
ಮೃತ ಕೇತನ್ ಅಗರ್‌ವಾಲ್ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಪ್ರತಿಭಟನೆ ನಡೆಸಲಾಯಿತು
ಲೋಹಗಡ್ ಕೋಟೆ ಕೊಲೆ ಪ್ರಕರಣ: ಸ್ಥಳ ಮಹಜರು, ಮರ್ಡರ್ ರಿಹರ್ಸಲ್ ಬಹಿರಂಗ!
ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆರೋಪಿಗಳಿಬ್ಬರು ಕೊಲೆಗೆ ಮುನ್ನ ಮತ್ತು ಕೊಲೆಯ ನಂತರ ತಮ್ಮ ಮೊಬೈಲ್‌ನ ಸಂಪೂರ್ಣ ಚಾಟ್ ಹಿಸ್ಟರಿಯನ್ನು ಡಿಲೀಟ್ ಮಾಡಿದ್ದರು. ಅಷ್ಟೇ ಅಲ್ಲದೆ, ಫೋನ್‌ನ ರಿಸೈಕಲ್ ಬಿನ್ ಕೂಡ ಕ್ಲಿಯರ್ ಮಾಡಿದ್ದರು.
ಮಹಾರಾಷ್ಟ್ರದ ಪ್ರಸಿದ್ಧ ಲೋಹಗಡ್ ಕೋಟೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಭಾನುವಾರ (ಜೂ. 28) ಪೊಲೀಸರು ಪ್ರಮುಖ ಆರೋಪಿ ಸಿಯಾ ಗೋಯಲ್‌ಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಅಪರಾಧದ ದೃಶ್ಯ ಮರುಸೃಷ್ಟಿ ನಡೆಸಿದ್ದಾರೆ. ಜೂ. 18 ರಂದು ನಡೆದ ಭೀಕರ ಹತ್ಯೆಯ ಸಂಪೂರ್ಣ ಸರಣಿಯನ್ನು ಪತ್ತೆಹಚ್ಚಲು ಮತ್ತು ಆರೋಪಿಗಳ ಹೇಳಿಕೆಗಳನ್ನು ಪರಿಶೀಲಿಸಲು ಪುಣೆ ಗ್ರಾಮೀಣ ಪೊಲೀಸರು ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ.
ಪ್ರಿಯಕರನೊಂದಿಗೆ ಸೇರಿ ತಳ್ಳಿದ್ದ ಸಿಯಾ!
"ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಇಬ್ಬರೂ ಸೇರಿ ಕೇತನ್ ಅಗರ್ವಾಲ್‌ನನ್ನು ಕೋಟೆಯ ಮೇಲಿಂದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ. ಸಿಯಾಳನ್ನು ಈಗಾಗಲೇ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸಲಾಗಿದ್ದು, ಮತ್ತೊಬ್ಬ ಆರೋಪಿ ಚೇತನ್‌ನನ್ನು ಪ್ರತ್ಯೇಕವಾಗಿ ಕೋಟೆಗೆ ಕರೆತಂದು ಮಹಜರು ನಡೆಸಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳು ಕೋಟೆಗೆ ಹೇಗೆ ಬಂದರು, ತಳ್ಳಿದ ಜಾಗ ಯಾವುದು, ಮತ್ತು ಕೃತ್ಯದ ಸಮಯದಲ್ಲಿ ಅವರ ನಿಲುವುಗಳೇನಾಗಿದ್ದವು ಎಂಬುದನ್ನು ಪೊಲೀಸರು ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಕೊಲೆಗೆ ಮೊದಲೇ ನಡೆದಿತ್ತು 'ಮರ್ಡರ್ ರಿಹರ್ಸಲ್'!
