ಪೋಷಕರೊಂದಿಗೆ ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರು ಬಾಲಕನ ಎಳೆದೋಯ್ದು ಕೊಂದ ಚಿರತೆ
x
ಚಿರತೆ

ಪೋಷಕರೊಂದಿಗೆ ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದ ಬೆಂಗಳೂರು ಬಾಲಕನ ಎಳೆದೋಯ್ದು ಕೊಂದ ಚಿರತೆ

ಕುಟುಂಬಸ್ಥರ ಕಣ್ಣೆದುರೇ ಚಿರತೆಯು ಬಾಲಕನನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಪೋಷಕರ ಆರ್ತನಾದ ಮತ್ತು ಕಿರುಚಾಟದ ನಡುವೆಯೂ ಚಿರತೆ ಬಾಲಕನನ್ನು ಹಿಡಿದು ದಟ್ಟ ಕಾಡಿನೊಳಗೆ ಮಾಯವಾಗಿದೆ.


ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದೆ. ಭಾನುವಾರ ಮಾದಪ್ಪನ ದರ್ಶನಕ್ಕಾಗಿ ಪೋಷಕರ ಜತೆ ತೆರಳುತ್ತಿದ್ದ 8 ವರ್ಷದ ಬಾಲಕನನ್ನು ಚಿರತೆಯೊಂದು ಹೊತ್ತೊಯ್ದ ಘಟನೆ ನಡೆದಿದೆ. ಇದು ನಾಗಮಲೆಗೆ ಪಾದಯಾತ್ರೆ ಕೈಗೊಳ್ಳುವ ಭಕ್ತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬೆಂಗಳೂರು ಮೂಲದ ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಕೈಗೊಂಡಿದ್ದ ಸಂದರ್ಭದಲ್ಲಿ ಈ ಘೋರ ದುರಂತ ಸಂಭವಿಸಿದೆ.

ಘಟನೆ ನಡೆದಿದ್ದೇಗೆ?

ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಹರ್ಷಿತ್ ಮತ್ತು ಆತನ ಕುಟುಂಬಸ್ಥರು ದಟ್ಟ ಅರಣ್ಯದ ನಡುವೆ ಇರುವ ನಾಗಮಲೆ ಹಾದಿಯಲ್ಲಿ ಸಾಗುತ್ತಿದ್ದರು. ಪೋಷಕರ ಜೊತೆಯಲ್ಲೇ ನಡೆಯುತ್ತಿದ್ದ ಬಾಲಕನ ಮೇಲೆ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಚಿರತೆ ಮಿಂಚಿನ ವೇಗದಲ್ಲಿ ದಾಳಿ ಮಾಡಿದೆ. ಕುಟುಂಬಸ್ಥರ ಕಣ್ಣೆದುರೇ ಚಿರತೆಯು ಬಾಲಕನನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಪೋಷಕರ ಆರ್ತನಾದ ಮತ್ತು ಕಿರುಚಾಟದ ನಡುವೆಯೂ ಚಿರತೆ ಬಾಲಕನನ್ನು ಹಿಡಿದು ದಟ್ಟ ಕಾಡಿನೊಳಗೆ ಮಾಯವಾಗಿದೆ.

ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ಕಾಡಿನ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಚಿರತೆಯು ಬಾಲಕನ ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಕಂಡುಬಂದಿದೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಕಾಡಂಚಿನ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಮಿತಿಮೀರಿದೆ. ಜನವರಿ 21 ರಂದು ಮಂಡ್ಯ ಮೂಲದ ಪ್ರವೀಣ್ ಎಂಬ ಭಕ್ತ ತಾಳುಬೆಟ್ಟದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದರು. ಫೆಬ್ರವರಿಯಲ್ಲಿ ಚನ್ನಪಟ್ಟಣದ ಶ್ರೇಯಸ್ ಎಂಬ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದ. ಈಗ ಹರ್ಷಿತ್ ಬಲಿಯಾಗಿರುವುದು ಅರಣ್ಯ ಇಲಾಖೆಯ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

"ಅರಣ್ಯ ಇಲಾಖೆಯು ಕೇವಲ ಚಿರತೆ ಕಾರ್ಯಪಡೆ ರಚನೆ ಮಾಡಿದೆ. ಆದರೆ, ಭಕ್ತರ ಪ್ರಾಣಕ್ಕೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಪದೇ ಪದೇ ದಾಳಿ ನಡೆಯುತ್ತಿದ್ದರೂ ನರಭಕ್ಷಕ ಚಿರತೆ ಹಿಡಿಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ," ಎಂದು ಸ್ಥಳೀಯ ನಿವಾಸಿಗಳು ಹಾಗೂ ಭಕ್ತರು ಆರೋಪಿಸಿದ್ದಾರೆ.

ಸದ್ಯಕ್ಕೆ ನಾಗಮಲೆ ಹಾದಿಯಲ್ಲಿ ಪಾದಯಾತ್ರೆ ಮಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಮುಂಜಾನೆ ಮತ್ತು ಸಂಜೆ ವೇಳೆ ಕಾಡಿನ ಹಾದಿಯಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ. ನರಭಕ್ಷಕ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ತೀವ್ರಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅರಣ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿ ನರಭಕ್ಷಕ ಚಿರತೆ ಸೆರೆಹಿಡಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಜೀವಗಳು ಬಲಿಯಾಗುವ ಭೀತಿ ಎದುರಾಗಿದೆ.

Read More
Next Story