ಭೀಕರ ತ್ರಿವಳಿ ಕೊಲೆ: ಪ್ರಿಯಕರನೊಂದಿಗೆ ಸೇರಿ ಮಗಳಿಂದ ತಂದೆ, ತಾಯಿ, ತಂಗಿಯ ಹತ್ಯೆ
x

ಭೀಕರ ತ್ರಿವಳಿ ಕೊಲೆ: ಪ್ರಿಯಕರನೊಂದಿಗೆ ಸೇರಿ ಮಗಳಿಂದ ತಂದೆ, ತಾಯಿ, ತಂಗಿಯ ಹತ್ಯೆ

ಆರೋಪಿಗಳಾದ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನೆತ್ ಕಳೆದ ಕೆಲವು ತಿಂಗಳುಗಳಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಈ ಸಂಬಂಧಕ್ಕೆ ಶ್ವೇತಳ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಅತ್ಯಂತ ಭೀಕರ ಹಾಗೂ ಹೃದಯ ವಿದ್ರಾವಕ ಘಟನೆಯೊಂದು ಬೆಚ್ಚಿಬೀಳಿಸಿದೆ. ಪ್ರೀತಿ ಮತ್ತು ಲಿವ್-ಇನ್ ರಿಲೇಷನ್‌ಶಿಪ್‌ನ ವಿಷಯದಲ್ಲಿ ಉಂಟಾದ ಕೌಟುಂಬಿಕ ಕಲಹವು, ಹೆತ್ತವರೇ ಮಗಳ ಕೈಯಿಂದ ಸಾವನ್ನಪ್ಪುವಂತಹ ಅಮಾನವೀಯ ಮಟ್ಟಕ್ಕೆ ತಲುಪಿದೆ. ಕೆ.ಆರ್. ಪುರಂ ವ್ಯಾಪ್ತಿಯ ಸಿಗೇಹಳ್ಳಿಯಲ್ಲಿ ಸೋಮಸುಂದರ್ (55), ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಅವರ ಕಿರಿಯ ಮಗಳು ಸುಪ್ರಿಯಾ (20) ಅವರನ್ನು ಅವರದೇ ಹಿರಿಯ ಮಗಳು ಹಾಗೂ ಆಕೆಯ ಪ್ರಿಯಕರ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದಾರೆ.

ಬೆಂಗಳೂರಿನ ಕೆ.ಆರ್. ಪುರಂ ಸಮೀಪದ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್‌ನಲ್ಲಿರುವ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಈ ತ್ರಿವಳಿ ಕೊಲೆ ನಡೆದಿದೆ. ಆರೋಪಿಗಳಾದ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನೆತ್ ಕಳೆದ ಕೆಲವು ತಿಂಗಳುಗಳಿಂದ ಮದುವೆಯಾಗದೇ ‘ಲಿವ್-ಇನ್ ರಿಲೇಷನ್‌ಶಿಪ್’ನಲ್ಲಿ ವಾಸಿಸುತ್ತಿದ್ದರು. ಈ ಸಂಬಂಧಕ್ಕೆ ಶ್ವೇತಾಳ ಪೋಷಕರಾದ ಸೋಮಸುಂದರ್ ಮತ್ತು ಮುತ್ತುಲಕ್ಷ್ಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳ ಭವಿಷ್ಯದ ದೃಷ್ಟಿಯಿಂದ ಈ ಸಂಬಂಧ ಸರಿಯಲ್ಲ ಎಂದು ಅವರು ಭಾವಿಸಿದ್ದರು. ಸೋಮವಾರ ರಾತ್ರಿ, ಮಗಳಿಗೆ ಬುದ್ಧಿವಾದ ಹೇಳಿ, ಆಕೆಯನ್ನು ಕರೆದುಕೊಂಡು ಹೋಗಲು ಸೋಮಸುಂದರ್ ಅವರು ತಮ್ಮ ಪತ್ನಿ ಮುತ್ತುಲಕ್ಷ್ಮಿ ಮತ್ತು ಕಿರಿಯ ಮಗಳು ಸುಪ್ರಿಯಾ ಅವರೊಂದಿಗೆ ಶ್ವೇತಾ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಅಲ್ಲಿ ಶುರುವಾದ ಮಾತುಕತೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸಂಬಂಧವನ್ನು ಮುರಿಯುವಂತೆ ಪೋಷಕರು ಒತ್ತಾಯಿಸಿದಾಗ, ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನೆತ್ ಇಬ್ಬರೂ ಸೇರಿ ತಮ್ಮ ಪೋಷಕರು ಹಾಗೂ ತಂಗಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ.

ಕ್ರೌರ್ಯದ ಪರಮಾವಧಿ

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ, ಇಬ್ಬರು ಆರೋಪಿಗಳು ಚಾಕು ಹಿಡಿದು ಸೋಮಸುಂದರ್, ಮುತ್ತುಲಕ್ಷ್ಮಿ ಮತ್ತು ಸುಪ್ರಿಯಾರ ಮೇಲೆ ಮನಸೋಇಚ್ಛೆ ಇರಿದಿದ್ದಾರೆ. ಅನಿರೀಕ್ಷಿತವಾಗಿ ನಡೆದ ಈ ದಾಳಿಯಿಂದ ಪೋಷಕರು ಮತ್ತು ತಂಗಿ ಪಾರಾಗಲು ಸಾಧ್ಯವಾಗಲಿಲ್ಲ. ತೀವ್ರ ರಕ್ತಸ್ರಾವದಿಂದ ಮುತ್ತುಲಕ್ಷ್ಮಿ ಮತ್ತು ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ಕೂಡ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ರಕ್ತದ ಮಡುವಿನಲ್ಲಿ ಕುಟುಂಬದ ಮೂವರ ಮೃತದೇಹಗಳನ್ನು ಬಿಟ್ಟು ಆರೋಪಿಗಳಾದ ಶ್ವೇತಾ ಮತ್ತು ಕೆನೆತ್ ಕೃತ್ಯ ನಡೆದ ಕೆಲವೇ ಹೊತ್ತಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೆ.ಆರ್. ಪುರಂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವೈಟ್‌ಫೀಲ್ಡ್ ಡಿಸಿಪಿ ಸೈದುಲು ಅದಾವತ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಪರಾಧದ ತೀವ್ರತೆಯನ್ನು ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಈ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಶ್ವೇತಾ ಮತ್ತು ಕೆನೆತ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಘಟನೆಯು ಕೇವಲ ಒಂದು ಕುಟುಂಬದ ನಾಶವಷ್ಟೇ ಅಲ್ಲ, ಬದಲಾಗಿ ಇಂದಿನ ಯುವಪೀಳಿಗೆ ಮತ್ತು ಕುಟುಂಬ ಸಂಬಂಧಗಳ ನಡುವಿನ ಬಿಕ್ಕಟ್ಟಿನ ಪ್ರತಿಬಿಂಬವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರೀತಿ ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಹೆತ್ತವರನ್ನೇ ಬಲಿ ಪಡೆಯುವ ಮಟ್ಟಿಗೆ ಮನಸ್ಥಿತಿ ಹದಗೆಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ.

Read More
Next Story