
ಲಕ್ನೋದಲ್ಲಿ ಮಗಳ ಪ್ರೇಮ ಸಂಬಂಧದಿಂದ ಕೆರಳಿದ ತಂದೆ, ಗೆಳೆಯನೊಂದಿಗೆ ಸೇರಿ ಮಗಳನ್ನೇ ಕೊಂದಿದ್ದಾನೆ.
Honor Killing| ಪ್ರೇಮಕ್ಕೆ ಆಕ್ಷೇಪ; ಕತ್ತು ಹಿಸುಕಿ, ಮುಖಕ್ಕೆ ಆಸಿಡ್ ಸುರಿದು ಮಗಳ ಕೊಂದ ಅಪ್ಪ
ಲಕ್ನೋದಲ್ಲಿ ಮಗಳ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ, ತಂದೆಯೇ ತನ್ನ ಮಗಳನ್ನು ಕ್ರೂರವಾಗಿ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಮುಖಕ್ಕೆ ಆಸಿಡ್ ಸುರಿದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸಮಾಜದ ಕಣ್ಣಲ್ಲಿ ಗೌರವ ಕಳೆದುಕೊಂಡೆ ಎಂಬ ಮಿಥ್ಯೆ ಪ್ರತಿಷ್ಠೆಗಾಗಿ ಹೆತ್ತ ತಂದೆಯೇ ತನ್ನ 16 ವರ್ಷದ ಮಗಳನ್ನು ಅತಿ ಅಮಾನುಷವಾಗಿ ಕತ್ತು ಹಿಸುಕಿ, ಗುರುತು ಸಿಗದಂತೆ ಮುಖಕ್ಕೆ ಆಸಿಡ್ ಸುರಿದು ಬರ್ಬರವಾಗಿ ಹತ್ಯೆಗೈದ ಬೆಚ್ಚಿಬೀಳಿಸುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಲಕ್ನೋದ ನಿವಾಸಿ ವಿಜಯ್ ಕುಮಾರ್ ಚೌಬೆ ಹಾಗೂ ಆತನಿಗೆ ಸಾಥ್ ನೀಡಿದ ಗೆಳೆಯ ಅಬ್ದುಲ್ ಮನ್ನಾನ್ ಎಂಬುವವರೇ ಈ ಪೈಶಾಚಿಕ ಕೃತ್ಯವೆಸಗಿದ ಆರೋಪಿಗಳಾಗಿದ್ದು, ಸದ್ಯ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ.
ಪ್ರೀತಿಯೇ ಮುಳುವಾಯ್ತು
ವಿಶ್ವವಿದ್ಯಾಲಯವೊಂದರಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಚೌಬೆಯ 16 ವರ್ಷದ ಪುತ್ರಿ ವಂದನಾ ಚೌಬೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ತನ್ನ ಪ್ರಿಯತಮನೊಂದಿಗೆ ಓಡಿಹೋಗಿದ್ದಳು. ಆ ಬಳಿಕ ಬಾಲಕಿಯನ್ನು ಪತ್ತೆಹಚ್ಚಿ ಮನೆಗೆ ಕರೆತಂದಿದ್ದಲ್ಲದೆ, ಆಕೆಯ ಪ್ರಿಯತಮನನ್ನು ಮೂರು ತಿಂಗಳ ಕಾಲ ಜೈಲಿಗೆ ಕಳುಹಿಸಲಾಗಿತ್ತು. ಆದರೆ, ನವೆಂಬರ್ ತಿಂಗಳಲ್ಲಿ ಆತ ಜೈಲಿನಿಂದ ಬಿಡುಗಡೆಯಾದ ಬಳಿಕವೂ ವಂದನಾ ಆತನೊಂದಿಗೆ ತನ್ನ ಸಂಪರ್ಕವನ್ನು ಮುಂದುವರಿಸಿದ್ದಳು. ಮಗಳ ಈ ನಡೆಯಿಂದ ಸಮಾಜದಲ್ಲಿ ತಾನು ತಲೆ ತಗ್ಗಿಸುವಂತಾಗಿದೆ ಎಂದು ಭಾವಿಸಿದ ತಂದೆ ವಿಜಯ್ ಕುಮಾರ್, ಅವಮಾನ ತಾಳಲಾರದೆ ಹಲವು ಬಾರಿ ಬಾಡಿಗೆ ಮನೆಗಳನ್ನು ಬದಲಾಯಿಸಿದ್ದ. ಎಷ್ಟೇ ಬುದ್ಧಿವಾದ ಹೇಳಿದರೂ ಮಗಳು ತನ್ನ ಪ್ರೇಮ ಸಂಬಂಧವನ್ನು ಕಡಿದುಕೊಳ್ಳಲು ನಿರಾಕರಿಸಿದಾಗ, ಆಕೆಯನ್ನೇ ಮುಗಿಸಿಬಿಡುವ ಕ್ರೂರ ನಿರ್ಧಾರಕ್ಕೆ ಬಂದಿದ್ದನು.
