
ಅಮರಾವತಿಯಲ್ಲಿ 180 ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಮೊಹಮ್ಮದ್ ಅಯಾಜ್ ಅಕ್ರಮ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆದಿದೆ.
Sexual Harassment |ಬಾಲಕಿಯರ ಮೇಲೆ ಅತ್ಯಾಚಾರ... ವಿಡಿಯೊ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್- ಆರೋಪಿ ಮನೆ ಧ್ವಂಸ!
ಅಮರಾವತಿಯಲ್ಲಿ 180 ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಮೊಹಮ್ಮದ್ ಅಯಾಜ್ ಅಕ್ರಮ ಮನೆ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆದಿದೆ.
ಸುಮಾರು 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂಬಾತನ ಅಕ್ರಮ ಮನೆಗೆ ಜಿಲ್ಲಾಡಳಿತವು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಿದೆ.
ಪರತವಾಡ ನಗರದಲ್ಲಿರುವ ಈತನ ನಿವಾಸದ ಹೊರಗಿದ್ದ ಅಕ್ರಮ ಮೆಟ್ಟಿಲುಗಳು ಮತ್ತು ಅನಧಿಕೃತವಾಗಿ ನಿರ್ಮಿಸಲಾಗಿದ್ದ ಮುಂಭಾಗದ ಭಾಗಗಳನ್ನು ಅಚಲ್ಪುರ ನಗರಸಭೆಯ ಅಧಿಕಾರಿಗಳು ಜೆಸಿಬಿ ಮೂಲಕ ನೆಲಸಮಗೊಳಿಸಿದ್ದಾರೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು ಮತ್ತು ಬಿಜೆಪಿ ಶಾಸಕ ಪ್ರವೀಣ್ ತಯಾಡೆ ಸ್ಥಳದಲ್ಲಿದ್ದು ಆಡಳಿತದ ಕ್ರಮವನ್ನು ಪರಿಶೀಲಿಸಿದರು.
ಏನಿದು ಪ್ರಕರಣ?
19 ವರ್ಷದ ಮೊಹಮ್ಮದ್ ಅಯಾಜ್ ಬಾಲಕಿಯರನ್ನು ಪ್ರೇಮಪಾಶಕ್ಕೆ ಸಿಲುಕಿಸಿ ಮುಂಬೈ ಮತ್ತು ಪುಣೆಯಂತಹ ನಗರಗಳಿಗೆ ಕರೆದೊಯ್ಯುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲಿ ಅವರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿ, ನಂತರ ಅವುಗಳನ್ನು ಬಳಸಿ ಬಾಲಕಿಯರನ್ನು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಎನ್ನಲಾಗಿದೆ. ಆರೋಪಿಯ ಈ ಕೃತ್ಯಗಳ ಕೆಲವು ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಏಪ್ರಿಲ್ 11 ರಂದು ಈತನನ್ನು ಬಂಧಿಸಿದ್ದರು.
ರಾಜಕೀಯ ನಂಟು
ಆರೋಪಿ ಮೊಹಮ್ಮದ್ ಅಯಾಜ್ ಈ ಹಿಂದೆ AIMIM ಪಕ್ಷದ ಪದಾಧಿಕಾರಿಯಾಗಿದ್ದ ಎಂದು ತಿಳಿದುಬಂದಿದೆ. ಆತ ಪಕ್ಷದ ರ್‍ಯಾಲಿಗಳಲ್ಲಿ ಭಾಗವಹಿಸಿದ ಮತ್ತು ಪದಾಧಿಕಾರಿಯಾಗಿ ನೇಮಕಗೊಂಡ ಪತ್ರವನ್ನು ಸ್ವೀಕರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆತ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಲವು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ.
ರಾಜ್ಯಸಭಾ ಸಂಸದ ಅನಿಲ್ ಬೋಂಡೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಆನಂದ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಆರೋಪಿಯು ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಗ್ರೂಪ್‌ಗಳ ಮೂಲಕ ಯೋಜಿತವಾಗಿ ಅಪ್ರಾಪ್ತರನ್ನು ಗುರಿಯಾಗಿಸುತ್ತಿದ್ದ ಎಂಬ ಆಘಾತಕಾರಿ ವಿಷಯವನ್ನು ಉಲ್ಲೇಖಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಹೆಚ್ಚಿನ ಸಾಕ್ಷ್ಯಗಳಿಗಾಗಿ ತಾಂತ್ರಿಕ ವಿಶ್ಲೇಷಣೆ ನಡೆಸುತ್ತಿದ್ದಾರೆ. ಅಕ್ರಮ ಒತ್ತುವರಿ ಕುರಿತು ನಗರಸಭೆಯು ಈಗಾಗಲೇ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಈ ತೆರವು ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ನೂರಾರು ಆಕ್ಷೇಪಾರ್ಹ ವಿಡಿಯೋಗಳು ಪತ್ತೆಯಾಗಿವೆ. ಈ ವಿಡಿಯೋಗಳನ್ನು ಆತ ತನ್ನ ಸ್ನೇಹಿತರಿಗೆ ಅಥವಾ ಯಾವುದಾದರೂ ಕ್ರಿಮಿನಲ್ ಸಿಂಡಿಕೇಟ್‌ಗೆ ಹಂಚಿಕೊಂಡಿದ್ದಾನೆಯೇ ಎಂಬ ಬಗ್ಗೆ ಸೈಬರ್ ಸೆಲ್ ಸಹಾಯದೊಂದಿಗೆ ತನಿಖೆ ನಡೆಸಲಾಗುತ್ತಿದೆ.