ತನಿಖೆಯ ವೇಳೆ ಪೊಲೀಸರಿಗೆ ಮತ್ತೊಂದು ಆಘಾತಕಾರಿ ಸತ್ಯ ಲಭ್ಯವಾಗಿದೆ. ಸಿಯಾ ಮತ್ತು ಚೇತನ್ ಕೊಲೆ ಮಾಡುವುದು ಹೇಗೆ ಎಂದು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದ್ದರು. ಅಷ್ಟೇ ಅಲ್ಲದೆ, ಜೂ. 18 ರ ಘಟನೆಗೂ ಮುನ್ನ ಇಬ್ಬರೂ ಲೋಹಗಡ್ ಕೋಟೆಗೆ ಭೇಟಿ ನೀಡಿ ಕೊಲೆಯ 'ಪೂರ್ವಾಭ್ಯಾಸ' ನಡೆಸಿದ್ದರು! ಕೊಲೆಯ ನಂತರ ಪೊಲೀಸರು ಪ್ರಶ್ನಿಸಿದರೆ ಏನು ಉತ್ತರ ನೀಡಬೇಕು ಎಂಬುದನ್ನು ಕೂಡ ಇವರು ಮೊದಲೇ ಸಿದ್ಧಪಡಿಸಿದ್ದರು ಎನ್ನಲಾಗಿದೆ. ಗುರುತು ಸಿಗದಂತೆ ಇಬ್ಬರೂ ವೇಷ ಮರೆಸಿಕೊಳ್ಳಲು ಯತ್ನಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಚಾಟ್ ಹಿಸ್ಟರಿ ಡಿಲೀಟ್
ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆರೋಪಿಗಳಿಬ್ಬರು ಕೊಲೆಗೆ ಮುನ್ನ ಮತ್ತು ಕೊಲೆಯ ನಂತರ ತಮ್ಮ ಮೊಬೈಲ್‌ನ ಸಂಪೂರ್ಣ ಚಾಟ್ ಹಿಸ್ಟರಿಯನ್ನು ಡಿಲೀಟ್ ಮಾಡಿದ್ದರು. ಅಷ್ಟೇ ಅಲ್ಲದೆ, ಫೋನ್‌ನ ರಿಸೈಕಲ್ ಬಿನ್ ಕೂಡ ಕ್ಲಿಯರ್ ಮಾಡಿದ್ದರು. ಸದ್ಯ ಡಿಲೀಟ್ ಆಗಿರುವ ಡೇಟಾವನ್ನು ಮರುಪಡೆಯಲು ಇಬ್ಬರ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.
ಮದುವೆ ಇಷ್ಟವಿಲ್ಲದೆ ಹೆಣೆದರು ಮರಣದ ಸ್ಕೆಚ್!
ಅಗರ್ವಾಲ್ ಕುಟುಂಬಸ್ಥರ ಪ್ರಕಾರ, ಕೇತನ್ ಮತ್ತು ಸಿಯಾಗೆ ಮದುವೆ ನಿಶ್ಚಯವಾಗಿತ್ತು. ಆದರೆ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಮದುವೆ ನಿರಾಕರಿಸಿದರೆ ಕುಟುಂಬದ ಗೌರವಕ್ಕೆ ಧಕ್ಕೆ ಬರಬಹುದು ಎಂಬ ಆತಂಕದಿಂದ ಆಕೆ ತನ್ನ ಪ್ರಿಯಕರ ಚೇತನ್ ಜೊತೆ ಸೇರಿ ಕೇತನ್‌ನನ್ನು ಮುಗಿಸಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಕೇತನ್ ಕುಟುಂಬದ ಕಣ್ಣೀರು
ಶನಿವಾರ ಗಹುಂಜೆಯಲ್ಲಿರುವ ಕೇತನ್ ಅಗರ್ವಾಲ್ ಅವರ ವಸತಿ ಸಂಕೀರ್ಣದಲ್ಲಿ ಮೇಣದಬತ್ತಿ ಮೆರವಣಿಗೆ ನಡೆಸಿ ಸಂತಾಪ ಹಾಗೂ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಾತನಾಡಿದ ಕೇತನ್ ತಂದೆ ವಿಶಾಲ್ ಅಗರ್ವಾಲ್, "ಜೂನ್ 18 ರಂದು ಕೋಟೆಯಲ್ಲಿದ್ದ ಕೆಲವು ಪ್ರವಾಸಿಗರು ನಮಗೆ ಮೆಸೇಜ್ ಕಳುಹಿಸುತ್ತಿದ್ದಾರೆ, ಆದರೆ ಅವರು ಪೊಲೀಸರ ಮುಂದೆ ಬರುತ್ತಿಲ್ಲ. ದಯವಿಟ್ಟು ಮುಂದೆ ಬಂದು ಪೊಲೀಸರಿಗೆ ಸಾಕ್ಷಿ ನೀಡಿ, ನನ್ನ ಮಗನಿಗೆ ನ್ಯಾಯ ಕೊಡಿಸಲು ಸಹಾಯ ಮಾಡಿ. ನಿಮಗೆ ಯಾವುದೇ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ" ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

