಆರೋಪಿ ಸಂಜಯ್‌ನನ್ನು ಹಿಡಿದು ಸರಿಯಾಗಿ ಥಳಿಸಿದ ಸ್ಥಳೀಯರು, ಆತನ ಹಿಡಿತದಿಂದ ಸೋನಾಲಿಯನ್ನು ರಕ್ಷಿಸಿದ್ದಾರೆ. ಇಬ್ಬರೂ ಎರಡನೇ ಮದುವೆಯಾಗಿದ್ದು ಜೀವನ ನಡೆಸಲು ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಆದರೆ ಸಂಜಯ್‌ನ ಕುಡಿತದ ಚಟದಿಂದಾಗಿ ದಂಪತಿಗಳ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತ ಸೋನಾಲಾ ತನ್ನ ಪತಿಯಿಂದ ದೂರವಿರಲು ನಿರ್ಧರಿಸಿದ್ದಳು. ಇದೇ ದ್ವೇಷದಲ್ಲಿ ಸಂಜಯ್ ಈ ಹತ್ಯೆ ಯತ್ನ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಈ ಸಂಬಂಧ ಪೊಲೀಸ್ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