ದೈವಿಕ ಚಿಕಿತ್ಸೆಯ ನೆಪದಲ್ಲಿ ಭೀಕರ ಹತ್ಯೆ
ಮಗಳನ್ನು ಕೊಲ್ಲಲು ಸಂಚು ರೂಪಿಸಿದ ವಿಜಯ್ ಕುಮಾರ್, ಏಪ್ರಿಲ್ 13 ರಂದು ಆಕೆಗೆ ಮಾಟಮಂತ್ರ ಬಿಡಿಸುವ ಅಥವಾ ದೈವಿಕ ಚಿಕಿತ್ಸೆ ಕೊಡಿಸುವ ನೆಪವೊಡ್ಡಿ ತನ್ನ ಗೆಳೆಯ ಅಬ್ದುಲ್ ಮನ್ನಾನ್ ಜೊತೆಗೆ ಬಾಡಿಗೆ ಕಾರಿನಲ್ಲಿ ರಾಜಸ್ಥಾನದತ್ತ ಕರೆದೊಯ್ದಿದ್ದ. ಪ್ರಯಾಣದ ಆಯಾಸದಿಂದ ಮಗಳು ಕಾರಿನಲ್ಲೇ ಗಾಢ ನಿದ್ರೆಗೆ ಜಾರಿದ್ದ ವೇಳೆ ಪಾಪಿ ತಂದೆ, ದಾರಿ ಮಧ್ಯೆ ಬಾರಾಬಂಕಿ ಬಳಿಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಮಗಳ ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಕೃತ್ಯ ಎಸಗಿದ ಬಳಿಕ ಶವದ ಗುರುತು ಸಿಗಬಾರದು ಎಂಬ ದುರುದ್ದೇಶದಿಂದ ಆಕೆಯ ಮುಖದ ಮೇಲೆ ಆಸಿಡ್ ಸುರಿದು, ಹಸದಿನ ಎಂಬಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದರು.
ನಾಪತ್ತೆ ನಾಟಕ
ಸಾಕ್ಷ್ಯವಿಲ್ಲದೆ ಕೊಲೆ ಮಾಡಿಬಿಟ್ಟೆ ಎಂದು ಬೀಗುತ್ತಿದ್ದ ವಿಜಯ್ ಕುಮಾರ್, ತನ್ನ ಮೇಲೆಯೇ ಯಾರಿಗೂ ಅನುಮಾನ ಬಾರದಿರಲಿ ಎಂದು ಏಪ್ರಿಲ್ 16 ರಂದು ಐಜಿಆರ್‌ಎಸ್ (IGRS) ಪೋರ್ಟಲ್ ಮೂಲಕ ತನ್ನ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸುವ ನಾಟಕವಾಡಿದ್ದ. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಮೊದಲಿನಿಂದಲೂ ತಂದೆಯ ನಡವಳಿಕೆಗಳ ಮೇಲೆ ತೀವ್ರ ಅನುಮಾನ ಕಾಡತೊಡಗಿತ್ತು. ಈ ಹಿನ್ನೆಲೆಯಲ್ಲಿ ಆತನ ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದಾಗ ಆತನ ಬಣ್ಣ ಬಯಲಾಗಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಸಮಾಜದ ಪ್ರತಿಷ್ಠೆಗಾಗಿ ಮಗಳನ್ನು ತಾನೇ ಕೊಂದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಮುಂದಿನ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುತ್ತಿದ್ದಾರೆ.

